ಹಗರಿಬೊಮ್ಮನಹಳ್ಳಿ:
ಸಿರಾಜ್‍ಶೇಖ್ ಒಬ್ಬ ಪಿಡುಗು, ಕೆಟ್ಟಹುಳ, ಸತ್ತಹಾವು, ಒಡೆದಾಳುವ ನೀತಿ ಅನುಸರಿಸುವ ವ್ಯಕ್ತಿ, ಬೆಳೆನಾಶಕ ಔಷಧಿ, ನಿಷ್ಠವಂತರನ್ನು ಮೂಲೆಗುಂಪುಮಾಡುವ ಮನುಷ್ಯ, ಒಬ್ಬರಮೇಲೊಬ್ಬರನ್ನು ಎತ್ತಿಕಟ್ಟುವ ತಂತ್ರಗಾರ ಎಂಥೆಲ್ಲ ಬಿರುದಾವಳಿಗಳ ಸುರಿಮಳೆಗೈದ ಪ್ರಸಂಗ ಶಾಸಕ ಎಸ್.ಭೀಮಾನಾಯ್ಕರ ಜನಸಂಪರ್ಕ ಕಚೇರಿಯಲ್ಲಿ ಜರುಗಿತು.
ಪಟ್ಟಣದ ಶಾಸಕ ಎಸ್.ಭೀಮಾನಾಯ್ಕ್‍ರ ಜನಸಂಪರ್ಕ ಕಚೇರಿಯಲ್ಲಿ, ಕಾಂಗ್ರೆಸ್ ಕಾರ್ಯಕರ್ತರಿಂದ ಶುಕ್ರವಾರ ಕರೆಯಲಾಗಿದ್ದ ಸಭೆ ಮತ್ತು ಪತ್ರಿಕಾಗೋಷ್ಠಿಯಲ್ಲಿ ಸೇರಿದ್ದ ಒಬ್ಬೊಬ್ಬ ಮುಖಂಡರು ಮತ್ತು ಕಾರ್ಯಕರ್ತರಿಂದ ಕೇಳಿಬಂದ ಮಾತುಗಳಿವು. ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಸೋಮಲಿಂಗಪ್ಪ, ಹಿರಿಯ ಮುಖಂಡ ಹೆಗ್ಡಾಳ್ ರಾಮಣ್ಣ ಹಾಗೂ ಕೆ.ಪಿ.ಸಿ.ಸಿ.ಸದಸ್ಯ ಕುರಿ ಶಿವಮೂರ್ತಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ಬಹುತೇಕ ಮುಖಂಡರು ಮತ್ತು ಕಾರ್ಯಕರ್ತರು ಮಾತನಾಡಿ, ಕಾಂಗ್ರೆಸ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಸಿರಾಜ್‍ಶೇಖ್‍ರನ್ನು ಪಕ್ಷದಿಂದ ಉಚ್ಛಾಟಿಸಬೇಕು, ಒಂದು ವೇಳೆ ಆಗದಿದ್ದರೆ ನಾವು ಅಭ್ಯರ್ಥಿ ಉಗ್ರಪ್ಪನವರ ಪ್ರಚಾರಕ್ಕೆ ಹೋಗದೆ, ನಮ್ಮದೊಂದು ಮತ ಕಾಂಗ್ರೆಸ್ ಪಕ್ಷಕ್ಕೆ ಹಾಕಿ ಮನೆಯಲ್ಲಿರುತ್ತೇವೆ ಎಂದು ಕೆಲವರು ಹೇಳಿಕೆಗಳನ್ನು ನೀಡಿದರು.
ತಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷ ಬುಡ್ಡಿಬಸವರಾಜ್ ಮಾತನಾಡಿ, ಸಿರಾಜ್‍ಶೇಖ್ ಸತ್ಯವಂತನಾಗಿದ್ದರೆ, ಪಕ್ಷವಿರೋಧಿ ಚಟುವಟಿಕೆಮಾಡಿಲ್ಲ ಎಂದು ಖುರಾನ್ ಮುಟ್ಟಿ ಪ್ರಮಾಣಮಾಡಲಿ, ನಾವು ಹಾಲು ಮುಟ್ಟಿ ಪ್ರಮಾಣ ಮಾಡುತ್ತೇವೆ ಎಂದು ಸವಾಲೆಸೆದರು.
ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಹೆಗ್ಡಾಳ್ ರಾಮಣ್ಣ ಮಾತನಾಡಿ, ಸಿರಾಜ್‍ಶೇಖ್ ನಡೆದುಬಂದ ಹಾದಿಯನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಾ, ಅವರೊಬ್ಬ ಯಾರನ್ನು ನಂಬದ ವ್ಯಕ್ತಿ, ನಮ್ಮಲ್ಲಿಯೇ ಒಬ್ಬರ ಮೇಲೊಬ್ಬರನ್ನು ಎತ್ತಿಕಟ್ಟುತ್ತಾ ಒಡೆದಾಳುವ ನೀತಿಯನ್ನು ಅನುಸರಿಸಿದವರು.
ಆದ್ದರಿಂದ ಅಂತಹ ಪಕ್ಷ ವಿರೋಧಿ ಚಟುವಟಿಕೆಮಾಡಿದ ವ್ಯಕ್ತಿ ನಮಗೆ ಬೇಕಿಲ್ಲ. ಅವರು ಪ್ರಚಾರ ಸಮಿತಿ ಅಧ್ಯಕ್ಷರಾಗಿ ಮುಂದುವರೆಯುವುದು ಬೇಡ, ಕೂಡಲೆ ಪಕ್ಷದಿಂದ ವಜಾಗೊಳಿಸಿ, ಅಭ್ಯರ್ಥಿ ಗೆಲುವಿಗೆ ಹೈಕಮಾಂಡ್ ನೆರವಾಗಬೇಕು ಎಂದರು.
ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಸೋಮಲಿಂಗಪ್ಪ ಮಾತನಾಡಿ, ಪಕ್ಷ ವಿರೋಧಿ ಚಟುವಟಿಕೆಮಾಡಿದ ವ್ಯಕ್ತಿಗೆ ಕಾಂಗ್ರೆಸ್ ಹೈಕಮಾಂಡ್ ಸ್ಥಾನಮಾನ ನೀಡಿದೆ, ಇದರ ಉದ್ದೇಶವೇನು ಎಂಬುದು ಕ್ಷೇತ್ರದ ಪಕ್ಷದ ಕಾರ್ಯಕರ್ತರಿಗೆ ಅರ್ಥವಾಗುತ್ತಿಲ್ಲ. ಅಭ್ಯರ್ಥಿ ಉಗ್ರಪ್ಪ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಇಲ್ಲಿಗೆ ಬಂದು ಶಾಸಕ ಭೀಮಾನಾಯ್ಕ್ ಸಮ್ಮುಖದಲ್ಲಿ ಚರ್ಚಿಸಲಿ, ಒಂದು ವೇಳೆ ರಾಜಿಯಾದರೆ ಸಿರಾಜ್‍ಶೇಖ್ ಈ ಕಚೇರಿಗೆ ಬಂದು ನಮ್ಮೊಂದಿಗೆ ಬೆರೆಯಲಿ ಎಂದು ಸುದ್ದಿಗಾರರ ಪ್ರಶ್ನೆಗೆ ಗೊಂದಲದ ಉತ್ತರ ನೀಡಿದರು.
ಹೊಸಪೇಟೆ ಎಪಿಎಂಸಿ ಮಾಜಿ ಅಧ್ಯಕ್ಷ ಹಾಗೂ ಸಮಾಜ ಸೇವಕ ಕುರಿ ಶಿವಮೂರ್ತಿ, ನ್ಯಾಯಾಬೆಲೆ ಅಂಗಡಿ ಕೊಟ್ರೇಶ್, ಅಂಬಾಡಿ ನಾಗರಾಜ್, ಜಿ.ಪಂ.ಮಾಜಿ ಸದಸ್ಯರಾದ ಪರಶುರಾಮ್, ಭೀಮಣ್ಣ, ಅಕ್ಕಿ ತೋಟೇಶ್, ತಾ.ಪಂ.ಮಾಜಿ ಸದಸ್ಯ ಉಪ್ಪಾರ್ ಸೋಮ, ಟಿಪ್ಪು ಸುಲ್ತಾನ್ ಸಂಘಟನೆಯ ಅಧ್ಯಕ್ಷ ಸೈಯದ್ ಇರ್ಫಾನ್, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ನೂರ್‍ಭಾಷ, ಡಿಶ್ ಮಂಜುನಾಥ, ಜಂದಿಸಾಬ್, ಮರಿಯಮ್ಮನಹಳ್ಳಿ ಬುಡೇನ್ ಸಾಬ್, ಎಚ್.ಪ್ರಭು, ಚನ್ನಬಸಪ್ಪ, ನೆಲ್ಕುದ್ರಿ ಚಂದ್ರಪ್ಪ ಸೇರಿದಂತೆ ಅನೇಕರು ಸಿರಾಜ್‍ಶೇಖ್ ವಿರುದ್ಧ ಏರು ಧ್ವನಿಯಲ್ಲಿಯೇ ಮಾತನಾಡಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಟಿ.ರಾಘವೇಂದ್ರ, ಸದಸ್ಯರಾದ ಜೋಗಿ ಹನುಮಂತು, ಕನಕಪ್ಪ, ಹುಡೇದ್ ಗುರುಬಸವರಾಜ್ ಮುಖಂಡರಾದ ಮೈಲಾರಪ್ಪ, ಗೆದ್ದಲಕಟ್ಟೆ ತಿಮ್ಮಪ್ಪ, ನೆಲ್ಲು ಇಸ್ಮಾಯಿಲ್, ಹಾಲ್ದಾಳ್ ವಿಜಯಕುಮಾರ್, ಮೃತ್ಯುಂಜಯ ಸ್ವಾಮಿ, ಜಿಲ್ಲೆಯ (ಗ್ರಾಮೀಣ) ಯುವ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ಡಿ.ಎಂ.ಅಬ್ದುಲ್ಲಾ, ದಾಣಿ ಸುರೇಶ್, ಬೆಣಕಲ್ಲು ಹನುಮಂತು, ಕೆಜಿಎನ್ ದಾದಾಪೀರ್, ಸೋಗಿ ಕೊಟ್ರೇಶ್, ಬಂಡಿಹಳ್ಳಿ ಪ್ರಕಾಶ ಸೇರಿದಂತೆ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.
ಸಭೆ ಕರೆದಿರುವ ಉದ್ದೇಶ ಸಿರಾಜ್‍ಶೇಖ್‍ರನ್ನು ಪಕ್ಷದಿಂದ ಕೈಬಿಡಬೇಕೆನ್ನುವ ಉದ್ದೇಶವಾಗಿದ್ದರೂ, ಕೊನೆಯಲ್ಲಿ ರಾಜಿಯ ಮಾತುಗಳು ಕೇಳಿಬಂದವು. ಡಿ.ಕೆ.ಶಿವಕುಮಾರ್ ಹಾಗೂ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಶಾಸಕರ ಸಮ್ಮುಖದಲ್ಲಿ ಪ್ರಚಾರಕ್ಕೆ ತೆರಳಲಿ ಎಂದು ಮುಖಂಡರು ತಿಳಿಸಿದರು.