ಕೇಂದ್ರದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ರಚನೆ

ಚಿತ್ರದುರ್ಗ:

        ಒನಕೆ ಓಬವ್ವಳ ನಾಡು ಚಿತ್ರದುರ್ಗದಿಂದ ಒನಕೆ ತಗೊಂಡು ಬಿಜೆಪಿ. ವಿರುದ್ದ ಚುನಾವಣೆಯಲ್ಲಿ ಹೋರಾಡಿ ಬಿಜೆಪಿ.ಮುಕ್ತ ಕರ್ನಾಟಕ ಮಾಡುವುದೇ ನಮ್ಮ ಮುಂದಿರುವ ಗುರಿ ಎಂದು ವಿಧಾನಪರಿಷತ್ ಸದಸ್ಯ ಮಾಜಿ ಕೇಂದ್ರ ಸಚಿವ ಸಿ.ಎಂ.ಇಬ್ರಾಹಿಂ ಕೋಮುವಾದಿಗಳಿಗೆ ಎಚ್ಚರಿಕೆ ನೀಡಿದರು.

         ಬೆಂಗಳೂರಿನಿಂದ ಬಿಜಾಪುರಕ್ಕೆ ಹೊರಟಿದ್ದ ಅವರು ಮಂಗಳವಾರ ಚಿತ್ರದುರ್ಗದಲ್ಲಿ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಆರ್.ಕೆ.ಸರ್ದಾರ್‍ರವರ ನಿವಾಸಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದರು.

        ನಾಲ್ಕು ಉಪಚುನಾವಣೆಯಲ್ಲಿ ಮತದಾರರು ಜಾತಿ, ಮತ, ಪಂಥ ಎಲ್ಲವನ್ನು ಮರೆತು ಕಾಂಗ್ರೆಸ್ ಮತ್ತು ಜೆಡಿಎಸ್.ಮೈತ್ರಿ ಪಕ್ಷಗಳ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದಾರೆ. ಶಿವಮೊಗ್ಗ ಪಾರ್ಲಿಮೆಂಟ್ ಉಪಚುನಾವಣೆಯಲ್ಲಿ ಮಾತ್ರ ಬಿಜೆಪಿ.ಗೆದ್ದುಕೊಂಡಿದೆ. ಬಸವಾದಿ ಶರಣರು, ಸೂಫಿ ಸಂತರು, ಕುವೆಂಪು ಕಂಡ ಕರ್ನಾಟಕವನ್ನು ನಿರ್ಮಾಣ ಮಾಡುತ್ತೇವೆ. ಮುಂದಿನ ಪಾರ್ಲಿಮೆಂಟ್ ಚುನಾವಣೆಯಲ್ಲಿ ಕೋಮುವಾದಿ ಬಿಜೆಪಿ.ಯನ್ನು ಸೋಲಿಸಿ ಕೇಂದ್ರದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದೇ ತರುತ್ತೇವೆ ಎಂದು ಭವಿಷ್ಯ ನುಡಿದರು. 

       ನಾಲ್ಕುವರೆ ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ.ಹಿಂದು-ಮುಸಲ್ಮಾನರ ವಿರುದ್ದ ಕೋಮು ವೈಷಮ್ಯವನ್ನು ಬಿತ್ತುತ್ತಿದೆ. ನೋಟ್‍ಬ್ಯಾನ್, ಜಿ.ಎಸ್.ಟಿ., ರಫೇಲ್ ಹಗರಣ, ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆ ಏರಿಕೆ ಮಾಡಿ ಜನಸಾಮಾನ್ಯರು ತತ್ತರಿಸುವಂತೆ ಮಾಡಿದೆ. ಬಿಜೆಪಿ.ಗೆ ಅಧಿಕಾರ ನೀಡಿದ ಜನ ಈಗ ಪಶ್ಚಾತಾಪಪಡುತ್ತಿದ್ದಾರೆ. ಹಾಗಾಗಿ 2019 ರ ಲೋಕಸಭಾ ಚುನಾವಣೆಯಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯುವುದು ನಿಶ್ಚಿತ. ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಈಗಿನ ಸಂಸದರೆ ಸ್ಪರ್ಧಿಸಲಿದ್ದಾರೆ. ಸರಳ, ಸಜ್ಜನಿಕೆಗೆ ಹೆಸರಾಗಿರುವ ಅವರು ಗೆಲ್ಲುವುದರಲ್ಲಿ ಅನುಮಾನವಿಲ್ಲ. ಪ್ರಧಾನಿ ಮೋದಿ ಕೊನೆ ದಿನಗಳನ್ನು ಎಣಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

         ದೇಶಕ್ಕೆ ಸ್ವಾತಂತ್ರ ತಂದುಕೊಟ್ಟ ಗಾಂಧಿಯನ್ನು ಮರೆತ ಪ್ರಧಾನಿ ನರೇಂದ್ರಮೋದಿ ಸರ್ದಾರ್‍ವಲ್ಲಭಾಯಿ ಪಟೇಲ್‍ರವರ ಪ್ರತಿಮೆ ಲೋಕಾರ್ಪಣೆ ಮಾಡಿದ್ದಾರೆ. ಪಂಚವಾರ್ಷಿಕ ಯೋಜನೆಯನ್ನು ಜಾರಿಗೆ ತಂದ ದೇಶದ ಮೊದಲ ಪ್ರಧಾನಿ ಜವಾಹರಲಾಲ್‍ನೆಹರುರವರ ನೀತಿಯನ್ನು ಮೋದಿ ಅನೀತಿಯನ್ನಾಗಿಸಿದ್ದಾರೆ. ಹಾಗಾಗಿ ಕೇಂದ್ರಕ್ಕೆ ದಿಕ್ಕು ದೆಸೆಯಿಲ್ಲದಂತಾಗಿದೆ. ಹಿಂದಿನ ಕಾಲದಲ್ಲಿ ಹಿಂದೆ ಗುರುವಿದ್ದ. ಮುಂದೆ ಗುರಿಯಿತ್ತು. ಈಗ ಗುರುವು ಇಲ್ಲ. ಗುರಿಯೂ ಇಲ್ಲವೆಂಬಂತಾಗಿದೆ ನಮ್ಮ ದೇಶದ ಪರಿಸ್ಥಿತಿ. ರಾಜ್ಯದಲ್ಲಿರುವ ಮೈತ್ರಿ ಸರ್ಕಾರ ಐದು ವರ್ಷಗಳನ್ನು ಪೂರ್ಣಗೊಳಿಸಲಿದೆ.

       ದೋಸ್ತಿ ಸರ್ಕಾರಕ್ಕೆ ಯಾವ ಅಪಾಯವೂ ಇಲ್ಲ. ಎಲ್ಲಿಯೂ ಬ್ರೇಕ್ ಅಗುವುದಿಲ್ಲ. ಸಮ್ಮಿಶ್ರ ಸರ್ಕಾರ ಉರುಳುತ್ತದೆಂದು ವಿರೋಧಿಗಳು ಸುಮ್ಮನೆ ಬಾಯಿ ಬಿಟ್ಟುಕೊಂಡು ನೋಡುತ್ತಿರಬೇಕಷ್ಟೆ ಎಂದು ಬಿಜೆಪಿ.ಗೆ ಕುಟುಕಿದರು.ಗದುಗಿನ ಲಿಂಗೈಕ್ಯ ತೋಂಟದಾರ್ಯ ಸ್ವಾಮಿಗಳ ಸ್ಮರಣೆಯನ್ನು ಸಿಂದಗಿಯಲ್ಲಿ ಮುಸ್ಲಿಂರು ಆಚರಿಸುತ್ತಿರುವುದು ಕರ್ನಾಟಕದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿ. ಹಾಗಾಗಿ ಬಿಜಾಪುರದ ಕಾರ್ಯಕ್ರಮ ಮುಗಿಸಿಕೊಂಡು ಸಿಂಧಗಿಗೆ ತೆರಳುತ್ತೇನೆ ಎಂದು ಹೇಳಿದರು.

         ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಆರ್.ಕೆ.ಸರ್ದಾರ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಿ . ಎನ್ .ಮೈಲಾರಪ್ಪ , ಕಾಂಗ್ರೆಸ್ ವಕ್ತಾರ ಆರ್.ಶೇಷಣ್ಣಕುಮಾರ್, ಜಿಲ್ಲಾ ಕಾಂಗ್ರೆಸ್ ಎಸ್.ಸಿ.ವಿಭಾಗದ ರವಿಕುಮಾರ್, ಮೆಹಬೂಬ್‍ಖಾನ್ ಇನ್ನು ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ