ಬೆಂಗಳೂರು
ಮಳೆ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮಕೈಗೊಳ್ಳುವಂತೆ ಸೂಚಿಸಲಾಗಿದೆ. ಪ್ರವಾಹ ಸಂಭಾವ್ಯ ಅನಾಹುತ ಸಂಭವಿಸುವ ಜಿಲ್ಲೆಗಳಲ್ಲಿ ಮೂಲಸೌಕರ್ಯ ಒದಗಿಸಲು ರಾಜ್ಯ ನೈಸರ್ಗಿಕ ವಿಕೋಪ ಉಪಶಮನ ನಿಧಿ ಎಂಬ ಹೆಸರಿನಲ್ಲಿ 201.08 ಕೋಟಿ ರೂ.ಬಿಡುಗಡೆ ಮಾಡಲು ಅನುಮತಿ ನೀಡಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಪ್ರವಾಹ ಸಂತ್ರಸ್ತರಿಗೆ ಪರಿಹಾರ ಕೇಂದ್ರ, ಆಸ್ಪತ್ರೆ, ವಸತಿ, ಶೌಚಾಲಯ, ಸ್ನಾನದ ಮನೆ, ಆಹಾರ, ಆಪ್ತ ಸಲಹಾ ಕೇಂದ್ರಗಳನ್ನು ತೆರೆಯಲು ಈ ನಿಧಿಯಿಂದ 201.08 ಕೋಟಿ ಬಳಸಲು ಸೂಚಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ತೆಗೆದುಕೊಂಡಿರುವ ಕ್ರಮಕ್ಕಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಯಾವ ಯಾವ ಜಿಲ್ಲೆಗಳಲ್ಲಿ ಪ್ರವಾಹಕ್ಕೆ ತುತ್ತಾಗಬಹುದು ಮತ್ತು ಯಾವ ಕ್ರಮಕೈಗೊಳ್ಳಬೇಕು ಎಂಬುದರ ಬಗ್ಗೆ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆದಿದೆ. ಕಳೆದ ಬಾರಿ ಎನ್‍ಡಿಆರ್‍ಎಫ್‍ನಡಿ ರಾಜ್ಯಕ್ಕೆ ಕೇಂದ್ರದಿಂದ 336 ಕೋಟಿ ರೂ. ಬಂದಿತ್ತು. ಈ ಬಾರಿ ಪ್ರಧಾನಿ ನರೇಂದ್ರ ಮೋದಿಯವರು 1054 ಕೋಟಿಗೆ ಹೆಚ್ಚಿಸಿದ್ದಾರೆ. ಈಗಾಗಲೆ 395 ಕೋಟಿ ರೂ.ಯನ್ನು ಎಸ್‍ಡಿಆರ್‍ಎಫ್‍ನಡಿ ನೀಡಿದ್ದಾರೆ. ಪ್ರವಾಹ ಬರುವ ಮೊದಲೇ ಆ ಪ್ರದೇಶಗಳಲ್ಲಿ ಸೌಲಭ್ಯಗಳನ್ನು ಒದಗಿಸಲು, ನಿರಾಶ್ರಿತ ಕೇಂದ್ರ, ಆಸ್ಪತ್ರೆ ಮುಂತಾದವುಗಳನ್ನು ಒದಗಿಸಲು ಮುಂಜಾಗೃತಾ ಕ್ರಮವಾಗಿ ರಾಜ್ಯ ವಿಪತ್ತು ವ್ಯಾಜ್ಯ ನಿಧಿಯಡಿ 201.8 ಕೋಟಿ ರೂ. ನೀಡಿದ್ದಾರೆ ಎಂದರು.
ಕೊರೋನಾ ನಿಯಂತ್ರಣಕ್ಕಾಗಿ ಈಗಾಗಲೇ 278.1 ಕೋಟಿ ರೂ. ಹಣವನ್ನು ಆರೋಗ್ಯ, ಪೊಲೀಸ್ ಇಲಾಖೆಗಳಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಬಿಡುಗಡೆ ಮಾಡಲಾಗಿದೆ. ಈ ಬಗ್ಗೆ ವರದಿಯನ್ನೂ ಕೇಳಲಾಗಿದೆ. ಯಾವ ಬಾಬ್ತುಗಳಿಗೆ ಎಷ್ಟು ಹಣ ಖರ್ಚಾಗಿದೆ ಎಂಬುದರ ಬಗ್ಗೆಯೂ ವರದಿ ಕೇಳಲಾಗಿದೆ ಎಂದು ತಿಳಿಸಿದರು.
ಕಳೆದ ಬಾರಿ ಪ್ರವಾಹ ಉಂಟಾದಾಗ 6.5 ಲಕ್ಷ ಹೆಕ್ಟೇರ್ ನ ಬೆಳೆ ನಷ್ಟವಾಗಿತ್ತು. ಇದರ ಪರಿಹಾರವಾಗಿ 1185 ಕೋಟಿ ರೂಪಾಯಿ ಹಣವನ್ನು ಈಗಾಗಲೇ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ. ಈ ಬಾರಿ ಮುಂಗಾರು ಸಾಧಾರಣ ಮಳೆಯಾಗಲಿದೆ ಎಂದು ತಜ್ಞರು ಹೇಳಿದ್ದಾರೆ. ನಾಲ್ಕೈದು ಜಿಲ್ಲೆಗಳಲ್ಲಿ ಮಾತ್ರ ಮಳೆ ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ.
ಕಳೆದ ಬಾರಿ ಪ್ರವಾಹದಿಂದ ಮನೆ ಕಳೆದುಕೊಂಡವರಿಗೆ 5 ನೇ ಕಂತಿನ ಹಣ ಬಿಡುಗಡೆ ಮಾಡಲಾಗಿದೆ. 32,424 ಜನರಿಗೆ ತಲಾ 1 ಲಕ್ಷ ರೂ., 11,307 ಜನರಿಗೆ ತಲಾ 2 ಲಕ್ಷ, 4572 ಜನರಿಗೆ ತಲಾ 3 ಲಕ್ಷ, 656 ಜನರಿಗೆ ತಲಾ 4 ಲಕ್ಷ ಮತ್ತು 47 ಮಂದಿಗೆ 5 ಲಕ್ಷ ಹಣ ಬಿಡುಗಡೆ ಮಾಡಲಾಗಿದೆ ಎಂದರು.
ಸುಮಾರು 12,677 ಜನ ಮೊದಲ ಕಂತಿನ 1 ಲಕ್ಷ ಪಡೆದೂ ಮನೆ ನಿರ್ಮಾಣದ ಕೆಲಸ ಆರಂಭಿಸಿಲ್ಲ. ಅಂತಹವರಿಗೆ ಜಿಲ್ಲಾಧಿಕಾರಿ, ಪಿಡಿಒಗಳು ಪತ್ರ ಬರೆದು ತಕ್ಷಣವೇ ಮನೆ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳುವಂತೆ ಒತ್ತಾಯ ತರಲು ಸೂಚಿಸಲಾಗಿದೆ. ಈವರೆಗೆ ಮನೆ ನಿರ್ಮಾಣ ಕಾರ್ಯಕ್ಕಾಗಿ 557.67 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಅಶೋಕ ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ