ಮುಚ್ಚಿರುವ ರಸ್ತೆ ತೆರವಿಗೆ ಒತ್ತಾಯಿಸಿ ಪ್ರತಿಭಟನೆ

ಗುಬ್ಬಿ

    ಪಟ್ಟಣದ ಪ್ರಮುಖ ಬಡಾವಣೆಗೆ ಓಡಾಡದಂತೆ ಮುಚ್ಚಿರುವ ರಸ್ತೆ ತೆರವುಗೊಳಿಸಿ ಸಾರ್ವಜನಿಕರ ಬಳಕೆಗೆ ಅನುವು ಮಾಡಿಕೊಡುವಂತೆ ಅಧಿಕಾರಿಗಳನ್ನು ಒತ್ತಾಯಿಸಿ ಸ್ಥಳೀಯ ನಿವಾಸಿಗಳು ಹಾಗೂ ಕೆಲ ಪಪಂ ಸದಸ್ಯರು ದಿಢೀರ್ ಪ್ರತಿಭಟನೆ ನಡೆಸಿದರು.

   ಪಟ್ಟಣದ ನಾಗಲಿಂಗೇಶ್ವರ ದೇವಾಲಯದ ಸಮೀಪದಲ್ಲಿ ಹೆದ್ದಾರಿಗೆ ಹೊಂದಿಕೊಂಡಂತೆ ಹೊಸ ಬಡಾವಣೆಯಲ್ಲಿ ರಸ್ತೆ ನಿರ್ಮಿಸಲಾಗಿದೆ. ಆದರೆ ಇದು ನಮ್ಮ ಖಾಸಗಿ ಆಸ್ತಿ ಎಂದು ಒಂದು ಕುಟುಂಬದ ಸಹೋದರರು ಸಾರ್ವಜನಿಕ ರಸ್ತೆ ಮುಚ್ಚಿದ್ದಾರೆ ಎಂದು ಆರೋಪಿಸಿ, ಕಳೆದ 15 ದಿನಗಳ ಹಿಂದೆ ವಾದವಿವಾದಗಳು ನಡೆದಿದ್ದವು. ಆಗ ಸ್ಥಳಕ್ಕೆ ಭೇಟಿ ನೀಡಿದ್ದ ತಹಸೀಲ್ದಾರ್ ಡಾ.ಪ್ರದೀಪ್‍ಕುಮಾರ್ ಹಿರೇಮಠ ಮತ್ತು ಪಪಂ ಮುಖ್ಯಾಧಿಕಾರಿ ತೀರ್ಥಪ್ರಸಾದ್ ಒಂದು ವಾರದಲ್ಲಿ ಸಾರ್ವಜನಿಕರ ಓಡಾಟಕ್ಕೆ ಅನುವು ಮಾಡಿಕೊಡುವುದಾಗಿ ಭರವಸೆ ನೀಡಿದ್ದರು. ಆದರೂ ಸಾರ್ವಜನಿಕ ರಸ್ತೆಗೆ ಇದ್ದ ಅಡ್ಡಿ ತೆರವು ಮಾಡಿಲ್ಲ. ಪರ್ಯಾಯ ರಸ್ತೆಯನ್ನೂ ಸಹ ಮಾಡಿಕೊಡಲಿಲ್ಲ ಎಂದು ಅಲ್ಲಿನ ಮನೆಗಳ ಮಾಲೀಕರು, ಕೆಲ ಪಪಂ ಸದಸ್ಯರು ಹಾಗೂ ಮುಖಂಡರು ಪ್ರತಿಭಟನೆ ನಡೆಸಿದರು.

  ಸುಮಾರು ಎರಡು ತಾಸು ವಿವಾದಿತ ರಸ್ತೆ ಬಳಿ ಧರಣಿ ನಡೆಸಿದ ಪ್ರತಿಭಟನಾಕಾರರು, ತಾಲ್ಲೂಕು ಆಡಳಿತ ತುರ್ತು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಪ್ರಮುಖ ಮೂರು ಬಡಾವಣೆಗಳಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆ ಸಾರ್ವಜನಿಕರಿಗೆ ಅತ್ಯವಶ್ಯವಾಗಿದೆ. ರಸ್ತೆ ಬಳಕೆಗೆ ಅನುವು ಮಾಡಿಕೊಡಿ ಅಥವಾ ಪರ್ಯಾಯ ರಸ್ತೆ ನಿರ್ಮಿಸಿಕೊಡಿ ಎಂದು ಒತ್ತಾಯಿಸಿದರು. ಸ್ಥಳಕ್ಕೆ ಧಾವಿಸಿದ ತಹಸೀಲ್ದಾರ್ ಡಾ.ಪ್ರದೀಪ್‍ಕುಮಾರ್ ಹಿರೇಮಠ್ ಹಾಗೂ ಸಿಪಿಐ ರಾಮಕೃಷ್ಣಯ್ಯ ಇದರ ಮೂಲ ದಾಖಲೆ ಪರಿಶೀಲಿಸಿ ರಸ್ತೆ ಹುಡುಕಲು 20 ದಿನಗಳ ಗಡುವು ಕೇಳಿ, ಸದ್ಯಕ್ಕೆ ಸಾರ್ವಜನಿಕರಿಗೆ ತಾತ್ಕಾಲಿಕ ಉಪಯೋಗಕ್ಕೆ ಒಂದು ಕುಟುಂಬದ ಸಹೋದರರನ್ನು ಒಪ್ಪಿಸಿ 8 ಅಡಿಗಳ ರಸ್ತೆಯನ್ನು ಬಿಡಿಸಿಕೊಟ್ಟು, ಸದ್ಯದ ಪ್ರತಿಭಟನೆಗೆ ತೆರೆ ಎಳೆದರು.

    ಈ ಸಂದರ್ಭದಲ್ಲಿ ಪಪಂ ಮಾಜಿ ಸದಸ್ಯ ಜಿ.ಸಿ.ಲೋಕೇಶ್‍ಬಾಬು, ಸ್ಥಳೀಯ ಪಪಂ ಸದಸ್ಯ ಜಿ.ಸಿ.ಕೃಷ್ಣಮೂರ್ತಿ, ಪಪಂ ಸದಸ್ಯರಾದ ಕುಮಾರ್, ರೇಣುಕಾಪ್ರಸಾದ್, ಶೌಕತ್‍ಅಲಿ, ವಕೀಲ ಕೆ.ಜಿ.ನಾರಾಯಣ್, ಮುಖಂಡರಾದ ಕೆ.ಆರ್.ವೆಂಕಟೇಶ್, ಭರತ್‍ಗೌಡ, ಬಾಬು, ಜಿ.ವಿ.ಮಂಜುನಾಥ್ ಇತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap