ರಾಣಿಬೆನ್ನೂರು
ಸತತ 5ವರ್ಷಗಳ ಕಾಲ ಬರಗಾಲದಿಂದ ತತ್ತರಿಸುವ ತಾಲೂಕಿನ ರೈತರಿಗೆ 2017-18 ಮತ್ತು 2018-19 ನೇ ಸಾಲಿನ ಬೆಳೆವಿಮೆ ಮತ್ತು ಬೆಳೆ ಪರಿಹಾರ ಬಿಡುಗಡೆಗೊಳಿಸಬೇಕು. ಆರೇಮಲ್ಲಾಪುರ ಸೇರಿದಂತೆ ತಾಲೂಕಿನ ಎಲ್ಲ ಗ್ರಾಮಗಳಲ್ಲಿರುವ ನಿವೇಶನ ರಹಿತರಿಗೆ ತುರ್ತಾಗಿ ನಿವೇಶನ ವಿತರಿಸಬೇಕು ಇಲ್ಲವಾದರೆ ತಾಲೂಕಿನಾದ್ಯಂತ ಉಗ್ರ ಹೋರಾಟ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ತಾಲೂಕಿನ ಆರೇಮಲ್ಲಾಪುರದ ಶ್ರೀ ಶರಣಬಸವೇಶ್ವರ ಮಠದ ಪೀಠಾಧಿಪತಿ ಶ್ರೀ ಪ್ರಣವಾನಂದರಾಮ ಮಹಾಸ್ವಾಮಿಗಳು ಹೇಳಿದರು.
ಶುಕ್ರವಾರದಂದು ತಾಲೂಕಿನ ಆರೇಮಲ್ಲಾಪುರದ ಶ್ರೀಮಠದಿಂದ ನೂರಾರು ರೈತರೊಂದಿಗೆ ಪಾದಯಾತ್ರೆ ಮೂಲಕ ನಗರಕ್ಕೆ ಆಗಮಿಸಿ ತಹಶೀಲ್ದಾರವರಿಗೆ ಮನವಿ ಪತ್ರ ಅರ್ಪಿಸಿ ಮಾತನಾಡಿದರು. ಕಳೆದ ಅನೇಕ ವರ್ಷಗಳಿಂದ ಈ ತಾಲೂಕಿನಲ್ಲಿ ಸಕಾಲಕ್ಕೆ ಮಳೆಯಾಗದೆ ಫಸಲು ಕೈಗೆ ಬಾರದೆ ರೈತರು ಬಹಳಷ್ಟು ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. ಅಂತವರಿಗೆ ಆಸರೆಯಾಗುವ ಮೂಲಕ ಸರಕಾರವು ಬೆಳೆ ವಿಮೆ, ಬೆಳೆ ಪರಿಹಾರ, ಭೂ ಪರಿಹಾರಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.
ತಾಲೂಕಿನಲ್ಲಿ ವಲಸೆ ಹೋಗುವವರ ಸಂಖ್ಯೆ ದಿನೆ ದಿನೆ ಅಧಿಕವಾಗುತ್ತಿದೆ. ಅಂತಹ ಜನರನ್ನು ಗುರುತಿಸಿ ಅವರಿಗೆ ಉದ್ಯೋಗ ಕಲ್ಪಿಸಿ ಬದುಕಲು ಅವಕಾಶ ಮಾಡಿಕೊಡಬೇಕು. ಇಲ್ಲವಾದರೆ ಅಂತಹ ವಲಸೆ ಹೋಗುವವರ ಕುಟುಂಬದ ಮಕ್ಕಳು ಶಿಕ್ಷಣದಿಂದಲೂ ವಂಚಿತವಾಗುತ್ತವೆ. ಅಂತಹ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಅವರಿಗೆ ಶಿಕ್ಷಣ ನೀಡುವ ಜವಾಬ್ದಾರಿ ಜೊತೆಗೆ ಅವರುಗಳ ಪೋಷಕ ಮತ್ತು ಪಾಲಕರಿಗೆ ಉದ್ಯೋಗ ಖಾತ್ರೆಯಲ್ಲಿ ಹೆಚ್ಚಿನ ಉದ್ಯೋಗ ಕಲ್ಪಿಸಬೇಕೆಂದು ಶ್ರೀಗಳು ಒತ್ತಾಯಿಸಿದರು.
ಗ್ರಾಮದಲ್ಲಿರುವ 154ನೇ ಸರ್ವೆ ನಂಬರ್‍ನಲ್ಲಿ ಈಗಾಗಲೇ 17 ಎಕರೆ ಸೈಟ್ ನಿರ್ಮಾಣ ಮಾಡಲಾಗಿದೆ. 10 ಎಕರೆ ಜಾಗೆಯಲ್ಲಿ ನಿವೇಶನ ರಹಿತರಿಗೆ ಮಂಜೂರಾಗಿ 2ವರ್ಷಗಳಾದರೂ ಸಹ ಈ ವರೆಗೂ ಏನೂ ಕಾರ್ಯಗತವಾಗಿಲ್ಲ. 25 ಎಕರೆ ಬೇರೆ ಇರುವ ಜಾಗೆಯಲ್ಲಿ 19 ಎಕರೆ ಹುಲ್ಲುಗಾವಲು ಇದ್ದು, ಇದರಲ್ಲೂ ಸಹ ನಿವೇಶನ ಮಾಡಬಹುದಾಗಿದೆ ಈ ಬಗ್ಗೆ ತಾಲೂಕ ಮತ್ತು ಜಿಲ್ಲಾಡಳಿತವು ತುರ್ತಾಗಿ ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದರು.
ಈಗಾಗಲೇ ನಾವು ಸಾಕಷ್ಟು ಬಾರಿ ಗ್ರಾಪಂ ಅಧ್ಯಕ್ಷರಿಗೆ ಮತ್ತು ಪಿಡಿಓ ಅಧಿಕಾರಿಗಳಿಗೆ ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಈ ಬಗ್ಗೆ ತಾಪಂ, ತಹಶೀಲ್ದಾರ ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಲಾಗಿದೆ. ಹಿರಿಯ ಮತ್ತು ಕಿರಿಯ ಅಧಿಕಾರಿಗಳ ಭರವಸೆಯ ಮೇರೆಗೆ ಜು.1 ರಿಂದ 24 ಗಂಟೆಗಳ ಕಾಲ ಕೈಗೊಳ್ಳಲು ತೀರ್ಮಾನಿಸಿದ್ದ ಅಹೋರಾತ್ರಿ ಉಪವಾಸ ಸತ್ಯಾಗ್ರಹವನ್ನು ಹಿಂಪಡೆಯಲಾಗಿದೆ. ಶೀಘ್ರವೇ ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ಮತ್ತೆ ಉಗ್ರ ಹೋರಾಟ ಮಾಡುವುದಾಗಿ ಶ್ರೀಗಳು ಎಚ್ಚರಿಸಿದರು.
ಬಂಜಾರ ಸಮಾಜದ ಸೇವಾಲಾಲ್ ಸರ್ದಾರ್ ಮಹಾರಾಜ ಶ್ರೀಗಳು, ನಿಂಗಪ್ಪ ಹಲವಾಗಲ, ಗಾಳೆಪ್ಪ ಮರಿಯಮ್ಮನವರ, ಮಂಜುನಾಥ ವಡ್ಡರ, ಭಾಗ್ಯಲಕ್ಷ್ಮೀ ಶಿವಳ್ಳಿ, ರೇಣುಕಮ್ಮ ಹಲವಾಗಲ, ಕರಬಸವ್ವ ಹಳ್ಳಳ್ಳಿ, ಲಲಿತವ್ವ ಚಳಗೇರಿ, ಗೌರಮ್ಮ ನಿಟ್ಟೂರು, ಮಂಜುಳಾ ಮಣಕೂರ, ತಿರುಕಮ್ಮ, ಪ್ರೇಮಕ್ಕ, ಮಂಜವ್ವ, ಲಕ್ಷ್ಮವ್ವ, ಕಿರಣ ಗೂಳೇದ, ಅಶೋಕ ಸೂರ್ವೆ, ರಾಮಚಂದ್ರಪ್ಪ ಬೇವಿನಮರದ, ಕೃಷ್ಣಪ್ಪ ನಾಗರಜ್ಜಿ, ಪಾಂಡಪ್ಪ ಬೇವಿನಮರದ, ಬಸವಂತಪ್ಪ ಕೊಪ್ಪದ, ಮಾಲತೇಶ ಕೊಳಜಿ, ಶಿವಣ್ಣ ಸಣ್ಣಬೊಮ್ಮಾಜಿ ಸೇರಿದಂತೆ ಮತ್ತಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
