ಪಾಲಕರು ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸಿ ಒತ್ತಡದಿಂದ ಮಕ್ಕಳನ್ನು ಹೊರತರಬೇಕು :ಸಿಇಓ

ಹಾವೇರಿ
    ಮನೆಯಿಂದ ಹೊರಬಂದು ವಸತಿನಿಲಯಗಳಲ್ಲಿ ವಾಸವಿದ್ದು ಕಲಿಯುವ ಮಕ್ಕಳಲ್ಲಿ ಹೋಮ್‍ಸಿಕ್ ಆವರಿಸಿ ಕೊಂಡಿರುತ್ತದೆ. ಇದರಿಂದ ಅವರನ್ನು ಹೊರತಂದು ಸಹಜ ಕಲಿಕೆಯಲ್ಲಿ ತೊಡಗಿಸುವ ನಿಟ್ಟಿನಲ್ಲಿ ಮಕ್ಕಳ ಮನಪರಿವರ್ತನೆಗೆ ವಸತಿನಿಲಯದ ಪಾಲಕರು ಶ್ರಮಿಸಬೇಕು ಎಂದು ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಮೇಶ ದೇಸಾಯಿ ಅವರು ಹೇಳಿದರು.
    ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಹಾವೇರಿ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಪರಿಶಿಷ್ಟ ವರ್ಗಗಳ ಕಲ್ಯಾಣ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ತಾಲೂಕಾ ಮಟ್ಟದ ಅಧಿಕಾರಿಗಳು, ನಿಲಯ ಪಾಲಕರು ಹಾಗೂ ನಿಲಯ ಮೇಲ್ವಿಚಾರಕರು ಮತ್ತು ವಸತಿ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರು, ವಾರ್ಡನುಗಳಿಗೆ ವಿದ್ಯಾರ್ಥಿಗಳು ಮಾನಸಿಕವಾಗಿ ಸದೃಡವಾಗುವ ಬಗ್ಗೆ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. 
    ವಸತಿನಿಲಯಗಳಲ್ಲಿ ಸರ್ಕಾರದ ಅನುಷ್ಟಾನ ಯೋಜನೆಗಳನ್ನು ಜಾರಿಗೆ ಮಾಡಲಾಗುತ್ತಿದೆ. ವಿದ್ಯಾರ್ಥಿಗಳು ಮಾನಸಿಕವಾಗಿ ಸದೃಡವಾಗಲು ಅವರಲ್ಲಿ ಆತ್ಮವಿಶ್ವಾಸ, ಧೈರ್ಯ, ದೃಡನಿರ್ಧಾರಗಳನ್ನು ಮೂಡಿಸುವ ನಿಟ್ಟಿನಲ್ಲಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಇಂದಿನ ದಿನಮಾನಗಳಲ್ಲಿ ಮಕ್ಕಳಿಗೆ ಸಾಕಷ್ಟು ಗೃಹಪಾಠಗಳಿರುವ ಕಾರಣದಿಂದ ಮಕ್ಕಳು ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ವಸತಿನಿಲಯದ ಪಾಲಕರೊಂದಿಗೆ ತಂದೆತಾಯಿಗಳು ಮಕ್ಕಳನ್ನು ಒತ್ತಡದಿಂದ ಹೊರತರುವ ಕೆಲಸವನ್ನು ಮಾಡಬೇಕು. ಆಗ ಮಕ್ಕಳು ಮಾನಸಿಕವಾಗಿ ಆರೋಗ್ಯವಂತರಾಗಲು ಸಾಧ್ಯ ಎಂದು ಅವರು ಹೇಳಿದರು.
     ಕಾರ್ಯಾಗಾರದಲ್ಲಿ ಧಾರವಾಡದ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ಡಾ. ಮಹೇಶ ದೇಸಾಯಿ ಮಾತನಾಡಿ, ಜನರಿಗೆ ಮಾನಸಿಕ ರೋಗದ ಬಗ್ಗೆ ತಿಳುವಳಿಕೆ ಮೂಡಿಸಿದಾಗ ಮೊದಲ ಹಂತದಲ್ಲಿ ಸಕಾಲಕ್ಕೆ ಸೂಕ್ತ ಚಿಕಿತ್ಸೆ ಪಡೆಯಬಹುದು. ಮಾನಸಿಕ ಸಮಸ್ಯೆ ಹೇಳಿಕೊಳ್ಳಲು ಸಂಕೋಚಪಡಬಾರದು. ಮುಕ್ತವಾಗಿ ಚರ್ಚಿಸಿ ಚಿಕಿತ್ಸೆ ಪಡೆಯಬೇಕು. ಮಾನಸಿಕ ರೋಗಕ್ಕೆ ಜೀವನ ಪರ್ಯಂತ ಮಾತ್ರೆಯ ಅವಶ್ಯಕತೆಯಿಲ್ಲ. ಚಿಕಿತ್ಸೆಯ ಅವಧಿಯಲ್ಲಿ ಮಾತ್ರೆಗಳ ಜೊತೆಗೆ ಸಲಹೆ-ಸೂಚನೆ, ಯೋಗ ವ್ಯಾಯಾಮ ಧ್ಯಾನ ಮುಂತಾದ ಆರೋಗ್ಯಕರ ಜೀವನಶೈಲಿಯ ಬದಲಾವಣೆ ಮೂಲಕ ಪರಿವರ್ತನೆ ಕಾಣಬಹುದು ಎಂದು ಹೇಳಿದರು.
    ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಮನೋವೈದ್ಯರಾದ ಡಾ.ಶಿವಾನಂದ ಹಿರೇಮಠ ಅವರು ಮಾತನಾಡಿ, ವಸತಿ ನಿಲಯದ ಪಾಲಕರ ವೃತ್ತಿ ಪವಿತ್ರವಾದದ್ದು. ಅತ್ಯಂತ ಜವಾಬ್ದಾರಿಯುತವಾದದ್ದು. ಒತ್ತಡದಲ್ಲಿರುವ ವಿದ್ಯಾರ್ಥಿಗಳನ್ನು ಅವರ ವರ್ತನೆ ಗಮನಿಸಿ ವಿದ್ಯಾರ್ಥಿಯನ್ನು ಕರೆದು ನೇರವಾಗಿ ನಯವಾಗಿ ಪ್ರಶ್ನಿಸಬೇಕು. ಆಗ ಮಾತ್ರ ಆ ವಿದ್ಯಾರ್ಥಿಗಿರುವ ಸಮಸ್ಯೆಯನ್ನು ನೇರವಾಗಿ ಬಗೆಹರಿಸಲು ಸಾಧ್ಯವಾಗುತ್ತದೆ.
     ಒಂದು ವೇಳೆ ಸಮಸ್ಯೆ ಬಗೆಹರಿಯದಿದ್ದಲ್ಲಿ ಮಾನಸಿಕ ತಜ್ಞರ ಸಲಹೆ ಪಡೆದು ಸೂಕ್ತ ಚಿಕಿತ್ಸೆಗೆ ಸಲಹೆ ನೀಡುವುದು ಸೂಕ್ತ ಎಂದು ತಿಳಿಸಿದ ಅವರು ವಸತಿ ನಿಲಯಗಳಲ್ಲಿ ಮಕ್ಕಳ ಏಕತಾನತೆ ನಿವಾರಣೆಗೆ ನೀತಿ ಪಾಠ, ಜೀವನ ಕೌಶಲ್ಯ ಆಧಾರಿತ ಹಾಗೂ ವಿವಿಧ ಸಾಧಕರಿಂದ ಪ್ರೇರಣಾ ಕಾರ್ಯಕ್ರಮಗಳು ನಡೆಸುವಂತೆ ಸಲಹೆ ನೀಡಿದರು.
     ಕಿಮ್ಸ್ ಆಸ್ಪತ್ರೆಯ ಮನೋವೈದ್ಯ ವಿದ್ಯಾರ್ಥಿ ಡಾ.ಸುಧಾಮಣಿ ಅವರು ಮಾತನಾಡಿ, ತಂದೆ ತಾಯಿ ಕುಟುಂಬವನ್ನು ಬಿಟ್ಟು ಬರುವ ಮಕ್ಕಳು ಇದ್ದಕ್ಕಿದ್ದಂತೆ ಹಾಸ್ಟೇಲ್‍ಗಳಿಗೆ ಸೇರಿದ ತಕ್ಷಣ ಖಿನ್ನತೆಗೆ ಒಳಗಾಗುತ್ತಾರೆ. ಕಾರಣ ಯಾರನ್ನೋ ಕಳೆದುಕೊಂಡ ಭ್ರಮೆ, ಸ್ವತಂತ್ರತೆ ಇಲ್ಲದಿರುವುದು, ಅಭದ್ರತೆ, ನಮಗೆ ಪ್ರೀತಿ ವಿಶ್ವಾಸ ತೋರಿಸುವುವವರು ಯಾರೂ ಇಲ್ಲ ಎಂಬ ನೋವು, ಹಾಗೂ ಶಾಲಾ ಒತ್ತಡ ಸೇರಿದಂತೆ ವಿವಿಧ ಕಾರಣಗಳಿಂದ ಮಕ್ಕಳಲ್ಲಿ ಮಾನಸಿಕ ಸಮಸ್ಯೆಗಳು ಎದ್ದು ಕಾಣುತ್ತದೆ ಎಂದು ಹೇಳಿದರು.
     ವಿಶ್ವ ಸಂಸ್ಥೆಯ ಸಮೀಕ್ಷೆ ಪ್ರಕಾರ 5ರಲ್ಲಿ ಒಂದು ಹದಿಹರೆಯದ ಮಗುವಿನಲ್ಲಿ ಡೈಗ್ನೋಸಿಸ್ ಆಗುವಂತಹ ಮಾನಸಿಕ ಸಮಸ್ಯೆಗಳಿರುತ್ತವೆ. ಆದರೆ ಕೇವಲ 50ರಷ್ಟು ಮಂದಿ ಮಾತ್ರ ಚಿಕಿತ್ಸೆಗೆ ಬಂದು ಗುಣಮುಖರಾಗುತ್ತಿದ್ದಾರೆ. ಇನ್ನುಳಿದ 50ರಷ್ಟು ಮಂದಿ ಚಿಕಿತ್ಸೆ, ಸಲಹೆ ಇಲ್ಲದೆ ಆತ್ಮಹತ್ಯೆ ಅಥವಾ ವಿಚಿತ್ರ ಪರಿಣಾಮಗಳಿಗೆ ತುತ್ತಾಗುತ್ತಿದ್ದಾರೆ.
     ಮಕ್ಕಳಲ್ಲಿ ಮಾನಸಿಕ ಸಮಸ್ಯೆಗಳನ್ನು ಗುರುತಿಸಿ ಸೂಕ್ತ ಚಿಕಿತ್ಸೆ ಕೊಡಿಸುವುದು ಉತ್ತಮ. ವಿದ್ಯಾರ್ಥಿಗಳು ಆತ್ಮಹತ್ಯೆಗೆ ಯತ್ನಿಸುವ ಗುಣಗಳು ಕಂಡು ಬಂದಾಗ ಅವರನ್ನು ಕರೆದು ಸಮಸ್ಯೆಗೆ ಕಾರಣ ಹಾಗೂ ಪರಿಹಾರ ಕಂಡುಕೊಳ್ಳುವುದು ನಿಲಯ ಪಾಲಕರ ಆದ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು.
   ಕಿಮ್ಸ್ ಆಸ್ಪತ್ರೆಯ ಮನೋವೈದ್ಯ ವಿದ್ಯಾರ್ಥಿ ಕಿಶನ್ ವಿದ್ಯಾರ್ಥಿ ಅವರು ನಿಲಯ ಪಾಲಕರು ತಮ್ಮ ಕೆಲಸದ ಒತ್ತಡದ ಸಮಯದಲ್ಲಿ ಕೈಗೊಳ್ಳಬೇಕಾಗಿರುವ ಕ್ರಮಗಳ ಕುರಿತು ಸಲಹೆ ನೀಡಿದರು.ಕಾರ್ಯಾಗಾರದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಮಖಾನೆ, ರಾಜು ಕೋಲೆರ, ಗುಡ್ಡಪ್ಪ ಜಿಗಳಿಕೊಪ್ಪ, ವಾರ್ತಾಧಿಕಾರಿ ಡಾ.ಬಿ.ಆರ್.ರಂಗನಾಥ್, ವಿವಿಧ ಇಲಾಖಾಧಿಕಾರಿಗಳು, ವಿವಿಧ ವಸತಿನಿಲಯಗಳ ವಾರ್ಡನ್‍ಗಳು, ಇತರರು ಉಪಸ್ಥಿತರಿದ್ದರು.ಅಲ್ಪ ಸಂಖ್ಯಾತರ ಕಲ್ಯಾಣಾಧಿಕಾರಿಗಳಾದ ಗುಡ್ಡಪ್ಪ ಜಿಗಳಿಕೊಪ್ಪ ಅವರು ಸ್ವಾಗತ ಕೋರಿದರು. ತಿಳವಳ್ಳಿ ವಸತಿ ಶಾಲೆಯ ಮೆಲ್ವಿಚಾರಕರಾದ ಬಿ.ಆರ್.ಪಾಟೀಲ್ ಅವರು ಪ್ರಾರ್ಥನೆ ಹಾಡಿದರು.
   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link