ತುಮಕೂರು
ವಿಶೇಷ ವರದಿ:ಆರ್.ಎಸ್.ಅಯ್ಯರ್
“ದೀಪದ ಕೆಳಗೇ ಕತ್ತಲು” ಎಂಬುದು ಜನಪ್ರಿಯ ನಾಣ್ಣುಡಿ. ತುಮಕೂರು ತಾಲ್ಲೂಕು ಕಚೇರಿ ಆವರಣದಲ್ಲಿರುವ `ಪಡಸಾಲೆ’ಯನ್ನು ಗಮನಿಸಿದರೆ ಈ ಮಾತು ಇಲ್ಲಿ ಅಕ್ಷರಶಃ ಅನ್ವಯಿಸುವಂತಿದೆ.
ತುಮಕೂರು ನಗರವು ಜಿಲ್ಲಾ ಕೇಂದ್ರವಾಗಿದೆ. ನಗರದಲ್ಲಿರುವ ಮಿನಿ ವಿಧಾನಸೌಧವು ಜಿಲ್ಲೆಯ ಆಡಳಿತದ ಕೇಂದ್ರವೆನಿಸಿದೆ. ಇಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಇದೆ. ಆದರೆ ಇದೇ ಕಟ್ಟಡದಲ್ಲಿರುವ ತಾಲ್ಲೂಕು ಕಚೇರಿಯ `ಪಡಸಾಲೆ’ ಮಾತ್ರ ಆಡಳಿತಾಂಗದ ನಿರ್ಲಕ್ಷೃಕ್ಕೊಳಗಾಗಿದೆ.
ಅಂದು ಹೇಗಿತ್ತು?
`ಪಡಸಾಲೆ` (ಅಟಲ್‍ಜೀ ಜನಸ್ನೇಹಿ ಕೇಂದ್ರ) ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಕಾರ್ಯಕ್ರಮಗಳ ಲ್ಲೊಂದು. ನಾಗರಿಕರು ಕಚೇರಿಯಲ್ಲಿ ಮೇಜಿನಿಂದ ಮೇಜಿಗೆ ಅಲೆಯದಂತೆ, ಮಧ್ಯವರ್ತಿಗಳ ಕಾಟವಿಲ್ಲದಂತೆ, ಒಂದೇ ಸೂರಿನಡಿ ಸುಲಭವಾಗಿ ಸರ್ಕಾರದ ವಿವಿಧ ಸೌಲಭ್ಯಯಗಳನ್ನು ಪಡೆಯುವಂತಿರಬೇಕೆಂಬ ಪರಿಕಲ್ಪನೆಯಿಂದ ರೂಪುಗೊಂಡ ವ್ಯವಸ್ಥೆಯಿದು. ತುಮಕೂರು ತಾಲ್ಲೂಕು ಕಚೇರಿಯಲ್ಲಿ ಈ ವ್ಯವಸ್ಥೆಯು 2016ರ ಜನವರಿಯಲ್ಲಿ ಅತ್ಯಂತ ಯಶಸ್ವಿಯಾಗಿ ಸಿದ್ಧಗೊಂಡಿತ್ತು.
ಆಗಿನ ಗ್ರೇಡ್-2 ತಹಸೀಲ್ದಾರ್ (ಈಗ ನಿವೃತ್ತರು) ಜಿ.ಎಂ.ಸಣ್ಣಮುದ್ದಯ್ಯ ಅವರ ವೈಯಕ್ತಿಕ ಆಸ್ಥೆಯಿಂದ `ಪಡಸಾಲೆ’ಯು ಇಡೀ ತುಮಕೂರು ಜಿಲ್ಲೆಗೇ ಮಾದರಿಯೆಂಬಂತೆ ಸಿದ್ಧವಾಗಿತ್ತು (ಈ ಬಗ್ಗೆ ದಿನಾಂಕ 14-01-2016 ರ `ಪ್ರಜಾಪ್ರಗತಿ’ಯಲ್ಲಿ ವಿಶೇಷ ಲೇಖನ ಪ್ರಕಟವಾಗಿದ್ದುದನ್ನು ಗಮನಿಸಬಹುದು). ಅವರು ಕೈಗೊಂಡಿದ್ದ ನಿರ್ದಾಕ್ಷಿಣ್ಯ ಕ್ರಮಗಳಿಂದ ಮಧ್ಯಯವರ್ತಿಗಳ ಹಾವಳಿಗೆ ಬ್ರೇಕ್ ಬಿದ್ದಿತ್ತು. ಇದರಿಂದ ಅವರು ಮಧ್ಯವರ್ತಿಗಳ ಕೆಂಗಣ್ಣಿಗೂ ಗುರಿಯಾಗುವಂತಾಗಿತ್ತು. ಆಗ ಅಷ್ಟೊಂದು ಪರಿಣಾಮಕಾರಿಯಾಗಿ `ಪಡಸಾಲೆ’ ರೂಪುಗೊಂಡಿತ್ತು.
ಸಾರ್ವಜನಿಕರು ಸರ್ಕಾರದ ವಿವಿಧ ಸೌಲಭ್ಯಯಗಳನ್ನು ಪಡೆದುಕೊಳ್ಳಲು `ಪಡಸಾಲೆ’ಯಲ್ಲಿ ಒಟ್ಟು 7 ಪ್ರತ್ಯೇಕ ಕೌಂಟರ್‍ಗಳಿವೆ. ಒಂದೊಂದು ಕೌಂಟರ್‍ನಲ್ಲಿ ಒಂದೊಂದು ವಿಧದ ಸೌಲಭ್ಯಯವನ್ನು ಒದಗಿಸಲಾಗುತ್ತಿದೆ. ಇದಕ್ಕೆ ಪೂರಕವಾಗಿ ಹೊರಾವರಣದಲ್ಲಿ ಸಾರ್ವಜನಿಕರಿಗೆ ಬಿಸಿಲು-ಮಳೆಯಿಂದ ರಕ್ಷಣೆ ಒದಗಿಸಲು ಷೆಲ್ಟರ್ ನಿರ್ಮಿಸಲಾಗಿದೆ. ಸಾರ್ವಜನಿಕರು ಸರತಿ ಸಾಲಿನಲ್ಲಿ ನಿಲ್ಲುವಂತೆ ಪ್ರತಿ ಕೌಂಟರ್ ಮುಂದೆಯೂ ಸ್ಟೀಲ್ ಕಂಬಿಯನ್ನು (ರೈಲಿಂಗ್) ಅಳವಡಿಸಲಾಗಿದೆ.
ಇದಕ್ಕಾಗಿ ಆಗಿನ ಎಸ್.ಬಿ.ಎಂ. ಸಹಕಾರ ನೀಡಿ, 2 ಲಕ್ಷ ರೂ.ಗಳನ್ನು ವಿನಿಯೋಗಿಸಿತ್ತು. ಇನ್ನು ಇಲ್ಲಿಗೆ ಬರುವ ಸಾರ್ವಜನಿಕರ ಅನುಕೂಲಕ್ಕಾಗಿ ಹಿಂದಿನ ಶಾಸಕರ ನಿಧಿಯಿಂದ 1.15 ಲಕ್ಷ ರೂ. ವಿನಿಯೋಗಿಸಿ `ಶುದ್ಧ ಕುಡಿಯುವ ನೀರಿನ ಘಟಕ’ವನ್ನು ಅಳವಡಿಸಲಾಗಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಧ್ವವನಿವರ್ಧಕ ವ್ಯವಸ್ಥೆಯನ್ನೂ ಮಾಡಲಾಗಿತ್ತಲ್ಲದೆ, ಮಧ್ಯವರ್ತಿಗಳ ನಿಯಂತ್ರಣಕ್ಕೆ ಸಿ.ಸಿ. ಟಿವಿಯನ್ನೂ ಅಳವಡಿಸಲಾಗಿತ್ತು. ಹೀಗೆ ಸರ್ವವಿಧದಿಂದಲೂ `ಪಡಸಾಲೆ’ ಅಂದು ಸನ್ನದ್ಧವಾಗಿತ್ತು.
ಇಂದು ಹೇಗಾಗಿದೆ?
ಆದರೆ ಇಂದು `ಪಡಸಾಲೆ’ ಆಗಿನಂತೆ ಸುಸ್ಥಿತಿಯಲ್ಲಿಲ್ಲ. ಆಡಳಿತಾಂಗದ ಸಂಪೂರ್ಣ ನಿರ್ಲಕ್ಷೃಕ್ಕೊಳಗಾಗಿದೆ ಎಂಬುದು ಸಾರ್ವತ್ರಿಕವಾಗಿ ಕೇಳಿಬರುತ್ತಿರುವ ದೂರು.
`ಪಡಸಾಲೆ’ಯ ಆವರಣ ಸರ್ಕಾರಿ ಹಾಗೂ ಖಾಸಗಿ ವಾಹನಗಳ ಪಾರ್ಕಿಂಗ್ ತಾಣವಾಗಿಬಿಟ್ಟಿದೆ. ಒಂದು ಬದಿಯಲ್ಲಿ ಹಳೆಯ ಸರ್ಕಾರಿ ವಾಹನಗಳನ್ನು ಖಾಯಂ ಆಗಿ ನಿಲುಗಡೆಗೊಳಿಸಲಾಗಿದೆ. ಅದರ ಪಕ್ಕದಲ್ಲೇ ದಿನವೂ ಇತರೆ ಸರ್ಕಾರಿ ವಾಹನಗಳು ನಿಲುಗಡೆಗೊಳ್ಳುತ್ತಿವೆ. ಉಳಿದ ಜಾಗದಲ್ಲಿ ಖಾಸಗಿ ಕಾರುಗಳು, ಆಟೋರಿಕ್ಷಾಗಳು, ದ್ವಿಚಕ್ರ ವಾಹನಗಳು ಬಂದು ನಿಲುಗಡೆ ಯಾಗುತ್ತಿವೆ. ಕೆಲವೊಮ್ಮೆ `ಪಡಸಾಲೆ’ಯ ಷೆಲ್ಟರ್ ಒಳಗೇ ವಾಹನಗಳು ನುಗ್ಗಿ ನಿಲುಗಡೆಯಾಗುವ ಸಂದ`ರ್Àಗಳೂ ಇಲ್ಲದಿಲ್ಲ. ವಾಹನ ನಿಲುಗಡೆಯಿಂದ `ಪಡಸಾಲೆ’ಗೆ ಬರುವವವರಿಗೆ ಅಡ್ಡಿಯಾಗುತ್ತಿದೆ. “ಇದೇನು ಪಡಸಾಲೆ ಆವರಣವೋ? ವಾಹನಗಳ ಪಾರ್ಕಿಂಗ್ ತಾಣವೋ?” ಎಂದು ಬೇಸರದಿಂದ ಉದ್ಗರಿಸುವಂಥ ವಾತಾವರಣ ಅಲ್ಲುಂಟಾಗುತ್ತಿದೆ.
ಕೌಂಟರ್‍ಗಳ ಮುಂದಿನ ಸ್ಥಳ ಸ್ವಚ್ಛವಾಗಿಲ್ಲ. ಕಸ ಮತ್ತು ಧೂಳಿನಿಂದ ತುಂಬಿರುತ್ತದೆ. ಈ ಅಸ್ವಚ್ಛ ಸ್ಥಳದಲ್ಲಿ ಸರತಿಯಲ್ಲಿ ನಿಂತುಕೊಂಡೇ ಸಾರ್ವಜನಿಕರು ತಮ್ಮ ಅರ್ಜಿಗಳನ್ನು ಸಲ್ಲಿಸಬೇಕು. ದಿನವೂ ಈ ಸ್ಥಳವನ್ನು ಸ್ವಚ್ಛಗೊಳಿಸುತ್ತಿಲ್ಲವೇ ಎಂಬುದು ಸಾರ್ವಜನಿಕರ ಪ್ರಶ್ನೆ.
ಕೌಂಟರ್‍ಗಳ ಮುಂದೆ ಸಾರ್ವಜನಿಕರು ಸರತಿ ಸಾಲಿನಲ್ಲಿ ನಿಲ್ಲಲು ಅನುಕೂಲವಾಗುವಂತೆ ಸ್ಟೀಲ್ ಕಂಬಿಗಳನ್ನು (ರೈಲಿಂಗ್) ಹಾಕಲಾಗಿದ್ದುದರಲ್ಲಿ ಅರ್ಧ ಭಾಗ ಈಗ ಹಾಳಾಗಿದೆ. ಮುರಿದು ಬಿದ್ದಿದೆ. ಆ ಕಂಬಿಗಳು ಯಾವಾಗ ಬೇಕಾದರೂ ಕಣ್ಮರೆಯಾಗಬಹುದಾಗಿದೆ!
`ಶುದ್ಧ ಕುಡಿಯುವ ನೀರಿನ ಘಟಕ’ ಎಂಬುದು ಈಗ ಇಲ್ಲಿ ನೆಪಮಾತ್ರಕ್ಕೆ ಮಾತ್ರ ಇರುವಂತಿದೆ. ಕೆಟ್ಟು ಹೋಗಿರುವ ಈ ಘಟಕ ಬಹು ದೀರ್ಘಕಾಲದಿಂದ ನಿರುಪಯುಕ್ತವಾಗಿದೆ. ಬಾಯಾರಿ ಬಂದವರಿಗೆ ಈಗ ಇಲ್ಲಿ ನೀರಿಲ್ಲ. ನಗರ ಹಾಗೂ ತಾಲ್ಲೂಕಿನ ವಿವಿಧೆಡೆಗಳಿಂದ ಬರುವ ಸಾರ್ವಜನಿಕರು ಕುಡಿಯುವ ನೀರಿಗಾಗಿ ಪರದಾಡಬೇಕಾಗಿದೆ.