ಬೆಂಗಳೂರು
ಹೆಚ್ಚುತ್ತಿರುವ ಅಪಘಾತಗಳನ್ನು ನಿಯಂತ್ರಿಸಿ ರಸ್ತೆ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲು ಮೋಟಾರು ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಮುಂದಾಗಿದೆ ಇದರಿಂದ ಪಾನಮತ್ತರಾಗಿ ವಾಹನ ಚಲಾಯಿಸಿದರೆ 10 ಸಾವಿರ ರೂ. ದಂಡದ ಜತೆಗೆ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.
ಈಗ ನಡೆಯುತ್ತಿರುವ ಸಂಸತ್ ಅಧಿವೇಶನದಲ್ಲೇ ಸಂಚಾರ ನಿಯಮಗಳನ್ನು ಉಲ್ಲಂಘಿಸುವವರ ಮೇಲೆ ಬಿಗಿ ಕ್ರಮಗಳನ್ನು ಕೈಗೊಂಡು ಭಾರಿ ಮೊತ್ತದ ದಂಡ ಮತ್ತು ಜೈಲು ಶಿಕ್ಷೆಗಳನ್ನು ವಿಧಿಸುವಂತೆ ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.
ಸಂಸತ್ ಅಧಿವೇಶನದಲ್ಲಿ ಮುಂದಿನ ವಾರ ಮೋಟಾರು ಕಾಯ್ದೆ ತಿದ್ದುಪಡಿ ವಿಧೇಯಕವನ್ನು ಮಂಡಿಸಲು ಕೇಂದ್ರದ ಭೂಸಾರಿಗೆ ಇಲಾಖೆ ಸಿದ್ಧತೆ ನಡೆಸಿದ್ದು ಕಾಯ್ದೆ ಸಂಸತ್ತಿನಲ್ಲಿ ಅಂಗೀಕಾರಗೊಂಡರೆ ಕುಡಿದು ವಾಹನ ಚಲಾಯಿಸುವವರಿಗೆ, ಆಂಬ್ಯುಲೆನ್ಸ್, ಅಗ್ನಿಶಾಮಕ ದಳ ಮತ್ತು ತುರ್ತು ಪರಿಸ್ಥಿತಿಯ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯುಂಟು ಮಾಡುವವರಿಗೆ 10 ಸಾವಿರ ರೂ. ದಂಡ ಮತ್ತು ಜೈಲು ಶಿಕ್ಷೆ ವಿಧಿಸಲಾಗುತ್ತದೆ.
ಕಳೆದ ಲೋಕಸಭೆಯ ಅಧಿವೇಶನದಲ್ಲಿಯೇ ತಿದ್ದುಪಡಿ ವಿಧೇಯಕವನ್ನು ಮಂಡಿಸಿ ಅಂಗೀಕಾರ ಪಡೆಯಲಾಗಿತ್ತಾದರೂ ಲೋಕಸಭೆ ವಿಸರ್ಜನೆಯಾದ್ದರಿಂದ ಜಾರಿಯಾಗದೆ ನೆನೆಗುದಿಗೆ ಬಿದ್ದಿತ್ತು. ಕಾಯ್ದೆಗೆ ತಿದ್ದುಪಡಿ ತರಲು ರಸ್ತೆ ಸುರಕ್ಷತಾ ಚಳವಳಿಗಾರರು ಕೆಲ ಬೇಡಿಕೆಯನ್ನು ಇಟ್ಟಿರುವ ಹಿನ್ನೆಲೆಯಲ್ಲಿ ಆ ಬೇಡಿಕೆಗೆ ಮಣಿದಿರುವ ಕೇಂದ್ರ ಸರ್ಕಾರ, ರಸ್ತೆ ಸುರಕ್ಷತೆಗೆ ಸಂಬಂಧಿಸಿದಂತೆ ಮತ್ತೆ ಮಸೂದೆ ಮಂಡನೆಗೆ ಮುಂದಾಗಿದೆ.
ಈ ತಿದ್ದುಪಡಿ ವಿಧೇಯಕ ಜಾರಿಯಾದರೆ ದೇಶಾದ್ಯಂತ ಏಕರೂಪ ಚಾಲನಾ ಪರಾವನಗಿ ಮತ್ತು ವಾಹನಗಳ ನೋಂದಣಿ ವ್ಯವಸ್ಥೆ ಜಾರಿಯಾಗಲಿದ್ದು ಇದೆಲ್ಲವನ್ನೂ ಆನ್‍ಲೈನ್‍ನಲ್ಲೇ ಮಾಡಲು ಅವಕಾಶ ಸಿಗಲಿದೆ.ಹಿಟ್ ಅಂಡ್ ರನ್ ಪ್ರಕರಣಗಳಲ್ಲಿ 10 ಲಕ್ಷ ರೂ. ಪರಿಹಾರ ನೀಡಲು ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಅಪ್ರಾಪ್ತ ವಯಸ್ಸಿನ ಮಕ್ಕಳು ವಾಹನ ಚಾಲನೆ ಮಾಡಿದರೆ ಅವರ ಪೋಷಕರನ್ನು ಅಪರಾಧಿಗಳನ್ನಾಗಿಸುವ ಕಾನೂನು ತಿದ್ದುಪಡಿಯು ಈ ಮಸೂದೆಯಲ್ಲಿದೆ.
ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಸಂದರ್ಭದಲ್ಲಿ ಸಾರಿಗೆಗೆ ಸಂಬಂಧಿಸಿದ ವಿಚಾರಗಳಿಗಿಂತ ರಸ್ತೆ ಸುರಕ್ಷತಾ ವಿಚಾರಗಳಿಗೇ ಗಮನ ನೀಡಿ ಎಂದು ತಜ್ಞರು ಶಿಫಾರಸ್ಸು ಮಾಡಿದ್ದಾರೆ. ಆದರೆ, ಈ ಹಿಂದಿನ ಕಾಯ್ದೆಯಲ್ಲಿ ಯಾವುದೇ ಬದಲಾವಣೆಯಿಲ್ಲ, ಕೆಲವು ವ್ಯಾಕರಣ ದೋಷಗಳನ್ನು ಸರಿಪಡಿಸಲಾಗಿದೆ.
ಸದನದ ಆಯ್ಕೆ ಸಮಿತಿ ಈ ವಿಧೇಯಕವನ್ನು ಪರಿಶೀಲಿಸಿದೆ. ಈ ಹಿಂದೆ ಮಂಡನೆಯಾದ ವಿಧೇಯಕ ಅವಧಿ ಮುಗಿದಿರುವುದರಿಂದ ಈ ತಿದ್ದುಪಡಿ ವಿಧೇಯಕಕ್ಕೆ ಕೇಂದ್ರ ಸಚಿವ ಸಂಪುಟ ಅನುಮತಿ ಬೇಕಾಗಿದ್ದು, ಆ ಪ್ರಕ್ರಿಯೆಗಳು ನಡೆದಿವೆ ಎಂದು ಕೇಂದ್ರ ಭೂಸಾರಿಗೆ ಇಲಾಖೆ ಮೂಲಗಳು ಹೇಳಿವೆ.
ಈ ಹಿನ್ನೆಲೆಯಲ್ಲಿ ಸಾರಿಗೆಗೆ ಸಂಬಂಧಿಸಿದ ಕೆಲ ನಿಯಮಗಳನ್ನು ಈ ತಿದ್ದುಪಡಿ ವಿಧೇಯಕದಿಂದ ಕೈಬಿಟ್ಟು ರಸ್ತೆ ಸುರಕ್ಷತೆಗೆ ಬಿಗಿ ಕ್ರಮಗಳನ್ನು ಈ ಕಾಯ್ದೆಯಲ್ಲಿ ಅಳವಡಿಸಲಾಗಿದೆ.