ಬೆಂಗಳೂರು
ಕೆಪಿಸಿಸಿ ಸಾರಥ್ಯ ಹಾಗೂ ಪ್ರತಿಪಕ್ಷ ನಾಯಕತ್ವಕ್ಕಾಗಿ ಪೈಪೋಟಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಗೊಂದಲ ನಿವಾರಿಸಲು ಮುಂದಾಗಿರುವ ಹೈಕಮಾಂಡ್, ಪಕ್ಷದ ಮುಖಂಡರಿಂದ ಅಭಿಪ್ರಾಯ ಸಂಗ್ರಹಿಸಿದ್ದಾರೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಧುಸೂಧನ್ ಮಿಸ್ತ್ರಿ ಭಾನುವಾರ ನಗರದ ಖಾಸಗಿ ಹೊಟೇಲ್‍ನಲ್ಲಿ ರಾಜ್ಯದ 60 ನಾಯಕರ ಅಭಿಪ್ರಾಯವನ್ನು ಪ್ರತ್ಯೇಕವಾಗಿ ಸಂಗ್ರಹಿಸಿದ್ದು, ಬಹುತೇಕ ನಾಯಕರು ಜಾತಿ, ಪ್ರಾದೇಶಿಕ ಪ್ರಾತಿನಿಧ್ಯದ ಜೊತೆಗೆ ಸಾಮೂಹಿಕ ನಾಯಕತ್ವದಲ್ಲಿ ಪಕ್ಷ ಮುನ್ನಡೆಸಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಮುಖವಾಗಿ ಪ್ರತಿಪಕ್ಷದ ನಾಯಕನ ಸ್ಥಾನಕ್ಕೆ ಮೂಲ ಹಾಗೂ ವಲಸೆ ಕಾಂಗ್ರೆಸ್ಸಿಗರ ನಡುವೆ ಪೈಪೋಟಿ ನಡೆಯುತ್ತಿರುವುದ್ದು, ಪ್ರತಿಪಕ್ಷದ ನಾಯಕ ಹಾಗೂ ಶಾಸಕಾಂಗ ಪಕ್ಷದ ನಾಯಕನ ಎರಡೂ ಸ್ಥಾನಗಳನ್ನು ಒಬ್ಬರಿಗೆ ನೀಡಬಾರದು ಎನ್ನುವ ಅಭಿಪ್ರಾಯ ವ್ಯಕ್ತವಾಗಿರುವುದರಿಂದ ಕಾಂಗ್ರೆಸ್ ಹೈ ಕಮಾಂಡ್ ಮೂರು ಸ್ಥಾನಗಳಿಗೂ ಪ್ರತಿಯೊಬ್ಬರಿಂದಲೂ ಕನಿಷ್ಠ ಮೂರು ಹೆಸರುಗಳನ್ನು ಸೂಚಿಸಲು ಅವಕಾಶ ಕಲ್ಪಿಸಿದೆ.
ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ, ರಾಜ್ಯಸಭಾ ಸದಸ್ಯ ಬಿ.ಕೆ. ಹರಿಪ್ರಸಾದ್, ಮಾಜಿ ಸಚಿವ ಎಚ್.ಕೆ. ಪಾಟೀಲ್, ಪ್ರತಿಯೊಂದು ಹುದ್ದೆಗೂ ಮೂರು ಹೆಸರು ಸೂಚಿಸುವುದರ ಜೊತೆಗೆ ಸಿದ್ದರಾಮಯ್ಯ ಒಬ್ಬರಿಗೇ ಎರಡು ಸ್ಥಾನ ನೀಡಿದರೆ, ಪಕ್ಷದಲ್ಲಿ ಅವರದೇ ಪಡೆ ನಿರ್ಮಾಣವಾಗಿ ಉಳಿದವರು ನಿರ್ಲಕ್ಷಕ್ಕೆ ಒಳಗಾಗುತ್ತಾರೆ. ಅದು ಪಕ್ಷದ ಸಂಘಟನೆ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಜಾತಿ, ಪ್ರಾದೇಶಿಕತೆ ಲೆಕ್ಕಾಚಾರ:
ಪಕ್ಷದಲ್ಲಿ ಜವಾಬ್ದಾರಿಗಳನ್ನು ಜಾತಿ ಹಾಗೂ ಪ್ರಾದೇಶಿಕವಾಗಿ ಹಂಚಿಕೆ ಮಾಡಬೇಕೆಂಬ ಸಲಹೆ ವ್ಯಕ್ತವಾಗಿದೆ ಎಂದು ತಿಳಿದು ಬಂದಿದೆ. ಈಗಾಗಲೇ ಕುರುಬ ಸಮಾಜದ ಸಿದ್ದರಾಮಯ್ಯ ಶಾಸಕಾಂಗ ಪಕ್ಷದ ನಾಯಕರಾಗಿದ್ದಾರೆ. ಬ್ರಾಹ್ಮಣ ಸಮುದಾಯದ ದಿನೇಶ್ ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ. ಆದರೆ, ಇಬ್ಬರೂ ದಕ್ಷಿಣ ಕರ್ನಾಟಕ ಭಾಗವನ್ನು ಪ್ರತಿನಿಧಿಸುತ್ತಿದ್ದಾರೆ. ಹೀಗಾಗಿ ಪ್ರತಿಪಕ್ಷದ ನಾಯಕನ ಸ್ಥಾನ ಅಥವಾ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಉತ್ತರ ಕರ್ನಾಟಕ ಭಾಗಕ್ಕೆ ನೀಡಬೇಕು ಎಂಬ ಸಲಹೆಯನ್ನು ಸತೀಶ್ ಜಾರಕಿಹೊಳಿ, ಎಚ್.ಕೆ.ಪಾಟೀಲ್ ಸೇರಿದಂತೆ ಕೆಲವು ನಾಯಕರು ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಪ್ರತಿಪಕ್ಷದ ನಾಯಕನ ಸ್ಥಾನವನ್ನು ಬೇರೆಯವರಿಗೆ ನೀಡಬೇಕೆಂದು ಹೈ ಕಮಾಂಡ್ ತೀರ್ಮಾನಿಸಿದರೆ, ಸಿದ್ದರಾಮಯ್ಯ ಬಣದ ನಾಯಕರು ಆ ಸ್ಥಾನವನ್ನು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ನೀಡಬೇಕೆಂಬ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗುತ್ತಿದೆ. ಆಗ ಬ್ರಾಹ್ಮಣ ಸಮುದಾಯದ ನಾಯಕರಾಗಿರುವ ದಿನೇಶ್ ಗುಂಡೂರಾವ್ ಅವರಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾಯಿಸಿದರೆ, ಅದನ್ನು ಮಾಜಿ ಸಚಿವ ಒಕ್ಕಲಿಗ ಸಮುದಾಯದ ಕೃಷ್ಣ ಬೈರೇಗೌಡ ಅವರಿಗೆ ನೀಡಬೇಕು ಎಂದು ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಪ್ರತ್ಯೇಕ ಮಾತುಕತೆ
ಮಧುಸೂಧನ್ ಮಿಸ್ತ್ರಿಯವರು ಪ್ರತಿಯೊಬ್ಬ ನಾಯಕರಿಂದ ಪ್ರತ್ಯೇಕ ಅಭಿಪ್ರಾಯ ಸಂಗ್ರಹಿಸುವ ಸಂದರ್ಭದಲ್ಲಿಯೇ ಮೂಲ ಕಾಂಗ್ರೆಸ್ ನಾಯಕರಾಗಿರುವ ಎಚ್.ಕೆ. ಪಾಟೀಲ್, ಕೆ.ಎಚ್. ಮುನಿಯಪ್ಪ ಹಾಗೂ ಬಿ.ಕೆ. ಹರಿಪ್ರಸಾದ್ ಪ್ರತ್ಯೇಕವಾಗಿ ಗುಪ್ತ ಸಭೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಸಿದ್ದು ಬಣದವರೇ ಹೆಚ್ಚು ? : ಅಭಿಪ್ರಾಯ ಸಂಗ್ರಹಿಸಲು ಆಯ್ಕೆ ಮಾಡಿರುವ ಬಹುತೇಕ ನಾಯಕರಲ್ಲಿ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಬಣದವರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಮಧುಸೂಧನ್ ಮಿಸ್ತ್ರಿ ಎದುರು ಕೆಲವು ನಾಯಕರು ಅಸಮಾಧಾನ ಹೊರ ಹಾಕಿದ್ದಾರೆ ಎಂದು ತಿಳಿದು ಬಂದಿದೆ.
ಅಭಿಪ್ರಾಯ ತಿಳಿಸಲು ಆಯ್ದ 63 ಜನ ನಾಯಕರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಕೆಲವು ಮಾಜಿ ಶಾಸಕರು ಹಾಗೂ ಮಂತ್ರಿಗಳು ತಾವೂ ಅಭಿಪ್ರಾಯ ಹೇಳಲು ಆಗಮಿಸಿ ಪಟ್ಟಿಯಲ್ಲಿ ತಮ್ಮ ಹೆಸರಿಲ್ಲ ಎಂದು ತಿಳಿದು ಅಸಮಾಧಾನಗೊಂಡು ತೆರಳಿದ್ದಾರೆ. ಮಾಜಿ ಸಚಿವ ಪಿ.ಟಿ. ಪರಮೇಶ್ವರ್ ನಾಯಕ್ ತಮ್ಮನ್ನು ಪರಿಗಣಿಸದಿರುವ ಬಗ್ಗೆ ನಾಯಕರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ ಎಂದು ತಿಳಿದು ಬಂದಿದೆ.
ಸಭೆಗೆ ಗೈರು
ಪಕ್ಷದ ನಾಯಕತ್ವ ವಹಿಸುವು ಕುರಿತು ಅಭಿಪ್ರಾಯ ಸಂಗ್ರಹ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕೇಂದ್ರದ ಮಾಜಿ ಸಚಿವರಾದ ಮಲ್ಲಿಕಾರ್ಜುನ ಖರ್ಗೆ, ಆಸ್ಕರ್ ಫರ್ನಾಂಡೀಸ್, ಮಾರ್ಗರೇಟ್ ಆಳ್ವಾ ಸೇರಿದಂತೆ ಪ್ರಮುಖ ನಾಯಕರು ಗೈರು ಹಾಜರಾಗಿದ್ದರು.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರನ್ನು ಹೊರಗಿಟ್ಟು ಅಭಿಪ್ರಾಯ ಸಂಗಹಿಸಿರುವುದು ಕೂತಲಹಕ್ಕೆ ಕಾರಣವಾಗಿದ್ದು, ಅದು ಸಿದ್ದರಾಮಯ್ಯ ಅವರಿಗೆ ಹಿನ್ನಡೆಗೆ ಕಾರಣವಾಗಬಹುದು ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತಿವೆ.
ಹೆಚ್.ಕೆ.ಪಾಟೀಲ್ ಮಾತನಾಡಿ,ಪಕ್ಷ ಸಂಘಟನೆ ದೃಷ್ಠಿಯಿಂದ ಅಧಿಕಾರ ಹಂಚಿಕೆಯ ಬಗ್ಗೆ ಅಭಿಪ್ರಾಯ ತಿಳಿಸಿದ್ದೇವೆ. ಸಾಮೂಹಿಕ ನಾಯಕತ್ವದ ಬಗ್ಗೆ ಅಭಿಪ್ರಾಯ ವ್ಯಕ್ತವಾಗಿದೆ. ಎಲ್ಲರ ಅಭಿಪ್ರಾಯ ಪಡೆದು ಹೈ ಕಮಾಂಡ್ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ ಎಂದರು.ಕೆ.ಹೆಚ್.ಮುನಿಯಪ್ಪ ಮಾತನಾಡಿ, ಪಕ್ಷ ಸಂಘಟನೆ ದೃಷ್ಟಿಯಿಂದ ಕೆಲವು ಸಲಹೆಗಳನ್ನು ನೀಡಿದ್ದೇವೆ. ಹೈಕಮಾಂಡ್ ಯಾವ ತೀರ್ಮಾನ ತೆಗೆದುಕೊಳ್ಳುತ್ತದೆಯೋ ಕಾದು ನೋಡಬೇಕು. ಮೂಲ ಹಾಗೂ ವಲಸಿಗ ಎನ್ನುವುದಾಗಿದ್ದರೆ, ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಲು ಒಪ್ಪುತ್ತಿರಲಿಲ್ಲ ಎಂದರು.
ಮಾಜಿ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ,ರಾಜ್ಯದಲ್ಲಿ ಕಾಂಗ್ರೆಸ್‍ನ ಸದ್ಯದ ಪರಿಸ್ಥಿತಿ ಬಗ್ಗೆ ವಿವರಿಸಿದ್ದೇವೆ. ಪ್ರಾದೇಶಿಕ ಹಾಗೂ ಜಾತಿವಾರು ಪ್ರಾತಿನಿಧ್ಯ ನೀಡಬೇಕೆಂದು ಸಲಹೆ ನೀಡಲಾಗಿದ್ದು, ಹೈಕಮಾಂಡ್ ಎಲ್ಲವನ್ನೂ ಪರಿಶೀಲಿಸಿ ತೀರ್ಮಾನ ಕೈಗೊಳ್ಳುತ್ತದೆ ಎಂದರು.
ಶಾಸಕ ರಾಮಲಿಂಗಾರೆಡ್ಡಿ ಮಾತನಾಡಿ, ಪ್ರತಿಪಕ್ಷದ ನಾಯಕನ ಸ್ಥಾನಕ್ಕೆ ಸಿದ್ದರಾಮ್ಯಯ, ಎಚ್.ಕೆ. ಪಾಟೀಲ್ ನಡುವೆ ಪೈಪೋಟಿ ಇದೆ. ಆದರೆ, ಒಬ್ಬರನ್ನೇ ಪ್ರತಿಪಕ್ಷದ ನಾಯಕರನ್ನು ಮಾಡಲು ಅವಕಾಶ ಇರುವುದು. ಅಂತಿಮ ನಿರ್ಧಾರ ಹೈಕಮಾಂಡ್ ಗೆ ಬಿಟ್ಟಿದ್ದು ಎಂದರು.
ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ ಮಾತನಾಡಿ, ಪಕ್ಷದ ನಾಯಕ, ಕೆಪಿಸಿಸಿ ಅಧ್ಯಕ್ಷರ ನೇಮಕದ ಬಗ್ಗೆ ಅಭಿಪ್ರಾಯ ಕೇಳುತ್ತಿದ್ದಾರೆ ವೈಯಕ್ತಿಕವಾಗಿ ಯಾವುದೇ ಅಭಿಪ್ರಾಯ ತಿಳಿಸಿಲ್ಲ. ಪಕ್ಷದ ದೃಷ್ಟಿಯಿಂದ ಭಿನ್ನಮತ ಇಲ್ಲದೇ ಸಂಘಟನೆ ಮಾಡಿಕೊಂಡು ಹೋಗಬೇಕು ಎಂದು ಸಲಹೆ ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








