ದಾವಣಗೆರೆ:
ಪಾರಂಪರಿಕ ವೈದ್ಯ ಪರಿಷತ್-ಕರ್ನಾಟಕದ ವತಿಯಿಂದ ಅ.25ರಿಂದ 27ರವರೆಗೆ ನಗರದಲ್ಲಿ ರಾಷ್ಟ್ರೀಯ ಪಾರಂಪರಿಕ ವೈದ್ಯ ಸಮ್ಮೇಳನ ಹಾಗೂ ಮೂಲಿಕಾ ಉತ್ಸವ-2018 ಏರ್ಪಡಿಸಲಾಗಿದೆ ಎಂದು ಪರಿಷತ್ನ ಅಧ್ಯಕ್ಷ ನೇರ್ಲಿಗೆ ಗುರುಸಿದ್ದಪ್ಪ ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಕಲ್ಯಾಣ ಮಂಟಪದಲ್ಲಿ ಮೂರು ದಿನಗಳ ಕಾಲ ನಡೆಯುವ ಸಮ್ಮೇಳನವು 25ರಂದು ಬೆಳಿಗ್ಗೆ 10.30ಕ್ಕೆ ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಹರಿಹರ ಪಂಚಮಸಾಲಿ ಪೀಠದ ಶ್ರೀವಚನಾನಂದ ಸ್ವಾಮೀಜಿ, ಕಾಗಿನೆಲೆ ಗುರುಪೀಠದ ಶ್ರೀನಿರಂಜನಾನಂದಪುರಿ ಸ್ವಾಮೀಜಿ, ಶ್ರೀಪ್ರಸನ್ನನಾಥ ಸ್ವಾಮೀಜಿ, ಶ್ರೀಮಾದರ ಚನ್ನಯ್ಯ ಸ್ವಾಮೀಜಿ, ಶ್ರೀಮಹಾಂತ ರುದ್ರೇಶ್ವರ ಸ್ವಾಮೀಜಿ ಅವರುಗಳ ಸಾನಿಧ್ಯದಲ್ಲಿ ಉದ್ಘಾಟನೆಗೊಳ್ಳಲಿದೆ. ಮುಖ್ಯ ಅತಿಥಿಗಳಾಗಿ ಸಚಿವರಾದ ಆರ್.ಶಂಕರ್, ಎಸ್.ಆರ್.ಶ್ರೀನಿವಾಸ್, ಸಂಸದ ಜಿ.ಎಂ.ಸಿದ್ದೇಶ್ವರ, ಶಾಸಕರಾದ ಡಾ.ಶಾಮನೂರು ಶಿವಶಂಕರಪ್ಪ, ಎಸ್.ಎ.ರವೀಂದ್ರನಾಥ್ ಮತ್ತಿತರರು ಭಾಗವಹಿಸಲಿದ್ದಾರೆಂದು ಮಾಹಿತಿ ನೀಡಿದರು.
ಅ.26ರಂದು ಬೆಳಿಗ್ಗೆ 9.30ಕ್ಕೆ ಸುಸ್ಥಿರ ಪಾರಂಪರಿಕ ವೈದ್ಯಕ್ಕೆ ಔಷಧಿ ಸಸ್ಯಗಳ ಕೃಷಿ ಕಾರ್ಯಾಗಾರ ನಡೆಯಲಿದೆ. ಸಂಜೆ 5ಕ್ಕೆ ಮಧುಮೇಹದಿಂದ ಮುಕ್ತರಾಗಿ ನಿಶ್ಚಿಂತ ಜೀವನ ನಡೆಸಿ ಹಾಗೂ ಮಧುಮೇಹದಲ್ಲಿ ಪಥ್ಯ ವಿಧಾನಗಳು ಮತ್ತು ಅಡುಗೆಗಳು ವಿಷಯ ಕುರಿತು ಸಾರ್ವಜನಿಕ ವಿಶೇಷ ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ ಪಾಲ್ಗೊಳ್ಳುವವರಿಗೆ 200 ರೂ. ಶುಲ್ಕ ವಿಧಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಮಧುಮೇಹಿಗಳಿಗೆ ವಿಶೇಷ ಭೋಜನದ ವ್ಯವಸ್ಥೆ ಮಾಡಲಾಗಿದೆ ಎಂದರು.
ಅ.27ರಂದು ಬೆಳಿಗ್ಗೆ 9ಕ್ಕೆ ನೂತನ ಜಿಲ್ಲಾ ಸಂಚಾಲಕರ ಸಭೆ, 9.30ಕ್ಕೆ ಕಾನೂನು ಚೌಕಟ್ಟಿನಲ್ಲಿ ಪಾರಂಪರಿಕ ವೈದ್ಯ ಸೇವೆ ಪ್ರಶ್ನೋತ್ತರ ನಡೆಯಲಿದ್ದು, ಗಾ.ನಂ. ಶ್ರೀಕಂಠಯ್ಯ, ಡಾ.ಸತ್ಯನಾರಾಯಣ ಭಟ್, ಪ್ರೊ.ಜಿ.ಹರಿರಾಮಮೂತಿ, ಮಂಜುನಾಥ ವಕೀಲರು ಭಾಗವಹಿಸುವರು. ಬೆಳಿಗ್ಗೆ 11.30ಕ್ಕೆ ಸಮಾರೋಪ ಸಮಾರಂಭದ ಸಾನಿಧ್ಗಯವನ್ನು ಶ್ರೀಪ್ರಸನ್ನನಾಥ ಸ್ವಾಮೀಜಿ ವಹಿಸುವರು. ದಾವಣಗೆರೆ ವಿರಕ್ತಮಠದ ಶ್ರೀಬಸವಪ್ರಭು ಸ್ವಾಮೀಜಿ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಯು.ಸಿದ್ದೇಶ್ ಸೇರಿದಂತೆ ಮತ್ತಿತರರು ಭಾಗವಹಿಸುವರು ಎಂದು ಹೇಳಿದರು.
ಈ ಸಮ್ಮೇಳನದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಪಾರಂಪರಿಕ ವೈದ್ಯರು ಭಾಗವಹಿಸುವ ನಿರೀಕ್ಷೆ ಇದೆ. ಸಮ್ಮೇಳನದಲ್ಲಿ ಮಧುಮೇಹ ಬಗ್ಗೆ ವಿವಿಧ ಚರ್ಚಾಗೋಷ್ಠಿಗಳು ನಡೆಯಲಿವೆ. ಐವರು ಪಾರಂಪರಿಕ ವೈದ್ಯ ಸಾಧಕರಿಗೆ ವೈದ್ಯ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಸಮ್ಮೇಳನದ ಯಶಸ್ವಿಗೆ ಈಗಾಗಲೇ ಹಲವಾರು ಸಮಿತಿಗಳನ್ನು ರಚಿಸಲಾಗಿದೆ. ಮಧುಮೇಹ ಎಂಬ ಬ್ರಾಂತಿಯಲ್ಲಿ ಕೋಟ್ಯಾಂತರ ಜನರು ದುರ್ಬಲರಾಗಿದ್ದು, ಅವರಿಗೆ ಆತ್ಮಸ್ಥೈರ್ಯ ತುಂಬುವುದರ ಜೊತೆಗೆ ಅದರಿಂದ ಹೊರಬಂದು ಸುಖ ಜೀವನ ಹೇಗೆ ನಡೆಸಬಹುದು ಎಂಬುದಕ್ಕೆ ಈ ಸಮ್ಮೇಳನ ದಿಕ್ಸೂಚಿಯಾಗಲಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಪರಿಷತ್ನ ಕಾರ್ಯದರ್ಶಿ ಬಿ.ಎಂ.ಶಿವಮೂರ್ತಿ, ಪಂ.ವಿ.ಕೆ.ರಹಮತ್ ಉಲ್ಲಾ , ಕೆ.ವಿ.ದೊಡ್ಡವೀರಯ್ಯ, ಸುನೀಲ್ಕುಮಾರ್ , ಷಣ್ಮುಖಪ್ಪ, ಕೆ.ಪಿ.ಲತಾ, ಉಮೇಶ್, ಹನುಮಂತಪ್ಪ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








