ಅಹೋರಾತ್ರಿ ಧರಣಿ

ಹಾವೇರಿ:

         ಜಿಲ್ಲೆಯ ಅಂಗನವಾಡಿ ಕೇಂದ್ರಗಳಿಗೆ ವಿತರಣೆ ಮಾಡಲಾಗಿದ್ದ, ಗ್ಯಾಸ್ ಓಲೆ, ಕುಕ್ಕರ, ಸೇರಿದಂತೆ ಮುಂತಾದ ಸಾಮಗ್ರಿಗಳು ಕಳಪೆ ಗುಣಮಟ್ಟದಿಂದ ಕೂಡಿವೆ. ಅವುಗಳ ಬಗ್ಗೆ ತನಿಕೆ ನಡೆಸಿ, ತಪ್ಪಿಸ್ಥರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯತ ಅಧ್ಯಕ್ಷ ಎಸ್.ಕೆ.ಕರಿಯಣ್ಣನವರ, ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು ಭರವಸೆ ನೀಡಿದ್ದರಿಂದ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿರಿಯ ಅಹೋರಾತ್ರಿ ಧರಣಿಯನ್ನು ಹಿಂಪಡೆಯಲಾಗಿದೆ ಎಂದು ಸಂಘಟನೆಯ ಜಿಲ್ಲಾ ಜಿಲ್ಲಾಧ್ಯಕ್ಷ ಹೊನ್ನಪ್ಪ ಮರೆಮ್ಮನವರ ತಿಳಿಸಿದ್ದಾರೆ.

       ಮಂಗಳವಾರದಿಂದ ಜಿಲ್ಲಾಧಿಕಾರಿ ಕಚೇರಿ ಎದರು, ಎಐಟಿಯುಸಿ ನೇತೃತ್ವದಲ್ಲಿ ಜಿಲ್ಲೆಯ ನೂರಾರು ಅಂಗನವಾಡಿ ಕಾರ್ಯಕರ್ತೆಯರು ಹಲವು ಬೇಡಿಕೆಗಳ ಈಡೇರಿಕೆಗಾಗಿ ಅಹೋರಾತ್ರಿ ಧರಣಿ ನಡೆಸಿದ್ದರು.

        ಮಹಿಳಾ ಕಾರ್ಯಕರ್ತೆಯರ ಧರಣಿಯಿಂದ ಎಚ್ಚತ್ತ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿ.ಪಂ. ಯೋಜನಾಧಿಕಾರಿಗಳು, ಜಿಲ್ಲಾ ಕೈಗಾರಿಕೆ ಇಲಾಖೆ ಉಪನಿರ್ದೇಶಕರು ಹಾಗೂ ಸಂಘಟನೆಯ ಪದಾಧಿಕಾರಿಗಳನ್ನೋಳಗೊಂಡ ಸಮಿತಿಯಿಂದ ರಚಿಸಿ, ಹಲವು ಅಂಗನವಾಡಿಗಳಿಗೆ ಖುದ್ದು ಭೇಟಿ, ತನಿಕೆ ನಡೆಸಲು ಜಿ.ಪಂ. ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು ಒಪ್ಪಿದ ಹಿನ್ನೇಲೆಯಲ್ಲಿ ಅಹೋರಾತ್ರಿ ಧರಣಿಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ. ಇದರ ಜೊತೆಗೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಸಲ್ಲಿಸಲಾಗಿದೆ.

        ಮಾತುಕತೆ ವೇಳೆ ಪ್ರಮುಖವಾಗಿ, ಅಂಗನವಾಡಿ ಕೇಂದ್ರಗಳಿಗೆ ದಿ. 1-4-2018 ರಿಂದ ಬಾಡಿಗೆ ಕಟ್ಟಡದಲ್ಲಿರುವ ಅಂಗನವಾಡಿಗಳಿಗೆ ಬಾಡಿಗೆ ಹಣ ನೀಡಿಲ್ಲ. ತಕ್ಷಣ ಬಾಡಿಗೆ ಹಣ ಬಿಡುಬೇಕು. ಇನ್ನು ಕೆಲ ಸರಕಾರಿ ಶಾಲೆಗಳಲ್ಲಿ ಎಲ್‍ಕೆಜಿ ಹಾಗೂ ಯುಕೆಜಿ ಶಾಲೆಗಳನ್ನು ತೆರೆಯಲಾಗುತ್ತಿದೆ.

        ಇದರಿಂದ ಅಂಗನವಾಡಿಗಳಲ್ಲಿ ಮಕ್ಕಳ ಸಂಖ್ಯೆ ಕುಸಿಯುತ್ತದೆ. ಆದ್ದರಿಂದ ಈ ನಿರ್ಧಾರದಿಂದ ಹಿಂದೆ ಸರಿದು, ಅಂಗನವಾಡಿಗಳನ್ನು ಪುನಚೇತಗೊಳಿಸಲು ಮುಂದಾಗಬೇಕು. ಮಿನಿ ಅಂಗನವಾಡಿ ಕೇಂದ್ರಗಳಿಗೆ ಕನಿಷ್ಠ 18000 ರೂ ವೇತನ ನೀಡಬೇಕು. ಅಂಗನವಾಡಿ ಕಾರ್ಯಕರ್ತೆಯರಿಗೆ ಕಳಪೆ ಗುಣಮಟ್ಟದ ಸಮವಸ್ತ್ರ ವಿತರಣೆ ಮಾಡಲಾಗಿದೆ. ಅವುಗಳನ್ನು ವಾಪಾಸ್ಸು ಪಡೆದು,ಗುಣಮಟ್ಟದ ಬಟ್ಟೆ ವಿತರಣೆ ಮಾಡಬೇಕು. ಜೊತೆಗೆ ಪ್ರತಿ ಅಂಗನವಾಡಿಗೆ ಗ್ಯಾಸ್ ಸಿಲೆಂಡರ್ ಇಲಾಖೆ ಒದಗಿಸಬೇಕು ಎಂದು ಆಗ್ರಹಿಸಿದರು.

          ಇನ್ನು ಅಂಗನವಾಡಿ ಕೇಂದ್ರಗಳಿಗೆ ಹಲವು ರಜಿಸ್ಟರ್‍ಗಳನ್ನು ಕಳೆದ ಎರಡ್ಮೂರು ವರ್ಷಗಳಿಂದ ನೀಡಿಲ್ಲ. ಅವುಗಳ ಅಗತ್ಯ ಕೇಂದ್ರಕ್ಕೆ ಮುಖ್ಯವಾಗಿದ್ದು, ಅವುಗಳನ್ನು ವಿತರಣೆ ಮಾಡಬೇಕು. ಜೊತೆಗೆ ಅಂಗನವಾಡಿ ಕಾರ್ಯಕರ್ತೆಯರು ಇಲಾಖೆಯ ಹಲವು ಕಾರ್ಯಕ್ರಮಗಳನ್ನು ಮಾಡಬೇಕು. ಅದರ ಪೋಟೋ ಚಿತ್ರಗಳನ್ನು ಕಾರ್ಯಕರ್ತೆಯರು ಮಾಡುತ್ತಿದ್ದು, ಅದರ ಹಣವನ್ನು ಇಲಾಖೆ ನೀಡಬೇಕು. ಅಲ್ಲದೇ, ಪ್ರತಿ ವರ್ಷ ಅಕ್ಟೊಂಬರ್ 2 ರಂದು ಅಂಗನವಾಡಿ ದಿನಾಚರಣೆಯಂದು ಆಚರಣೆ ಮಾಡಲು ಕೇಂದ್ರಕ್ಕೆ 500 ರೂ ಕೊಡುತ್ತಿದ್ದು.

          ಜಿಲ್ಲೆಯಲ್ಲಿ ಇಲ್ಲಿಯವರೆಗೂ ಆ ಹಣ ನೀಡಿಲ್ಲ. ತಕ್ಷಣ ಆ ಹಣ ನೀಡಬೇಕು ಎಂದು ಇದೇ ಸಮಯದಲ್ಲಿ ಅಧಿಕಾರಿಗಳನ್ನು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಬಿಸಿಯೂಟ ತಯಾರಕರ ಸಂಘಟನೆ ಜಿಲ್ಲಾಧ್ಯಕ್ಷ ಜಿ.ಡಿ.ಪೂಜಾರ, ಸುನಂದಾ ರೇವಣಕರ, ಲಲಿತಾ ನಾಗನಗೌಡ್ರ, ಜಯಮ್ಮ ದೇಸಳ್ಳಿ, ಯಲ್ಲಮ್ಮ ಮರಡೂರ, ಗುರುನಾಥ ಲಕ್ಮಾಪುರ, ಪರಮೇಶ ಜಡತನಿ, ಜಿ.ವಿ.ಮಂಟೂರ, ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಭಾಗವಹಿಸಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link