ಬೆಂಗಳೂರು:
ಸದನ ಸಮಿತಿ ಕಾರ್ಯಭಾರಕ್ಕೆ ಇಲ್ಲಿಯವರೆಗೆ ಅಡ್ಡಿಯಾಗಿರಲಿಲ್ಲ. ಇದೇ ಮೊದಲ ಬಾರಿಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅಡ್ಡಿಪಡಿಸಿದ್ದು, ಪಿಪಿಇ ಉಪಕರಣಗಳ ಖರೀದಿಯಲ್ಲಿನ ಅವ್ಯವಹಾರ ತನಿಖೆಗೆ ತಡೆ ನೀಡಿದ ಕಾರಣ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ವಿರುದ್ಧವೇ ಹಕ್ಕುಚ್ಯುತಿ ಮಂಡನೆಗೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ(ಪಿಎಸಿ) ನಿರ್ಧರಿಸಿರುವುದಾಗಿ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಚ್.ಕೆ.ಪಾಟೀಲ್, ಅವ್ಯವಹಾರಗಳ ಬಗ್ಗೆ ತನಿಖೆ ಮಾಡಲು ಸ್ವಾತಂತ್ರ್ಯ ಸಿಗುತ್ತಿಲ್ಲ. ಕರ್ತವ್ಯ ನಿರ್ವಹಣೆಗೆ ಚ್ಯುತಿಯಾಗಿದೆ. ಈ ಬಗ್ಗೆ ವಿಧಾನಸಭೆ ಕಾರ್ಯದರ್ಶಿಯವರನ್ನು ಭೇಟಿ ಮಾಡಿ ತಿಳಿಸಲಾಗಿದೆ. ಸ್ಪೀಕರ್ ವಿರುದ್ಧ ಹಕ್ಕುಚ್ಯುತಿಯನ್ನು ಸಲ್ಲಿಸುವ ಬಗ್ಗೆ ಮಂಗಳವಾರ ಸಭೆ ನಡೆಸಿ ತೀರ್ಮಾನಿಸುವುದಾಗಿ ಹೇಳಿದರು.
ಪಿಪಿಎ ಕಿಟ್ ಖರೀದಿಯಲ್ಲಿ ಅವ್ಯವಹಾರ ನಡೆದಿಲ್ಲವೆಂಬ ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿದ ಎಚ್.ಕೆ.ಪಾಟೀಲ್, ಪಿಪಿಇ ಕಿಟ್ ಅವ್ಯವಹಾರದ ಬಗ್ಗೆ ಸಮಿತಿಗೆ ಸಾರ್ವಜನಿಕರಿಂದ ದೂರು ಬಂದಿತ್ತು. ಇದರ ಪರಿಶೀಲನೆ ಮಾಡಲು ಹೊರಟಿದ್ದು ಸಾರ್ವಜನಿಕ ಲೆಕ್ಕಪತ್ರ ಸಮಿತಿಯೇ ಹೊರತು ಕಾಂಗ್ರೆಸ್ ಪಕ್ಷ ಅಲ್ಲ ಎಂದು ತಿರುಗೇಟು ನೀಡಿದರು.