ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕ ಎಂದು ನಮೂದಿಸುವಂತೆ ಒತ್ತಾಯಿಸಿ ಧರಣಿ.

ಚಳ್ಳಕೆರೆ

     ತಾಲ್ಲೂಕಿನಲ್ಲಿ ಸುಮಾರು 15 ವರ್ಷಗಳಿಂದ 1 ರಿಂದ 8 ತರಗತಿಯ ಮಕ್ಕಳಿಗೆ ಪದವೀಧರ ಶಿಕ್ಷಕರು ವಿವಿಧ ವಿಷಯಗಳ ಬೋಧನೆಯನ್ನು ಮಾಡುತ್ತಾ ಬಂದಿದ್ದು, ಪದವೀಧರ ಶಿಕ್ಷಕರ ಸಹಕಾರದಿಂದ ತಾಲ್ಲೂಕಿನ ಸಾವಿರಾರು ಮಕ್ಕಳು ಉತ್ತಮ ಜ್ಞಾನ ಪಡೆಯುವಲ್ಲಿ ಯಶಸ್ಸಿಯಾಗಿದ್ಧಾರೆ. ತಾಲ್ಲೂಕಿನ 850ಕ್ಕೂ ಹೆಚ್ಚು ಪದವೀಧರ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದು, ಸರ್ಕಾರ ಈ ಶಿಕ್ಷಕರಿಗೆ ನ್ಯಾಯ ದೊರಕಿಸಿಕೊಡುವಲ್ಲಿ ವಿಫಲವಾಗಿದೆ ಎಂದು ರಾಜ್ಯ ಪ್ರಾಥಮಿಕ ಪದವೀಧರ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ಕೋಟ್ರಪ್ಪ ಆರೋಪಿಸಿದರು.

       ಅವರು, ಶನಿವಾರ ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಮುಂಭಾಗದಲ್ಲಿ ಹಮ್ಮಿಕೊಂಡಿದ್ದ ಒಂದು ದಿನದ ಸಾಂಕೇತಿಕ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸಂಘದ ಬೇಡಿಕೆಗಳ ಬಗ್ಗೆ ಮನವಿ ಅರ್ಪಿಸಿ ಮಾತನಾಡಿದರು. ತಾಲ್ಲೂಕಿನ ಪದವೀಧರ ಶಿಕ್ಷಕರು ಈಗಾಗಲೇ ಸೇವಾ ಕಾರ್ಯದಲ್ಲಿ ನಿರತರಾಗಿದ್ದು, ಹೊಸ ವೃಂದ ಮತ್ತು ವೃಂದ ಬಲ ನಿರ್ಧಾರದ ಆದೇಶ ಸಂಖ್ಯೆ ಪ್ರಕಾರ ಪದವೀಧರ ಶಿಕ್ಷಕರನ್ನು ಪ್ರಾಥಮಿಕ ಶಾಲಾ ಶಿಕ್ಷಕವೆಂದು ಪದನಾಮಕರೀಸಿರುವುದು ಖಂಡನೀಯ. ಈಗಾಗಲೇ ಈ ಬಗ್ಗೆ ಕಳೆದ ಫೆ.2018 ರಂದು ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಧರಣಿ ಸತ್ಯಾಗ್ರಹ ನಡೆಸಿ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರೆಂದು ಘೋಷಿಸ ಬೇಕೆಂದು ಮನವಿ ಮಾಡಲಾಗಿತ್ತು.

       ಆದರೆ, ಸರ್ಕಾರ ನಿರ್ಲಕ್ಷ್ಯ ತಾಳಿದ ಹಿನ್ನೆಲೆಯಲ್ಲಿ ರಾಜ್ಯ ಸಂಘದ ಸೂಚನೆಯಂತೆ ಸಾಂಕೇತಿಕ ಧರಣಿ ಸತ್ಯಾಗ್ರಹ ನಡೆಸಿ ಮನವಿ ನೀಡುತ್ತಿದ್ದು, ನಮ್ಮ ಮನವಿಯನ್ನು ಸರ್ಕಾರ ನಿರ್ಲಕ್ಷಿಸಿದಲ್ಲಿ ಪ್ರಸ್ತುತ ವರ್ಷ ಜುಲೈ-1 ರಿಂದ ನಾವು ನಮ್ಮ ಬೋಧನೆಯನ್ನು ಕೇವಲ ಒಂದರಿಂದ ಐದನೇ ತರಗತಿ ವರೆಗೂ ಮಾತ್ರ ನೀಡುತ್ತೇವೆ. ಈ ಬಗ್ಗೆ ಸರ್ಕಾರ ಕೂಡಲೇ ನಮ್ಮ ಬೇಡಿಕೆಯನ್ನು ಈಡೇರಿಸಬೇಕೆಂದು ಅವರು ಒತ್ತಾಯಿಸಿದರು.

       ಮನವಿ ಸ್ವೀಕರಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್.ವೆಂಕಟೇಶಪ್ಪ, ತಾಲ್ಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಪದವೀಧರ ಪ್ರಾಥಮಿಕ ಶಿಕ್ಷಕರ ಬಗ್ಗೆ ಶಿಕ್ಷಣ ಇಲಾಖೆಗೆ ಅಪಾರ ಗೌರವವಿದೆ. ಉನ್ನತ್ತ ಪದವಿಯನ್ನು ಅಲಂಕರಿಸಿದ್ದರೂ ತಾವುಗಳು ಪ್ರಾಥಮಿಕ ಹಂತದಲ್ಲೇ ಮಕ್ಕಳಿಗೆ ಮನಮುಟ್ಟುವಂತೆ ಬೋಧನೆ ಮಾಡುತ್ತಿದ್ದು ನಿಮ್ಮ ಬೇಡಿಕೆ ಸಮಂಜಸವಾಗಿದ್ದು, ಈ ಕೂಡಲೇ ಮನವಿಯನ್ನು ಸರ್ಕಾರಕ್ಕೆ ಕಳುಹಿಸಿಕೊಡುವ ಭರವಸೆ ನೀಡಿದರು.

        ಧರಣಿ ಸತ್ಯಾಗ್ರಹದಲ್ಲಿ ಗೌರವಾಧ್ಯಕ್ಷ ಪಿ.ಎಲ್.ವಿಜಯ, ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಖಾಸಿಂ, ಕೋಶಾಧ್ಯಕ್ಷ ರಂಗನಾಥ, ಉಪಾಧ್ಯಕ್ಷರಾದ ಎಸ್.ಕೆ.ಕರಿಯಮ್ಮ, ಈರಣ್ಣ, ಸಹ ಕಾರ್ಯದರ್ಶಿ ಎಲ್.ಶಿವಶಂಕರಪ್ಪ, ಸೋಮಶೇಖರ್, ಸಂಘಟನಾ ಕಾರ್ಯದರ್ಶಿ ಎಚ್.ಹನುಮಂತಪ್ಪ, ಎಚ್.ರಮೇಶ್, ಎಸ್.ಗೀತಾ, ನಿರ್ದೇಶಕರಾದ ನಾಗರಾಜು, ಚಂದ್ರಶೇಖರ್ ಮುಂತಾದವರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link