ಜಿಲ್ಲಾ ಪತ್ರಿಕೆಗಳು ತಮ್ಮ ಸ್ವಂತಿಕೆ ಉಳಿಸಿಕೊಂಡಿವೆ : ಕುಂ.ವೀರಭದ್ರಪ್ಪ

ದಾವಣಗೆರೆ

         ಸ್ವಂತಿಕೆ ಮತ್ತು ಪಾರದರ್ಶಕತೆ ಉಳಿದುಕೊಂಡಿರುವುದೇ ಸ್ಥಳೀಯ, ಜಿಲ್ಲಾ ಪತ್ರಿಕೆಗಳಿಂದ ಎಂದು ಖ್ಯಾತ ಸಾಹಿತಿ ಕುಂ.ವೀರಭದ್ರಪ್ಪ ನುಡಿದರು.

        ದಾವಣಗೆರೆಯ ರೋಟರಿ ಬಾಲಭವನದಲ್ಲಿ ಆಯೋಜಿಸಿದ್ದ ಪ್ರಜಾಪ್ರಗತಿ ಪ್ರಾದೇಶಿಕ ದಿನಪತ್ರಿಕೆಯ ದಾವಣಗೆರೆ ಆವೃತ್ತಿಯ 15ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸ್ಥಳೀಯ ಸಮಸ್ಯೆಗಳನ್ನು ನೇರವಾಗಿ ಓದುಗರಿಗೆ ತಲುಪಿಸುವ, ಆಡಳಿತಕ್ಕೆ ಚುರುಕು ಮುಟ್ಟಿಸುವ ಕೆಲಸವನ್ನು ಸ್ಥಳೀಯ ಪತ್ರಿಕೆಗಳು ಯಶಸ್ವಿಯಾಗಿ ನಿರ್ವಹಿಸುತ್ತಾ ಬಂದಿವೆ. ಅದರಲ್ಲಿ ಪ್ರಮುಖವಾಗಿ ತುಮಕೂರು ಸೇರಿದಂತೆ 5 ಜಿಲ್ಲೆಗಳಿಂದ ಪ್ರಕಟಿತವಾಗುತ್ತಿರುವ ಪ್ರಜಾಪ್ರಗತಿ, ಆಂದೋಲನ ಪ್ರಮುಖ ಪಾತ್ರ ವಹಿಸಿವೆ.

           ಇನ್ನೂ ಕೆಲವು ಗುಣಾತ್ಮಕ ಜಿಲ್ಲಾ ಪತ್ರಿಕೆಗಳು ಕಾರ್ಯ ನಿರ್ವಹಿಸುತ್ತಿದ್ದು, ಪ್ರಜಾಪ್ರಗತಿಯನ್ನು ನಾನು ತುಂಬಾ ಹತ್ತಿರದಿಂದ ನೋಡಿದ್ದೇನೆ ಎಂದರು.ಇತ್ತೀಚಿನ ವಿದ್ಯಮಾನಗಳನ್ನು ಗಮನಿಸಿದರೆ ಪತ್ರಿಕೆಗಳ ಮಾಲೀಕತ್ವವನ್ನೇ ಮತ್ತೊಬ್ಬರು ಕೊಂಡುಕೊಳ್ಳುವ ವ್ಯವಹಾರಗಳು ನಡೆಯುತ್ತಿವೆ. ಕೆಲವು ಪಕ್ಷಗಳ ಮುಖವಾಣಿಯಾಗಿ ಇಂತಹ ಪತ್ರಿಕೆಗಳು ಕಾರ್ಯನಿರ್ವಹಿಸುತ್ತವೆ. ಬಂಡವಾಳಶಾಹಿಗಳ ಕೈಗಳಿಗೆ ಪತ್ರಿಕೆಗಳು ಸಿಲುಕಿದರೆ ಏನೆಲ್ಲಾ ಆಗುತ್ತದೆ ಎಂಬುದು ನಮ್ಮೆಲ್ಲರಿಗೂ ಗೊತ್ತು. ಅಂತಹ ಸಂದಿಗ್ಧ ವಾತಾವರಣ ಮಾಧ್ಯಮ ಕ್ಷೇತ್ರದಲ್ಲಿ ನಡೆಯುತ್ತಿರುವುದು ಆತಂಕಕಾರಿ ವಿಷಯ ಎಂದರು.

         ಈ ದೇಶದ ಚಳವಳಿಗೆ ಪತ್ರಿಕೆಗಳು ಏನೆಲ್ಲಾ ಕೊಡುಗೆ ನೀಡಿವೆ ಎಂಬುದನ್ನು ನಾವು ಗಮನಿಸಬೇಕು. ಚಳವಳಿಗೆ ಪ್ರೇರಣೆ ನೀಡಿದ್ದೇ ಪತ್ರಿಕೆಗಳು. ಕಾಲ ಬದಲಾದಂತೆ ಮಾಧ್ಯಮ ಕ್ಷೇತ್ರವೂ ಬದಲಾಗುತ್ತಿದ್ದು, ಜಾಹಿರಾತನ್ನು ಅವಲಂಬಿಸುವುದು ಈಗ ಅನಿವಾರ್ಯವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಸ್ಥಳೀಯ ಓದುಗರು ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಅದೇ ರೀತಿ ಪತ್ರಕರ್ತನಾದವನು ಸಹ ಸದಾ ಓದುವುದರಲ್ಲಿ ಮಗ್ನರಾಗಿರಬೇಕು ಎಂದರು.

           ನಮ್ಮ ಸಮಾಜದಲ್ಲಿ ಅನೇಕ ಸಮಸ್ಯೆಗಳಿವೆ. ಈ ಸಮಸ್ಯೆಗಳಲ್ಲಿ ಶೋಷಿತರ ಸಮಸ್ಯೆಯೂ ಒಂದು. ಇವರಿಗೆ ದನಿ ಬಂದದ್ದು 12ನೇ ಶತಮಾನದಲ್ಲಿ ಹಾಗೂ ಕನಕದಾಸರ ಕಾಲದಲ್ಲಿ. 12ನೇ ಶತಮಾನದ ಬಸವಣ್ಣ ಶೋಷಿತವರ್ಗಕ್ಕೆ ಒಂದು ದಾರಿ ತೋರಿಸಿದರು. ಅಲ್ಲಿಯವರೆಗೆ ಅವರೆಲ್ಲ ಹೊರಗೆ ಬರದಂತೆಯಿದ್ದರು. ಅದೇ ರೀತಿ ಇಂದು ಸಹ ಪತ್ರಿಕೆಗಳು ಬೆಳವಣಿಗೆಯಾದಂತೆ ಶೋಷಿತರನ್ನು ಗುರುತಿಸುವುದು ಸಾಧ್ಯವಾಗಿದೆ ಎಂದರು.

          ನಮ್ಮ ಸಮಾಜವನ್ನು ಗಮನಿಸಿದಾಗ ಬಹಳಷ್ಟು ಪ್ರತಿಭಾವಂತರು ಶೋಷಿತ ಸಮುದಾಯದಿಂದ ಬರುತ್ತಿದ್ದಾರೆ. ಅಂತಹ ಅವಕಾಶಗಳು ಈಗ ಸಿಗುತ್ತಿವೆ. ಪ್ರಜಾಪ್ರಗತಿ ದಿನಪತ್ರಿಕೆಯ ಸಂಪಾದಕರಾದ ಎಸ್.ನಾಗಣ್ಣ ಅವರೂ ಸಹ ಹಿಂದುಳಿದ ಸಮುದಾಯದಿಂದ ಬಂದವರು. ಆದರೆ ಅವರು ಸುಮ್ಮನೆ ಕೂರಲಿಲ್ಲ. ಕಷ್ಟಪಟ್ಟು ಬೆಳೆದರು. ಸಿದ್ದಗಂಗಾ ಶ್ರೀಗಳ ಸಂಪರ್ಕ ಬೆಳೆಸಿಕೊಂಡರು. ಅವರ ಆಶೀರ್ವಾದದಿಂದ ಮುಂದೆ ಬಂದರು. ನಾನು ಸಹ ಮಠದ ವಿದ್ಯಾರ್ಥಿಯೇ, ಹಾಗಾಗಿ ನಾಗಣ್ಣನವರನ್ನು ನಾನು ಹೆಚ್ಚು ಬಲ್ಲೆ ಎಂದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap