ತುಮಕೂರು

ರಾಜ್ಯದ 10 ಮಹಾನಗರ ಪಾಲಿಕೆಗಳಿಗೆ ರಾಜ್ಯ ಸರ್ಕಾರವು ಮಹಾತ್ಮಗಾಂಧಿ ನಗರ ವಿಕಾಸ ಯೋಜನೆ (ಎಂ.ಜಿ.ಎನ್.ವಿ.ವೈ.) ಅಡಿಯಲ್ಲಿ ಅನುದಾನ ಮಂಜೂರು ಮಾಡಿದ್ದು, ಅದರ ಪ್ರಕಾರ ತುಮಕೂರು ಮಹಾನಗರ ಪಾಲಿಕೆಗೆ 125 ಕೋಟಿ ರೂ. ಮಂಜೂರಾಗಿದೆ. ಈ ಅನುದಾನವನ್ನು ಬಳಕೆ ಮಾಡಿಕೊಳ್ಳಲು ಮಹಾನಗರ ಪಾಲಿಕೆಯು ಕ್ರಿಯಾಯೋಜನೆ ರೂಪಿಸುವುದು ಪ್ರಸ್ತುತ ಬಾಕಿ ಇದೆ.
2019-20 ನೇ ಸಾಲಿನ ರಾಜ್ಯ ಸರ್ಕಾರದ ಆಯವ್ಯಯದಲ್ಲಿ ಘೋಷಿಸಿರುವಂತೆ ಎಂ.ಜಿ.ಎನ್.ವಿ.ವೈ. ಅನುದಾನ ಮಂಜೂರಾತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಆಗಸ್ಟ್ 7 ರಂದೇ ಆದೇಶ (ಸಂಖ್ಯೆ: ನಅಇ/47/ಎಸ್.ಎಫ್.ಸಿ./2019, ದಿನಾಂಕ 07-08-2019) ಹೊರಡಿಸಿದೆ. 2019-20 ರಿಂದ 2023-24 ರವರೆಗೆ ನಾಲ್ಕು ವರ್ಷಗಳ ಅವಧಿಯಲ್ಲಿ ಮಾರ್ಗಸೂಚಿಗಳನ್ವಯ ಅನುಷ್ಠಾನಗೊಳಿಸಲು ಸರ್ಕಾರ ಸೂಚಿಸಿದೆ.
ಬಂಡವಾಳ ಸೃಜನೆಯಂತಹ ಹಾಗೂ ಪ್ರತಿ ಕಾಮಗಾರಿಯ ಅಂದಾಜು ಮೊತ್ತ 1 ಕೋಟಿ ರೂ.ಗಳಿಗೆ ಕಡಿಮೆಯಿಲ್ಲದಂತೆ ಇರಬೇಕು. ಅಂತಹದ್ದನ್ನು ಮಾತ್ರ ಕ್ರಿಯಾ ಯೋಜನೆಗೆ ಸೇರಿಸಬೇಕು. ಕನಿಷ್ಟ 5 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಪ್ಯಾಕೇಜ್ ಮಾಡಿ ಟೆಂಡರ್ ಕರೆಯಬೇಕು ಎಂದು ಸೂಚಿಸಲಾಗಿದೆ.
ಮಾರ್ಗಸೂಚಿಗಳ ಪ್ರಕಾರ
ಮಾರ್ಗಸೂಚಿ ಪ್ರಕಾರ, ಈ ಯೋಜನೆಯಡಿ ಪಾಲಿಕೆಗೆ ಲಭಿಸುವ ಒಟ್ಟುಮೊತ್ತದಲ್ಲಿ ಪ.ಜಾತಿ ಮತ್ತು ಗಿರಿಜನ ಉಪಯೋಜನೆಗಳಿಗೆ ಶೇ.24.10 ರಷ್ಟು ಮೊತ್ತದ ಪ್ರತ್ಯೇಕ ಕ್ರಿಯಾ ಯೋಜನೆಯನ್ನು ಸದರಿ ಉಪಯೋಜನೆಗಳಿಗೆ ಚಾಲ್ತಿಯಲ್ಲಿರುವ ಮಾರ್ಗಸೂಚಿಗಳನ್ವಯ ಸಿದ್ಧಪಡಿಸಬಹುದು. ಕೇಂದ್ರ ಪುರಸ್ಕøತ ಯೋಜನೆಗಳಿಗೆ ಬಾಕಿ ಇರುವ ಪಾಲಿಕೆಯ ಪಾಲಿನ ವಂತಿಕೆಯನ್ನು ಕಡ್ಡಾಯವಾಗಿ ಕಾಯ್ದಿರಿಸಬೇಕು.
ಬಳಿಕ ಉಳಿಯುವ ಹಣದಲ್ಲಿ 24/7 ಯೋಜನೆಗೆ ಬಳಸಬಹುದು. ಅದಕ್ಕೆ ಬಳಕೆಯಾದ ನಂತರ ಉಳಿಯುವ ಮೊತ್ತದಲ್ಲಿ ಮಳೆ ನೀರಿನ ಚರಂಡಿ, ಒಳಚರಂಡಿ ಕಾಮಗಾರಿ, ಗ್ರೇಡ್ ಸಪರೇಟರ್ ನಿರ್ಮಾಣ, ರಸ್ತೆ ಅಭಿವೃದ್ಧಿ, ರಿಂಗ್ ರಸ್ತೆ ಅಭಿವೃದ್ಧಿ, ಮೇಲ್ಸೇತುವೆ/ಕೆಳಸೇತುವೆ ನಿರ್ಮಾಣ, ವೃತ್ತಗಳ ಅಭಿವೃದ್ಧಿ, ಘನತ್ಯಾಜ್ಯ ವಿಲೇವಾರಿ, ಟ್ರಾಫಿಕ್ ವ್ಯವಸ್ಥೆ ಸುಧಾರಣೆ ಮೊದಲಾದ ಕಾಮಗಾರಿಗಳನ್ನು ಕೈಗೊಳ್ಳಬಹುದಾಗಿದೆ.
ಸರ್ಕಾರದ ಮಾರ್ಗಸೂಚಿಗಳನ್ವಯ ರೂಪಿಸಿದ ಕ್ರಿಯಾಯೋಜನೆಯನ್ನು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯ ಸಮಿತಿಯು ಅನುಮೋದಿಸಬೇಕು. ಪೌರಾಡಳಿತ ನಿರ್ದೇಶನಾಲಯದಿಂದ ಸ್ವೀಕೃತವಾಗುವ ಕ್ರಿಯಾ ಯೋಜನೆಯನ್ನು ಪರಿಶೀಲಿಸಿ ಅನುಮೋದನೆ ನೀಡಲು ಸರ್ಕಾರದ ಹಂತದಲ್ಲಿ ನಗರಾಭಿವೃದ್ಧಿ ಸಚಿವರ ಅಧ್ಯಕ್ಷತೆಯಲ್ಲಿ ಮತ್ತೊಂದು ಉನ್ನತ ಸಮಿತಿ ಇರುತ್ತದೆ. ಮಹಾನಗರ ಪಾಲಿಕೆ ಹಂತದಲ್ಲಿ ಆಯುಕ್ತರ ಅಧ್ಯಕ್ಷತೆಯಲ್ಲಿ ಟೆಂಡರ್ ಪರಿಶೀಲನಾ ಸಮಿತಿ ಇರುತ್ತದೆ.
ಪಾಲಿಕೆಯು ನೀಡುವ ಬೇಡಿಕೆಯನ್ವಯ ಅನುದಾನವನ್ನು ಸರ್ಕಾರದಿಂದ ನೇರವಾಗಿ ಪಾಲಿಕೆಯ ಸಾಮಾನ್ಯ ಖಾತೆಗೆ ಬಿಡುಗಡೆ ಮಾಡಲಾಗುತ್ತದೆ. ಹೀಗೆ ಅನೇಕ ಸಂಗತಿಗಳು ಸದರಿ ಸರ್ಕಾರಿ ಆದೇಶದಲ್ಲಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
