ತುಮಕೂರು
ಇಂದಿನ ಬದುಕಿನ ಶೈಲಿಯಲ್ಲಿ ವೃದ್ಧಾಶ್ರಮಗಳು ಅನಿವಾರ್ಯವಾಗಿಬಿಟ್ಟಿವೆ. ಆಧುನಿಕ ಜೀವನ ಶೈಲಿಯಲ್ಲಿ ಫ್ಯಾಷನ್ ಎಂಬ ಧಾವಂತದ ಜೀವನ ನಡೆಸುತ್ತಿದ್ದು, ಇದಕ್ಕೆ ಅಡ್ಡಿಯಾಗಿವ ಹಿರಿಯರು ನೆಮ್ಮದಿಯ ಜೀವನ ಮಾಡಲು ವೃದ್ಧಾಶ್ರಮಗಳು ಅನಿವಾರ್ಯವಾಗಿವೆ ಎಂದು ಹಿರೇಮಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿಗಳು ವಿಷಾದ ವ್ಯಕ್ತ ಪಡಿಸಿದರು.
ಮೈದಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಎಂ ಪಾಳ್ಯದಲ್ಲಿ ಶ್ರೀ ಮಹಾಲಕ್ಷ್ಮಿ ಸೇವಾ ಸಮಿತಿ ಛಾರಿಟಬಲ್ ಟ್ರಸ್ಟ್ ವತಿಯಿಂದ ನಿರ್ಮಾಣ ಮಾಡಲಾದ ವೃದ್ಧಾಶ್ರಮವನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಇಂದಿನ ದಿನಗಳಲ್ಲಿ ಮಕ್ಕಳಿಗೆ ತನ್ನ ತಂದೆ ತಾಯಿ ಬೇಕು. ಆದರೆ ಮೊಮ್ಮಕ್ಕಳಿಗೆ ಅವರು ಬೇಡ. ಅದಕ್ಕೆ ಕಾರಣ ಜನರೇಷನ್ ಗ್ಯಾಪ್. ಅಂದಿನ ಹಿರಿಯರು ಸಾಂಸ್ಕೃತಿಕತೆಯಲ್ಲಿ ಬೆಳೆದಿರುವಂತ ವರು. ಆದರೆ ಇಂದಿನ ಮಕ್ಕಳು ಪಾಶ್ಚಾತ್ಯ ಸಂಸ್ಕೃತಿಯನ್ನೊಳಗೊAಡು ಬೆಳೆಯುತ್ತಿರುವವರು. ಇವರ ನಡುವೆ ಹೊಂದಾಣಿಕೆ ಆಗುವುದಿಲ್ಲ. ಹಾಗಾಗಿ ವೃದ್ಧಾಶ್ರಮಗಳು ಹುಟ್ಟಿಕೊಳ್ಳುತ್ತಿವೆ ಎಂದು ವಿಷಾಧ ವ್ಯಕ್ತಪಡಿಸಿದರು.
ವೃದ್ಧಾಶ್ರಮ ಬೇಕೋ ಬೇಡ್ವೋ ಎಂಬುದು ಜಿಜ್ಞಾಸದ ವಿಷಯ. ಇಂದು ಸರಿ ಎಂದಿದ್ದು ತಪ್ಪಾಗುತ್ತೆ, ತಪ್ಪು ಎಂದಿದ್ದು ಸರಿಯಾಗುತ್ತೆ . ಹಾಗಾಗಿ ವೃದ್ಧಾಶ್ರಮ ಬೇಕು ಬೇಡ ಎಂಬುದು ಎರಡನೇ ಪ್ರಶ್ನೆ. ಆದರೆ ಇಂದು ವೃದ್ಧಾಶ್ರಮ ಎಂಬುದು ಅವಶ್ಯಕವಾಗಿದೆ. ಸಮಸ್ಯೆ ಎಂಬುದು ಸಹಸ್ರಮುಖಿ. ಒಂದೇ ತರನಾದ ಸಮಸ್ಯೆ ನೋಡಿದಾಗ ವೃದ್ಧಾಶ್ರಮ ಬೇಡ ಎನಿಸುತ್ತದೆ. ಆದರೆ ಸಮಸ್ಯೆಯ ವಿವಿಧ ಮುಖಗಳನ್ನು ನೋಡಿದಾಗ ಬೇಕು ಎನಿಸುತ್ತದೆ. ಈ ನಿಟ್ಟಿನಲ್ಲಿ ಅವಶ್ಯಕವಿದ್ದವರು ವೃದ್ಧಾಶ್ರಮ ಸೇರಿಕೊಳ್ಳಬಹುದಾಗಿದೆ ಎಂದರು.
ಈ ಆಶ್ರಮವನ್ನು ವೃದ್ಧಾಶ್ರಮ ಎನ್ನುವುದರ ಬದಲಾಗಿ ವಾನಪ್ರಸ್ಥಾಶ್ರಮ ಎನ್ನುವುದು ಲೇಸು ಎಂದು ಮರುನಾಮಕರಣ ಮಾಡಿದ್ದು, ಗೃಹಸ್ಥಾಶ್ರಮ ಮುಗಿಸಿದ ನಂತರ ಸನ್ಯಾಸಾಶ್ರಮ ಸೇರುವ ನಡುವೆ ವಾನಪ್ರಸ್ಥಾಶ್ರಮ ಅನುಭವಿಸಬೇಕಾಗುತ್ತದೆ. ಯಾರಿಗೆ ಮನೆಯಲ್ಲಿರುವುದು ಸಾಕಾಗಿರುತ್ತದೆಯೇ, ಮನೆಯಲ್ಲಿ ಇರಲು ಆಗುವುದಿಲ್ಲವೋ ಅಂತವರು ಇಲ್ಲಿ ಬಂದು ನೆಮ್ಮದಿ ಜೀವನ ಮಾಡಬಹುದಾಗಿದೆ. ಎಂದರಲ್ಲದೆ, ಮಗುವಾಗಿ ಹುಟ್ಟಿದವರು ಮಗುವಾಗಿಯೇ ಸಾವನ್ನಪ್ಪುತ್ತಾರೆ. ಮಧ್ಯದಲ್ಲಿ ಪರಾವಲಂಬಿಯಾದಾಗ ತಾಯಿಯಾದವಳು ಸಲಹುತ್ತಾಳೆ. ಇಲ್ಲಿ ವಾನಪ್ರಸ್ಥಾಶ್ರಮದಲ್ಲಿಯೂ ತಾಯಿಯಂತೆಯೇ ಸಲಹುತ್ತಾರೆ ಎಂದು ತಿಳಿಸಿದರು.
ವೃದ್ಧ ದೇವೋ ಭವ ಎಂಬ ನುಡಿಯಂತೆ ವೃದ್ಧರಿಗಾಗಿಯೇ ನಿರ್ಮಾಣ ಮಾಡಲಾಗಿದ್ದು, ಇದು ಮೈದಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವಂತೆ ಪಂಚಾಯಿತಿ ವತಿಯಿಂದ ಜವಾಬ್ದಾರಿಯನ್ನು ತೆಗೆದುಕೊಂಡು ಇಲ್ಲಿಗೇ ಬೇಕಾದ ಸೌಲಭ್ಯಗಳನ್ನು ಒದಗಿಸಿಕೊಡಿ ಎಂದು ಮನವಿ ಮಾಡಿದರು. ಅಲ್ಲದೆ ಇಲ್ಲಿ ಹೈಟೆಕ್ ಮಾದರಿಯಲ್ಲಿ ನಿರ್ಮಾಣ ಮಾಡಲಾಗಿದ್ದು, ಅವಶ್ಯಕವಿದ್ದವರು ಮಾತ್ರ ಇಲ್ಲಿ ಸೇರಿಕೊಂಡು ಉತ್ತಮ ಜೀವನ ನಡೆಸಿ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಸಂಸ್ಥಾಪಕ ಧರ್ಮದರ್ಶಿ ಎನ್.ಆರ್.ಜಗಧೀಶ್ ಅವರು, 2002ರಲ್ಲಿಯೇ ವೃದ್ಧಾಶ್ರಮ ನಿರ್ಮಾಣ ಮಾಡಬೇಕು ಎಂಬ ಉದ್ದೇಶದಿಂದ ಜಾಗವನ್ನು ಖರೀದಿ ಮಾಡಲಾಯಿತು. ಆದರೆ ಕಾರಣಾಂತರಗಳಿಂದ ಮಾಡಲು ಆಗಿರಲಿಲ್ಲ. ಇದೀಗ ಹಲವರ ಪ್ರೋತ್ಸಾಹ ಹಾಗೂ ಬೆಂಬಲದಿಂದ ಒಂದೇ ವರ್ಷದಲ್ಲಿ ಕಟ್ಟಡ ಕಾಮಗಾರಿ ಪೂರ್ಣ ಮಾಡಿದ್ದೇವೆ. ಬೆಂಗಳೂರಿನ ಸಪ್ತಗಿರಿ ವಿದ್ಯಾಸಂಸ್ಥೆಯ ದಯಾನಂದ್ ಎಂಬುವವರು ಹೆಚ್ಚಿನ ಸಹಕಾರ ನೀಡಿದ್ದಾರೆ.
ವಿಶ್ವನಾಥಶೆಟ್ಟರು, ಆರ್.ಜೆ.ಅನಂತರಾಜು ಅವರ ಪ್ರೋತ್ಸಾಹ ಸಾಕಷ್ಟಿದೆ. ಅಲ್ಲದೆ ಅನೇಕ ಜನ ದಾನಿಗಳು ದಾನ ಮಾಡಿದ್ದುದರ ಫಲವಾಗಿ ಇಂದು ಆಶ್ರಮ ಉದ್ಘಾಟನೆಯಾಗಿದೆ ಎಂದು ತಿಳಿಸಿದರು.
ಮಹಾಲಕ್ಷ್ಮಿ ದೇವಸ್ಥಾನದ ಟ್ರಸ್ಟ್ ವತಿಯಿಂದ ಸರಿಸುಮಾರು 1 ಕೋಟಿ ರೂಗಳ ಹಣವನ್ನು ದಾನವಾಗಿ ನೀಡಿದ್ದಾರೆ. ನಾರಾಯಣ ಎಂಬ ರೈತ ತನ್ನು ಜಮೀನಿನಿಂದ ಬೋರ್‌ವೆಲ್ ನೀರನ್ನು ಪೈಪ್ ಮುಖಾಂತರ ಇಲ್ಲಿಗೆ ಹರಿಸಿದ್ದಾರೆ. ಇದೀಗ ಮೈದಾಳ ಗ್ರಾಮ ಪಂಚಾಯಿತಿ ವತಿಯಿಂದ ಕುಡಿಯುವ ನೀರು ಕೊಡುವುದಾಗಿ ಒಪ್ಪಿಕೊಂಡಿದ್ದಾರೆ. ಅಲ್ಲದೆ ಹಲವು ದಾನಿಗಳು ಆಶ್ರಮಕ್ಕೆ ಬೇಕಾದ ವಸ್ತುಗಳನ್ನು ನೀಡಿದ್ದಲ್ಲದೆ, ಇನ್ನೂ ಇತರೆ ಅವಶ್ಯಕವಿರುವ ವಸ್ತುಗಳನ್ನು ನೀಡುವುದಾಗಿ ಒಪ್ಪಿಕೊಂಡಿದ್ದಾರೆ ಎಂದರು.
ಇದೇ ವೇಳೆ ಟಿಜಿಎಂಸಿ ಬ್ಯಾಂಕಿನ ಉಪಾಧ್ಯಕ್ಷ ದಿವ್ಯಾನಂದಮೂರ್ತಿ ಮಾತನಾಡಿ, ನಮ್ಮ ಸಂಸ್ಕೃತಿಯಿಂದ ನೋಡವುದಾದರೆ ವೃದ್ಧಾಶ್ರಮ ಬೇಕಾಗಿರಲಿಲ್ಲ. ಆದರೆ ಇಂದಿನ ಆಧುನಿಕ ಜೀವನದಲ್ಲಿ ವೃದ್ಧಾಶ್ರಮಗಳು ಬೇಕಾಗಿವೆ. ಈ ನಿಟ್ಟಿನಲ್ಲಿ ಉತ್ತಮ ಗುಣಮಟ್ಟದ ವೃದ್ಧಾಶ್ರಮ ನಿರ್ಮಾಣ ಮಾಡಿರುವುದು ಸಂತಸದ ವಿಷಯ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮೈದಾಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೆ.ಜಲಜಾಕ್ಷಿ, ಉಪಾಧ್ಯಕ್ಷ ಕಾಂತರಾಜು, ಶ್ರೀ ಮಹಾಲಕ್ಷ್ಮಿ ಛಾರಿಟಬಲ್ ಟ್ರಸ್ಟ್ನ ಅಧ್ಯಕ್ಷ ರಾಮಚಂದ್ರಶೆಟ್ಟಿ ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಸುರೇಂದ್ರ ನಡೆಸಿಕೊಟ್ಟರು. ವಂದನಾರ್ಪಣೆಯನ್ನು ಧರ್ಮದರ್ಶಿಗಳಾದ ಶಾರದ ರುದ್ರಪ್ರಕಾಶ್ ನೆರವೇರಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ