ತುಮಕೂರು
ವಾಲ್ಮೀಕಿ ಸಮಾಜದ ಪ್ರಸನ್ನಾನಂದ ಪುರಿ ಸ್ವಾಮೀಜಿ ಮುಖ್ಯ ಮಂತ್ರಿ ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧ ಅಗೌರವವಾಗಿ, ಉದ್ದಟತನದ ಮಾತುಗಳನ್ನಾಡಿರುವುದನ್ನು ಜಿಲ್ಲೆಯ ಒಕ್ಕಲಿಗರ ಸಂಘಟನೆಗಳ ಮುಖಂಡರು ಖಂಡಿಸಿದ್ದಾರೆ.
ಒಕ್ಕಲಿಗರ ಸಂಘಟನೆಗಳ ಒಕ್ಕೂಟದಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿವಿಧ ಮುಖಂಡರು, ದೇವೇಗೌಡರು ಹಾಗೂ ಕುಮಾರಸ್ವಾಮಿಯವರನ್ನು ಸಮಾಜದ ಪ್ರಮುಖ ನಾಯಕರನ್ನಾಗಿ ಒಕ್ಕಲಿಗರು ಸ್ವೀಕರಿಸಿದ್ದು, ಅವರನ್ನು ಪ್ರಸನ್ನಾನಂದ ಪುರಿ ಸ್ವಾಮೀಜಿ ಕೆಟ್ಟ ಮಾತುಗಳಿಂದ ನಿಂದಿಸಿರುವುದು ಸಮಾಜ ಬಾಂಧವರಿಗೆ ನೋವು ಉಂಟಾಗಿದೆ ಎಂದು ಹೇಳಿದರು.
ಮಂಗಳವಾರ ಬೆಂಗಳೂರಿನಲ್ಲಿ ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಳ ಸಂಬಂಧ ವಾಲ್ಮೀಕಿ ಸಮುದಾಯದವರು ಹೋರಾಟ ಮಾಡುತ್ತಿದ್ದ ಸಂದರ್ಭದಲ್ಲಿ ಪ್ರಸನ್ನಾನಂದ ಪುರಿ ಸ್ವಾಮೀಜಿಯವರು ದೇವೇಗೌಡರು ಹಾಗೂ ಕುಮಾರಸ್ವಾಮಿಯವರ ವಿರುದ್ಧ ಅವಹೇಳನಾಕಾರಿಯ ಮಾತುಗಳನ್ನಾಡಿದರು. ವಾಲ್ಮೀಕಿ ಸಮುದಾಯದ ಮೀಸಲಾತಿ ಹೆಚ್ಚಳದ ಹೋರಾಟದ ಬಗ್ಗೆ ನಮ್ಮ ವಿರೋಧವಿಲ್ಲ.
ಸಂವಿಧಾನಾತ್ಮಕವಾಗಿ ಪರಿಹಾರ ಪಡೆದುಕೊಳ್ಳಲಿ. ಆದರೆ, ಪ್ರತಿಭಟನಾಸಭೆಯಲ್ಲಿ ಪ್ರಸನ್ನಾನಂದ ಪುರಿ ಸ್ವಾಮೀಜಿ ಮುಖ್ಯ ಮಂತ್ರಿ ಹಾಗೂ ಮಾಜಿ ಪ್ರಧಾನಿ ಎಂಬ ಸ್ಥಾನದ ಘನತೆ ಮೀರಿ ಉದ್ದಟತನದಿಂದ ಮಾತನಾಡಿರುವುದು ಸ್ವಾಮೀಜಿಯಾದವರಿಗೆ ಶೋಭೆ ತರುವಂತಾದ್ದಲ್ಲ ಎಂದು ಮುಖಂಡ ಕೆ ಬಿ ಬೋರೇಗೌಡ ಒತ್ತಾಯಿಸಿದರು.
ಪ್ರಸನ್ನಾನಂದ ಪುರಿ ಸ್ವಾಮೀಜಿ ಕೂಡಲೇ ತಮ್ಮ ಮಾತುಗಳನ್ನು ಹಿಂಪಡೆಯಬೇಕು, ಇಲ್ಲವಾದರೆ ಒಕ್ಕಲಿಗರು ಸ್ವಾಮೀಜಿ ವಿರುದ್ಧ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಪ್ರಸನ್ನಾನಂದ ಪುರಿ ಸ್ವಾಮೀಜಿಗಳು ದೇವೇಗೌಡರು ಹಾಗೂ ಕುಮಾರಸ್ವಾಮಿಯವರ ವಿರುದ್ಧ ಆಡಿರುವ ಮಾತುಗಳು ಸರಿಯಲ್ಲ, ಸಮಾಜ-ಸಮಾಜಗಳ ನಡುವೆ ಒಡಕು ಉಂಟು ಮಾಡುವಂತಹ ಸ್ವಾಮೀಜಿಗಳ ಹೇಳಿಕೆಗಳು ಸಮಾಜದ ಸಾಮರಸ್ಯ ಕೆಡಿಸುತ್ತವೆ ಎಂದು ಮುಖಂಡ ನರಸೇಗೌಡರು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ