ಆನ್ ಲೈನ್ ಮಾರಾಟ : ಮಾರಕವೋ ಪೂರಕವೋ…!

ತುಮಕೂರು:

    ಕೊರೊನಾ ಲಾಕ್‍ಡೌನ್ ನಂತರ ಬಹಳಷ್ಟು ಕಡೆ ಆನ್‍ಲೈನ್ ಶಾಪಿಂಗ್ ಹೆಚ್ಚು ಮಹತ್ವ ಪಡೆದುಕೊಂಡಿದೆ. ಇದಕ್ಕೂ ಮುನ್ನ ಕೆಲವೆ ವರ್ಗಕ್ಕೆ ಸೀಮಿತವಾಗಿದ್ದ ಆನ್‍ಲೈನ್ ಖರೀದಿ ಈಗ ಮತ್ತಷ್ಟು ವಿಸ್ತಾರಗೊಂಡಿದೆ. ಈ ಬಗ್ಗೆ ಪರ ವಿರೋಧದ ವ್ಯಾಖ್ಯಾನಗಳು ಅಷ್ಟೇ ವೇಗ ಪಡೆದುಕೊಂಡಿವೆ.

    ಎಲ್ಲೋ ಕುಳಿತು ವ್ಯಾಪಾರ ಮಾಡುವ, ಯಾರೋ ಲಾಭ ಗಳಿಸುವ ಆನ್‍ಲೈನ್ ವ್ಯವಸ್ಥೆಯನ್ನು ನಾವೇಕೆ ಪ್ರೋತ್ಸಾಹಿಸಬೇಕು ಎನ್ನುವ ಚಿಂತಕರ ಪಡೆಯೂ ಈಗ ಹೆಚ್ಚು ಜಾಗೃತವಾಗುತ್ತಿದೆ. ಅದಕ್ಕೆ ಕೆಲವು ಕಾರಣಗಳನ್ನು ನೀಡುತ್ತಿದ್ದಾರೆ. ಕೊರೊನಾ ಲಾಕ್‍ಡೌನ್ ಸಂದರ್ಭದಲ್ಲಿ ಅಂಗಡಿ ಮಳಿಗೆಗಳು ಬಾಗಿಲು ಹಾಕಿದವು. ಮೂರು ತಿಂಗಳ ಕಾಲ ಇವರಿಗೆ ಯಾವುದೇ ವ್ಯಾಪಾರ ಇಲ್ಲವಾಯಿತು. ಬಾಡಿಗೆ ಪಾವತಿಸಿ ಅಂಗಡಿ ಮಳಿಗೆ ನಡೆಸುವವರು ಹೈರಾಣಾಗಿ ಹೋದರು. ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿಯೂ ಅದೆಷ್ಟೋ ಕಾಳಜಿಯುಳ್ಳ ಅಂಗಡಿಯವರು ಸಂಕಷ್ಟದಲ್ಲಿರುವ ಜನರ ನೆರವಿಗೆ ಬಂದರು.

    ಉಪಹಾರ ನೀಡಿದರು, ದವಸ ಧಾನ್ಯಗಳನ್ನು ವಿತರಿಸಿದರು. ಅಂದರೆ, ಸಂಕಷ್ಟ ಪರಿಸ್ಥಿತಿಯಲ್ಲಿ ಅವರೂ ನೆರವಾದರು. ಈಗಷ್ಟೇ ವ್ಯಾಪಾರ ವಹಿವಾಟು ಸ್ವಲ್ಪ ಮಟ್ಟಿಗೆ ಚೇತರಿಸಿಕೊಳ್ಳುತ್ತಿದೆ. ಆದರೆ, ನಾಲ್ಕೈದು ತಿಂಗಳ ಕಾಲ ಇವರೆಲ್ಲ ಸಂಕಷ್ಟಕ್ಕೆ ಸಿಲುಕಿದ್ದನ್ನು ನಾವು ನೆನಪಿಸಿಕೊಳ್ಳಬೇಕು. ಈ ಎಲ್ಲಾ ಹಿನ್ನೆಲೆಯಲ್ಲಿ ಸ್ಥಳೀಯವಾಗಿಯೇ ಇರುವ ಅಂಗಡಿಗಳಲ್ಲಿ ವ್ಯಾಪಾರ ವಹಿವಾಟು ನಡೆಸಿದರೆ ಅವರಿಗೂ ಅನುಕೂಲವಾಗುತ್ತದೆ ಜೊತೆಗೆ ನಮ್ಮವರನ್ನೇ ಪ್ರೋತ್ಸಾಹಿಸಿದಂತ ಹೆಮ್ಮೆಯೂ ನಮಗಿರುತ್ತದೆ ಎಂಬುದು ಹಲವರ ಅನಿಸಿಕೆ.

    ಆನ್‍ಲೈನ್ ಮೂಲಕ ಸ್ವಲ್ಪ ಮಟ್ಟಿಗೆ ದರ ಕಡಿಮೆ ಇರಬಹುದು. ಆದರೆ ನಮ್ಮಲ್ಲಿರುವ ಅಂಗಡಿಗಳೂ ಸಹ ದರ ಇಳಿಕೆ ಮಾಡಿವೆ. ಯಾವುದೇ ವಸ್ತುಗಳನ್ನು ಕೊಳ್ಳುವಾಗ ನಮಗೆ ಇಷ್ಟವಾದ, ಬೇಕಾದ ವಸ್ತುಗಳಷ್ಟೇ ನಮಗೆ ಮುಖ್ಯ. ಹತ್ತಿರದಿಂದ ನೋಡಿ ಅದನ್ನು ಖರೀದಿಸಿದಾಗ ಸಿಗುವ ತೃಪ್ತಿ ಆನ್‍ಲೈನ್ ಮೂಲಕ ಖರೀದಿಸಿದಾಗ ಸಿಗುವುದಿಲ್ಲ. ಜೊತೆಗೆ ಎಲ್ಲಿಂದಲೋ ಬರುವ ವಸ್ತುಗಳು ನಮ್ಮ ನಿರೀಕ್ಷೆಗೆ ತಕ್ಕಂತೆ ಇವೆ ಎಂಬ ಖಾತರಿಯೂ ಇರುವುದಿಲ್ಲ.

    ಒಂದು ಅಂಗಡಿ ಎಂದರೆ ಅಲ್ಲಿ ನಾಲ್ಕಾರು ಜನ ಉದ್ಯೋಗಕ್ಕೆ ಇರುತ್ತಾರೆ. ಕೊರೊನಾ ಸಂಕಷ್ಟದ ಸಮಯದಲ್ಲಿ ಕೂಲಿ ಕಾರ್ಮಿಕರಿಗೆ ಉದ್ಯೋಗವಿಲ್ಲದೆ ಮನೆ ಸೇರುವಂತಾಯಿತು. ಈಗಷ್ಟೇ ಅಂಗಡಿ ಮಳಿಗೆಗಳ ವ್ಯಾಪಾರ ವಹಿವಾಟು ನಡೆಯುತ್ತಿರುವುದರಿಂದ ಮರಳಿ ಉದ್ಯೋಗಿಗಳು ಸೇರ್ಪಡೆಯಾಗುತ್ತಿದ್ದಾರೆ. ಇವರಿಗೆಲ್ಲ ಸಂಬಳ ಕೊಡಬೇಕು, ಬಾಡಿಗೆ ಪಾವತಿಸಬೇಕು, ವಿದ್ಯುತ್ ಬಿಲ್, ನಿರ್ವಹಣೆ ಇತ್ಯಾದಿ ಹಲವು ಖರ್ಚುಗಳು ಇರುತ್ತವೆ. ಇವನ್ನೆಲ್ಲ ಗಮನಿಸಿದರೆ ಸ್ಥಳೀಯವಾಗಿಯೇ ನಮ್ಮವರಿಗೆ ಉದ್ಯೋಗ ದೊರಕಿಸಿಕೊಡುವ ಅಂಗಡಿ ಮಳಿಗೆಗಳನ್ನು ನಾವೇಕೆ ಪ್ರೋತ್ಸಾಹಿಸಬಾರದು ಎನ್ನುತ್ತಾರೆ ತುಮಕೂರಿನ ಸಾಮಾಜಿಕ ಅಭಿವೃದ್ಧಿ ಚಿಂತಕ ಸಿ.ಸಿ. ಪಾವಟೆ.

    ಯಾವುದೇ ವಸ್ತುಗಳಿಗೆ ಬೇಡಿಕೆ ಹೆಚ್ಚಾದಂತೆ ಪೂರೈಕೆಯ ವ್ಯವಸ್ಥೆಗಳು ತಂತಾನೆ ವೃದ್ಧಿಯಾಗುತ್ತವೆ. ಬೇಡಿಕೆ ಕುಸಿದರೆ ಇರುವ ಸ್ಟಾಕ್ ಮೇಲೆಯೂ ಪರಿಣಾಮ ಬೀರುತ್ತದೆ. ಅಂತಿಮವಾಗಿ ರೈತರು ಮತ್ತು ಗ್ರಾಹಕರ ನಡುವೆಯೂ ಅಸಮತೋಲನ ಉಂಟಾಗುತ್ತದೆ. ನಮ್ಮ ಸ್ಥಳೀಯವಾಗಿಯೇ ಇರುವ ಯಾವುದೇ ಅಂಗಡಿಗಳಲ್ಲಿ ವ್ಯಾಪಾರ ವಹಿವಾಟು ಉತ್ತಮವಾಗಿದ್ದರೆ ಸ್ಥಳೀಯ ರೈತರಿಂದ ಕೊಂಡುಕೊಳ್ಳುವ ಮನಸ್ಸು ಮಾಡುತ್ತಾರೆ. ರೈತರು ಇದರಿಂದ ಉತ್ಸುಕರಾಗುತ್ತಾರೆ. ಖರೀದಿ ಹೆಚ್ಚಾದಂತೆ ಗೋಡೌನ್‍ಗಳಲ್ಲಿ ಸ್ಟಾಕ್ ಮಾಡಿರುವ ಉತ್ಪನ್ನಗಳು ಖಾಲಿಯಾಗುತ್ತಾ ಹೋಗುತ್ತವೆ.

   ಖಾಲಿಯಾದಂತೆ ಅದನ್ನು ತುಂಬಿಸುವ ಕಡೆಗೆ ಗಮನ ಹರಿಸುತ್ತಾರೆ. ಇದೆಲ್ಲವೂ ಒಂದಕ್ಕೊಂದು ಪೂರಕ ಅಂಶಗಳು. ನಾವು ಹೆಚ್ಚಾಗಿ ಆನ್‍ಲೈನ್ ಖರೀದಿ ಮೊರೆ ಹೋದರೆ ಇದೆಲ್ಲದರ ಮೇಲೆಯೂ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಸ್ಥಳೀಯ ಮಾರುಕಟ್ಟೆಯ ಮೇಲೆ ಹೊಡೆತ ಬೀಳುತ್ತದೆ ಎನ್ನುತ್ತಾರೆ ಕೆಲವರು.

    ಸ್ಥಳೀಯವಾಗಿ ಉದ್ಯೋಗ ದೊರಕುತ್ತದೆ, ನಮ್ಮವರಿಗೆ ಅನುಕೂಲ ಮಾಡಿದಂತಾಗುತ್ತದೆ, ನೇರವಾಗಿ ಬೇಕು ಬೇಡಗಳನ್ನು ಈಡೇರಿಸಿಕೊಳ್ಳುವ ಅವಕಾಶ ಸಿಗುತ್ತದೆ ಎಂಬುದೆಲ್ಲವೂ ಸರಿ. ಆದರೆ ಕೊರೊನಾದಂತಹ ಈ ಸಂಕಷ್ಟದಲ್ಲಿ ಹೊರಗಡೆ ಹೋಗಿ ಖರೀದಿ ಮಾಡುವುದು ಸ್ವಲ್ಪ ಕಷ್ಟಕರವಾಗಿರುವ ಕಾರಣ ಆನ್‍ಲೈನ್ ಖರೀದಿ ಅನಿವಾರ್ಯ ಎನ್ನುತ್ತಾರೆ ಅನನ್ಯ ಟ್ರಸ್ಟಿ ಡಾ.ಹೆಚ್. ಹರೀಶ್.
ದಸರಾ ಹಬ್ಬದ ಸಂದರ್ಭದಲ್ಲಿ ಆನ್‍ಲೈನ್ ವ್ಯವಹಾರ ಹೆಚ್ಚು ಮಹತ್ವ ಪಡೆದುಕೊಂಡಿದೆ. ಆನ್‍ಲೈನ್ ಶಾಪಿಂಗ್ ಕಂಪನಿ, ಸಂಸ್ಥೆಗಳು ಭರ್ಜರಿ ವ್ಯಾಪಾರದಲ್ಲಿ ನಿರತವಾಗಿವೆ. ಸ್ಥಳೀಯವಾಗಿ ಇರುವ ಅಂಗಡಿಗಳು ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದು, ಸ್ಥಳೀಯವಾಗಿಯೇ ನಮ್ಮ ಮಾರುಕಟ್ಟೆಗಳನ್ನು ಅಭಿವೃದ್ಧಿಪಡಿಸುವ ಅವಶ್ಯಕತೆ ಇದೆ ಎನ್ನುತ್ತಾರೆ ಕೆಲವು ಪ್ರಜ್ಞಾವಂತರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap