ಬಯಲು ಶೌಚದಿಂದ ಇನ್ನೂ ಸಿಗದ ಮುಕ್ತಿ..!

ದಾವಣಗೆರೆ:

    ಭಾರತ ಬಯಲು ಶೌಚಮುಕ್ತ ದೇಶ ಎಂಬುದಾಗಿ ಬೀಗಲಾಗುತ್ತಿದೆ. ಆದರೆ, ಇಂದಿಗೂ ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯ ಸ್ಲಂಗಳ ಹಾಗೂ ಪಾಲಿಕೆ ವ್ಯಾಪ್ತಿಗೆ ಸೇರ್ಪಡೆ ಆಗಿರುವ ನಗರಕ್ಕೆ ಹೊಂದಿಕೊಂಡಿರುವ ಹಲವು ಗ್ರಾಮಗಳ ಜನತೆ ತಮ್ಮ ನಿತ್ಯ ಕರ್ಮಗಳನ್ನು ಮುಗಿಸಲು ಬಯಲು ಶೌಚವನ್ನೇ ಅವಲಂಬಿಸಿದ್ದಾರೆ.

    ಹೌದು… ಇಂದಿಗೂ ಮಹಾನಗರ ಪಾಲಿಕೆ ವ್ಯಾಪ್ತಿಯ ಹಲವು ಪ್ರದೇಶಗಳ ತಮ್ಮ ಮಲ, ಮೂತ್ರ ಬಾಧೆಯನ್ನು ತೀರಿಸಿಕೊಳ್ಳಲು ಚೊಂಬು ಹಿಡಿಸು ಬಯಲಿಗೆ ಹೋಗುವ ದೃಶ್ಯಗಳು ಇತ್ತೀಚೆಗೆ ಸಾಬರಮತಿ ಆಶ್ರಮದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 150ನೇ ಜನ್ಮದಿನದ ಅಂಗವಾಗಿ ಏರ್ಪಡಿಸಿದ್ದ `ಸ್ವಚ್ಛ ಭಾರತ ದಿನ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ‘ಪ್ರಧಾನಿ ನರೇಂದ್ರ ಮೋದಿ ಭಾರತ ಈಗ ಬಯಲು ಶೌಚಮುಕ್ತ ರಾಷ್ಟ್ರವಾಗಿದೆ. ನಮ್ಮದು ಬಯಲು ಶೌಚಮುಕ್ತ ಗ್ರಾಮ ಎಂದು ಭಾರತದ ಗ್ರಾಮಗಳು ತಾವಾಗಿಯೇ ಘೋಷಿಸಿಕೊಂಡಿವೆ ಎಂದು ಹೇಳಿದ್ದ ಮಾತುಗಳನ್ನು ಅಣಕಿಸುವಂತಿದೆ.

    ಮಹಾನಗರ ಪಾಲಿಕೆ ವ್ಯಾಪ್ತಿಯ ಕರೂರು, ಯರಗುಂಟೆ, ಅಶೋಕ ನಗರ, ಶಿವನಗರ, ಹೆಗಡೆ ನಗರ, ಮಂಡಕ್ಕಿ ಭಟ್ಟಿ, ಮುದ್ದಾಭೋವಿ ಕಾಲೋನಿ, ಭಾರತ್ ಕಾಲೋನಿ, ಬಸಾಪುರ, ಶೇಖರಪ್ಪ ನಗರ, ಕುಂದುವಾಡ, ಶಾಮನೂರು, ಆವರಗೆರೆ, ಗೋ ಶಾಲೆ ಸೇರಿದಂತೆ ಇನ್ನೂ ಹಲವು ಪ್ರದೇಶಗಳ ನಿವಾಸಿಗಳು ನಿತ್ಯಕರ್ಮ ಮುಗಿಸಲು ಬಯಲಿನಲ್ಲಿರುವ ಪೊದೆ, ಪಾಳು ಹೊಂಡ, ಹೊಲ-ಗದ್ದೆ ಹಾಗೂ ಚರಂಡಿಯನ್ನೇ ಅವಲಂಬಿಸಿದ್ದು, ಬೆಳಗಾಗುವ ಮುಂಚೆ ಇಲ್ಲವೇ ಕತ್ತಲಾದ ಬಳಿಕ ಚೊಂಬುಗಳನ್ನು ಹಿಡಿದು ತೆರಳುವ ದೃಶ್ಯಗಳು ಕಂಡು ಬರುತ್ತಿರುವುದು ಈಗಾಗಲೇ ದಾವಣಗೆರೆ ಬಯಲು ಶೌಚಮುಕ್ತ ನಗರ ಎಂಬುದಾಗಿ ಘೋಷಿಕೊಂಡು ಸ್ಮಾರ್ಟ್‍ಯತ್ತ ದಾಪುಗಾಲು ಹಾಕುತ್ತಿರುವ ದಾವಣಗೆರೆ ದುಸ್ಥಿತಿಯಾಗಿದೆ.

   ಕರೂರು ಜನರ ಬದುಕು ನಿತ್ಯವೂ ನರಕವಾಗಿದೆ. ದಿನ ಬೆಳಗಾದರೆ ಇಲ್ಲಿಯ ನಿವಾಸಿಗಳ ಕಷ್ಟ ಹೇಳತೀರದು. ತಮ್ಮಲ್ಲಿರುವ ಆತ್ಮಗೌರವನ್ನು ಬಿಟ್ಟು ಪುರುಷರು, ಮಹಿಳೆಯರು ಎನ್ನದೆ ಎಲ್ಲರೂ ಒಂದೇ ಕಡೆಗೆ ಬಹಿರ್ದೆಸೆಗೆ ಹೋಗುವ ದುಸ್ಥಿತಿ ಇದೆ. ಇನ್ನೂ ಕರೂರಿನ ಮಗ್ಗಲಲ್ಲಿಯೇ ಕೈಗಾರಿಕೆ ಪ್ರದೇಶವಿದೆ. ಇಲಿ ಈಗಾಗಲೇ ಕೈಗಾರಿಕೆಗಳೂ ಸ್ಥಾಪನೆಯಾಗಿವೆ. ಆದರೆ, ಇಲ್ಲಿ ಕೆಲಸ ಮಾಡುವ ಕಿಡಿಗೇಡಿಗಳು ಮಹಿಳೆಯರು-ಯುವತಿಯರು ಬಹಿರ್ದೆಸೆಗೆ ಹೋಗುವ ಸಂದರ್ಭದಲ್ಲಿ ಕೈಗಾರಿಕೆಗಳ ಕಟ್ಟಡದ ಮೇಲೆ ನಿಂತು ಇಣುಕಿ ನೋಡುತ್ತಾರೆ. ಆದ್ದರಿಂದ ಸೂರ್ಯ ಹುಟ್ಟುವ ಮುನ್ನ ಹಾಗೂ ಮುಳುಗಿದ ಮೇಲೆಯೇ ಶೌಚಾಲಯಕ್ಕೆ ಹೋಗಬೇಕಾದ ಸಂಕಷ್ಟ ಇಲ್ಲಿಯ ಮಹಿಳೆಯರದ್ದಾಗಿದೆ.

     ಬಯಲು ಶೌಚಕ್ಕೆ ತೆರಳುವ ಹೆಣ್ಣುಮಕ್ಕಳ ಪರಿಸ್ಥಿತಿಯಂತೂ ಅತ್ಯಂತ ಚಿಂತಾಜನಕವಾಗಿರುತ್ತದೆ. ಯಾರಿಗೂ ಕಾಣದ ಜಾಗಕ್ಕೆ ತೆರಳಿದರೂ, ಅಕಸ್ಮಾತಾಗಿ ಪುರುಷರು ಯಾರಾದರೂ ಆ ದಾರಿಯಲ್ಲಿ ಬಂದರೆ ಮುಜುಗರಕ್ಕೆ ಒಳಗಾಗಿ, ಅಲ್ಲಿಂದ ಎದ್ದು ಮತ್ತೆ ಸುರಕ್ಷಿತ ಸ್ಥಳವನ್ನು ಹುಡುಕಿಕೊಂಡು ಹೋಗಾಬೇಕಾದ ಅನಿವಾರ್ಯತೆಗೆ ಒಳಗಾಗಿರುತ್ತಾರೆ.

     ನಗರದ ಹಲವೆಡೆ ಸಮುದಾಯ ಶೌಚಾಲಯಗಳಿದ್ದರೂ, ನೀರಿನ ಕೊರತೆ, ಸರಿಯಾಗಿ ನಿರ್ವಹಣೆ ಇಲ್ಲದಿರುವುದು ಸೇರಿದಂತೆ ವಿವಿಧ ಕಾರಣಗಳಿಂದಾಗಿ ಅವುಗಳನ್ನು ಬಳಸದೇ ಬೀಗ ಜಡಿಯಲಾಗಿದೆ. ಹೀಗಾಗಿ ಇರುವ ಸಮುದಾಯ ಶೌಚಾಲಯಗಳು ಸರಿಯಾಗಿ ಬಳಕೆ ಆಗದ ಕಾರಣ ಬಯಲಿಗೆ ಹೋಗುವ ಅನಿವಾರ್ಯತೆ ಇದೆ ಎನ್ನುತ್ತಾರೆ ವಿವಿಧ ಪ್ರದೇಶಗಳ ನಾಗರೀಕರು.

     ಸಮೀಕ್ಷೆ ನಡೆಸಿ ಸ್ವಚ್ಛ ಭಾರತ್ ಯೋಜನೆಯಡಿ ಶೌಚಾಲಯ ಇಲ್ಲದವರಿಗೆ ವೈಯಕ್ತಿಕ ನಿರ್ಮಿಸಿಕೊಡಲಾಗಿದೆ. ಅಲ್ಲದೇ, ಈಗ ಶೌಚಾಲಯ ಇಲ್ಲ ಎಂಬುದಾಗಿ ಯಾರೂ ಮುಂದೆ ಬರುತ್ತಿಲ್ಲ. ಹೀಗಾಗಿ ಪಾಲಿಕೆ ಬಯಲು ಶೌಚಮುಕ್ತ ಜಿಲ್ಲೆಯಾಗಿದೆ ಎಂಬುದಾಗಿ ವಾದ ಮಂಡಿಸುತ್ತಾರೆ ಪಾಲಿಕೆ ಅಧಿಕಾರಿಗಳು. ಆದರೆ, ಅಧಿಕಾರಿಗಳು ಏನೇ ಹೇಳಿದರೂ ಕೊಳಗೇರಿ ಹಾಗೂ ನಗರಕ್ಕೆ ಹೊಂದಿಕೊಂಡಿರುವ ಗ್ರಾಮಗಳ ಬಹುತೇಕ ಜನರು ಬಯಲು ಶೌಚಾಲಯವನ್ನು ಅವಲಂಬಿಸಿರುವುದಂತು ಸುಳ್ಳಲ್ಲ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link