ಪಾಲಿಕೆಯ 22ನೇ ವಾರ್ಡ್ ಸ್ಪರ್ಧೆಗೆ ಆಕಾಂಕ್ಷಿಗಳ ಪೈಪೋಟಿ

ತುಮಕೂರು

      ತುಮಕೂರು ಮಹಾನಗರ ಪಾಲಿಕೆಯ 22ನೇ ವಾರ್ಡಿಗೆ ಈ ತಿಂಗಳ 29ರಂದು ಉಪಚುನಾವಣೆ ನಡೆಯಲಿದೆ. ಸಾಮಾನ್ಯ ವರ್ಗಕ್ಕೆ ಮೀಸಲಾದ ಈ ವಾರ್ಡಿಗೆ ಸ್ಪರ್ಧೆ ಮಾಡಲು ಕಾಂಗ್ರೆಸ್, ಜೆಡಿಎಸ್, ಬಿಜೆಪಿಗಳಲ್ಲಿ ಟಿಕೆಟ್ ಆಕಾಂಕ್ಷಿಗಳು ನಾಯಕರಿಗೆ ಮುಗಿಬಿದ್ದೀದ್ದಾರೆ.

     ಈ ವಾರ್ಡಿನಿಂದ ಜೆಡಿಎಸ್‍ನಿಂದ ಈ ಬಾರಿ ಮರು ಆಯ್ಕೆಯಾಗಿದ್ದ ಮಾಜಿ ಮೇಯರ್, ಹಾಲಿ ಸದಸ್ಯ ರವಿಕುಮಾರ್ ಸೆಪ್ಟಂಬರ್ 30ರಂದು ಹತ್ಯೆಗೀಡಾದರು. ಇವರ ನಿಧನದಿಂದ ತೆರವಾದ ಸ್ಥಾನಕ್ಕೆ ಸುಮಾರು ಏಳು ತಿಂಗಳ ತರುವಾಯ ಚುನಾವಣೆ ನಡೆದಿದೆ.
35 ಸದಸ್ಯರಿರುವ ನಗರ ಪಾಲಿಕೆಯಲ್ಲಿ ಈ ಬಾರಿ ಜೆಡಿಎಸ್ 12, ಕಾಂಗ್ರೆಸ್ ಹಾಗೂ ಬಿಜೆಪಿ ತಲಾ 10 ಸದಸ್ಯರು ಮತ್ತು ಮೂವರು ಪಕ್ಷೇತರರು ಜಯಗಳಿಸಿದ್ದರು.

     ಇವರಲ್ಲಿ ರವಿಕುಮಾರ್ ನಿಧನದಿಂದ ಜೆಡಿಎಸ್‍ಗೆ ಒಂದು ಸ್ಥಾನ ನಷ್ಟವಾದಂತಾಗಿದೆ. ಯಾವುದೇ ಪಕ್ಷಕ್ಕೆ ಆಡಳಿತ ರಚಿಸುವಷ್ಟು ಬಹುಮತ ಸಿಕ್ಕದ ಕಾರಣ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡು ಪಾಲಿಕೆ ಆಡಳಿತ ಹಿಡಿದಿವೆ. ಅಧಿಕಾರಕ್ಕೆ ಪ್ರಯತ್ನಪಟ್ಟ ಬಿಜೆಪಿ ಸಾಧ್ಯವಾಗದೆ ವಿಪಕ್ಷ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

      ತುಮಕೂರು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡು ಸೀಟು ಹಂಚಿಕೆ ಮಾಡಿಕೊಂಡಿವೆ. ನಗರ ಪಾಲಿಕೆಯಲ್ಲ ಇವೇ ಎರಡು ಪಕ್ಷಗಳು ಒಟ್ಟಾಗಿ ಆಡಳಿತ ರಚಿಸಿವೆ. ಆದರೆ, 22ನೇ ವಾರ್ಡಿನ ಉಪಚುನಾವಣೆಯಲ್ಲಿ ಯಾವ ಪಕ್ಷಗಳ ನಡುವೆ ಮೈತ್ರಿ ಇಲ್ಲ. ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿವೆ.

      ಸ್ಥಾನ ಉಳಿಸಿಕೊಳ್ಳಲು ಜೆಡಿಎಸ್ ಪ್ರಯತ್ನದಲ್ಲಿದ್ದರೆ, ಕಾಂಗ್ರೆಸ್, ಬಿಜೆಪಿ ಮತ್ತೊಂದು ಸ್ಥಾನಕ್ಕಾಗಿ ಪೈಪೋಟಿ ನಡೆಸಬೇಕಾಗಿದೆ. ಈ ಚುನಾವಣೆಯಲ್ಲಿ ಯಾವುದೇ ಪಕ್ಷ ಗೆದ್ದರೂ ಅಧಿಕಾರ ಹಿಡಿಯುವಷ್ಟು ಲಾಭ ಸಿಗದು, ಆದರೂ ಗೆದ್ದು ಗೌರವ ಉಳಿಸಿಕೊಳ್ಳಲು ಪಕ್ಷಗಳು ಈ ಉಪ ಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿವೆ. ಜೆಡಿಎಸ್ ಪ್ರಾಬಲ್ಯದ ವಾರ್ಡ್ ಎನ್ನಲಾದ 22ನೇ ವಾರ್ಡಿಗೆ ಸ್ಪರ್ಧಿಸಲು ಜೆಡಿಎಸ್‍ನಲ್ಲಿ ಹೆಚ್ಚು ಪೈಪೋಟಿ ಇದೆ. ಕಳೆದ ಚುನಾವಣೆಯಲ್ಲಿ ಜೆಡಿಎಸ್‍ನ ರವಿಕುಮಾರ್ 1748 ಮತ ಪಡೆದಿದ್ದರೆ, ಸಮೀಪ ಸ್ಪರ್ಧಿ ಬಿಜೆಪಿಯ ಸಂದೀಪ್ ಗೌಡ 852 ಮತ ಗಳಿಸಿದ್ದರು. ಕಾಂಗ್ರೆಸ್‍ನ ರಾಘವೇಂದ್ರಸ್ವಾಮಿ ನಿರಾಶೆ ಅನುಭವಿಸಿದ್ದರು.

      ಜೆಡಿಎಸ್‍ನಿಂದ ರವಿಕುಮಾರ್ ಪತ್ನಿಗೆ ಟಿಕೆಟ್ ಕೊಡಬೇಕೆಂಬ ಚಿಂತನೆ ನಡೆದಿದ್ದರೂ ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವುದರಿಂದ ಇತರರು ಅವಕಾಶ ಪಡೆಯಬಹುದು ಎನ್ನಲಾಗಿದೆ. ನಗರ ಪಾಲಿಕೆ ಮಾಜಿ ಉಪಮೇಯರ್ ಟಿ ಆರ್ ನಾಗರಾಜು, ನಗರ ಜೆಡಿಎಸ್ ಅಧ್ಯಕ್ಷ ಬೆಳ್ಳಿ ಲೋಕೇಶ್ ಮೊದಲಾದವರು ಪ್ರಮುಖ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಈ ಬಗ್ಗೆ ಸಚಿವ ಎಸ್ ಆರ್ ಶ್ರೀನಿವಾಸ್ ತೀರ್ಮಾನ ಮಾಡಲಿದ್ದಾರೆ

        ಬಿಜೆಪಿಯಲ್ಲೂ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಕಳೆದ ಚುನಾವಣೆಯಲ್ಲಿ ಸೋತ ಸಂದೀಪ್ ಗೌಡ, ಹಿಂದೊಮ್ಮೆ ಇದೇ ವಾರ್ಡಿನಿಂದ ಸ್ಪರ್ಧಿಸಿ ಪರಾಭವಗೊಂಡಿದ್ದ ಟಿ ಆರ್ ಸದಾಶಿವಯ್ಯ, ಮಾಜಿ ಸದಸ್ಯ ಕೆ ಪಿ ಮಹೇಶ್ ಮೊದಲಾದವರು ಬಿಜೆಪಿ ಟಿಕೆಟ್‍ಗೆ ಪ್ರಯತ್ನ ನಡೆಸಿದ್ದಾರೆ. ಕಾಂಗ್ರೆಸ್‍ನಲ್ಲೂ ಹಲವರು ಕಣಕ್ಕಿಳಿಯುವ ಪ್ರಯತ್ನದಲ್ಲಿದ್ದು ಪಕ್ಷಗಳು ಇಷ್ಟರಲ್ಲೇ ತಮ್ಮ ಅಭ್ಯರ್ಥಿಗಳನ್ನು ಪ್ರಕಟಿಸಲಿವೆ.

       ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಸಲ್ಲಿಸಲು ಮೇ 16 ಕಡೆಯ ದಿನವಾಗಿದ್ದು, ಮೇ 17ರಂದು ನಾಮಪತ್ರಗಳ ಪರಿಶೀಲನೆ ನಡೆಸಲಾಗುವುದು. ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಮೇ 20 ಕಡೆಯದಿನವಾಗಿದೆ. ಮೇ 29ರಂದು ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ನಡೆಯುವುದು. 31ರಂದು ಮತ ಎಣಿಕೆ ನಡೆಯಲಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap