ತುಮಕೂರು
ಕೊರೊನಾ ಸೋಂಕು ಹರಡದಂತೆ ತಡೆಯಲು ಸರ್ಕಾರ ಲಾಕ್‍ಡೌನ್ ವಿಧಿಸಿ, ಜನರು ರಸ್ತೆಗೆ ಬಾರದÉ ಮನೆಯಲ್ಲೇ ಉಳಿಯಬೇಕು ಎಂದು ಸೂಚಿಸಿದೆ. ಅದರಲ್ಲೂ 60 ವರ್ಷ ಮೇಲ್ಪಟ್ಟವರು ಮನೆಯಿಂದ ಹೊರಬಂದರೆ ಅಪಾಯ ಎಂದು ಹೇಳಲಾಗಿದೆ. ಸಾರ್ವಜನಿಕವಾಗಿ ಜನ ಗುಂಪುಗೂಡದೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಜಾಗೃತಿ ಮೂಡಿಸಲಾಗುತ್ತಿದೆ. ಆದರೂ ಹಲವೆಡೆ ಮುಂಜಾಗ್ರತಾ ಕ್ರಮ ಪಾಲನೆಯಾಗುತ್ತಿಲ್ಲ.
ನಗರದ ಪ್ರಧಾನ ಅಂಚೆ ಕಚೇರಿ ಬಳಿ ಸೋಮವಾರ ವಯೋವೃದ್ಧರು ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ, ಗುಂಪು ಸೇರಿದ್ದರು. ಅಂಚೆ ಕಚೇರಿಯಲ್ಲಿ ವೃದ್ಧಾಪ್ಯ ವೇತನ, ವಿಧವಾ ವೇತನ, ಸಂಧ್ಯಾ ಸುರಕ್ಷಾ, ಅಂಗವಿಕಲರ ಪಿಂಚಣಿ ಹಣ ಪಡೆಯಲು ಗುಂಪು ಸೇರಿದ್ದರು. ಬೆಳಿಗ್ಗೆ 7ಗಂಟೆಯಿಂದಲೂ ಹಲವಾರು ಜನ ಅಂಚೆ ಕಚೇರಿ ಬಳಿ ಸೇರಿ ಕಚೇರಿ ತೆರೆಯುವುದನ್ನು ಕಾಯುತ್ತಿದ್ದರು. ಇವರಾರೂ ಸಾಮಾಜಿಕ ಅಂತರ ಕಾಪಾಡಿಕೊಂಡಿರಲಿಲ್ಲ, ಹಲವರು ಮಾಸ್ಕ್ ಕೂಡಾ ಧರಿಸಿರಲಿಲ್ಲ.
ಬೆಳಿಗ್ಗೆ 10 ಗಂಟೆ ವೇಳೆಗೆ ಕಚೇರಿಗೆ ಬಂದ ಪೋಸ್ಟ್ ಮಾಸ್ಟರ್ ಗುಂಡಪ್ಪನವರು, ಕಚೇರಿ ಎದುರು ಇದ್ದ ಜನರನ್ನು ಕಂಡು ಅಂತರ ಕಾಪಾಡುವಂತೆ ಕೋರಿದರು, ಕಚೇರಿ ಸಿಬ್ಬಂದಿ ಕಳಿಸಿ ಪರಸ್ಪರ ಅಂತರ ಕಾಪಾಡಿಕೊಂಡು ನಿಲ್ಲುವಂತೆ ಸೂಚಿಸಿದರು.
ಇವರ ಪಿಂಚಣಿಯನ್ನು ಪೋಸ್ಟ್‍ಮನ್‍ಗಳು ಅವರವರ ಮನೆಗೇ ತಲುಪಿಸುತ್ತಾರೆ. ಅಲ್ಲಿಯವರೆಗೂ ಕಾಯದೆ ಕಚೇರಿ ಬಳಿಗೆ ಬಂದಿದ್ದಾರೆ. ಹಣದ ತುರ್ತು ಇರಬಹುದು.
ಕೆಲವರು ಬೆಳಿಗ್ಗೆಯೇ ಬಂದು ಕಾಯುತ್ತಾರೆ. ಲಾಕ್‍ಡೌನ್ ಸಂದರ್ಭದಲ್ಲಿ ಇವರು ಹೀಗೆಲ್ಲಾ ಬರಬಾರದು, ಮನೆಯಲ್ಲೇ ಉಳಿಯಲು ಕುಟುಂಬದವರು ಎಚ್ಚರವಹಿಸಬೇಕು ಎಂದು ಪೋಸ್ಟ್ ಮಾಸ್ಟರ್ ಗುಂಡಪ್ಪ ಹೇಳಿದರು.ಲಾಕ್‍ಡೌನ್ ಸಂದರ್ಭದಲ್ಲಿಯೂ ಅಂಚೆ ಕಚೇರಿ ಸೇವೆ ಎಂದಿನಂತೆ ಇರುತ್ತದೆ. ಕೊರೊನಾ ಸೋಂಕು ತಡೆಯ ಕ್ರಮಗಳನ್ನು ಇಲ್ಲಿ ಅನುಸರಿಸಲಾಗುತ್ತದೆ.
ಕಚೇರಿಗೆ ಬರುವ ಸಿಬ್ಬಂದಿ ಹಾಗೂ ಗ್ರಾಹಕರು ಕೈ ತೊಳೆಯಲು ವ್ಯವಸ್ಥೆ ಮಾಡಲಾಗಿದೆ ಎಂದರು.ಪಿಂಚಣಿದಾರರು ಕಚೇರಿ ತೆರೆಯುವ ಮೊದಲೇ ಬಂದು ಕಾಯುವ ಅಗತ್ಯವಿಲ್ಲ. ಅವರ ಮನೆಗೇ ಪೋಸ್ಟ್‍ಮನ್‍ಗಳು ಪಿಂಚಣಿ ಹಣ ತಲುಪಿಸುತ್ತಾರೆ. ಕಚೇರಿ ಅವಧಿಯಲ್ಲಿ ಬಂದು, ಕೊರೊನಾ ತಡೆ ಕ್ರಮಗಳನ್ನು ಕಡ್ಡಯವಾಗಿ ಅನುಸರಿಸಬೇಕು ಎಂದು ಡೆಪ್ಯೂಟಿ ಪೋಸ್ಟ್ ಮಾಸ್ಟರ್ ಎಂ.ಪಿ.ಮಲ್ಲೇಶ್ ಮನವಿ ಮಾಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ