ಪರಿಸರ ಪ್ರಜ್ಞೆ ಬೆಳೆದಾಗ ಮಾತ್ರ ಉದ್ದೇಶ ಸಾರ್ಥಕ: ತಿಪ್ಪಾರೆಡ್ಡಿ

ಚಿತ್ರದುರ್ಗ:

      ಸರ್ಕಾರ ಕೋಟ್ಯಾಂತರ ರೂ.ಗಳನ್ನು ಖರ್ಚು ಮಾಡಿ ಗಿಡ ನೆಡುತ್ತಿರುವುದಕ್ಕೆ ಪ್ರತಿಫಲ ಸಿಗಬೇಕಾದರೆ ಪ್ರತಿಯೊಬ್ಬರು ಗಿಡಗಳನ್ನು ಪೋಷಿಸುವ ಕಾಳಜಿ ವಹಿಸಬೇಕೆಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.

      ಕೇತೇಶ್ವರ ಮಹಾಸಂಸ್ಥಾನ ಮಠ, ಸಾಮಾಜಿಕ ಅರಣ್ಯ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಸ್ವಚ್ಚ ಭಾರತ್ ಅಭಿಯಾನ, ಇಂದಿರಾಗಾಂಧಿ ವಸತಿಯುತ ಪಾಠಶಾಲೆ ಚಿತ್ರದುರ್ಗ, ನವೀನ್ ಪ್ರೌಢಶಾಲೆ ಸೀಬಾರ, ಎಂ.ಕೆ.ಹಟ್ಟಿ ಗ್ರಾ.ಪಂ.ಕಾರ್ಯಾಲಯ ಇವರುಗಳ ಸಹಯೋಗದೊಂಗೆ ದಾವಣಗೆರೆ ರಸ್ತೆಯಲ್ಲಿರುವ ಕೇತೇಶ್ವರ ಮಹಾಸಂಸ್ಥಾನ ಮಠದಲ್ಲಿ ವಿಶ್ವಪರಿಸರ ದಿನಾಚರಣೆ ಅಂಗವಾಗಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಗಿಡ ನೆಡುವ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ಮಾತನಾಡಿದರು.

       ಗಿಡ-ಮರಗಳ ನಾಶವಾಗುತ್ತಿರುವುದರಿಂದ ಪರಿಸರದಲ್ಲಿ ಉಷ್ಣಾಂಶ ಜಾಸ್ತಿಯಾಗಿ ರೋಗ ರುಜಿನಗಳು ಹರಡುತ್ತಿರುವುದನ್ನು ಪ್ರಪಂಚ ಗಂಭೀರವಾಗಿ ತೆಗೆದುಕೊಂಡಿದೆ. ರಾಜಸ್ಥಾನ ಬಿಟ್ಟರೆ ಎರಡನೆ ಮರುಭೂಮಿ ಎಂದರೆ ಕರ್ನಾಟಕ. ಬಯಲುಸೀಮೆಯಲ್ಲಿ ಹೆಚ್ಚಿನ ಗಿಡಗಳನ್ನು ನೆಟ್ಟು ನೀರುಣಿಸಿ ಪೋಷಿಸುವ ಪ್ರಜ್ಞೆ ಪ್ರತಿಯೊಬ್ಬರಲ್ಲಿಯೂ ಬೆಳೆಯಬೇಕು. ಗಿಡಗಳಿದ್ದರೆ ಮನುಷ್ಯ ಉಸಿರಾಡಲು ಶುದ್ದವಾದ ಗಾಳಿ ಸಿಗುತ್ತದೆ. ದೆಹಲಿಯಲ್ಲಿ ವಾಹನಗಳು ಹೊರಸೂಸುವ ಹೊಗೆಯಿಂದ ಪರಿಸರ ಹಾಳಾಗಿ ಅಲ್ಲಿನ ಜನರ ಆರೋಗ್ಯ ಹದಗೆಟ್ಟಿದೆ. ಹಾಗಾಗಿ ಪ್ರತಿಯೊಬ್ಬರು ಒಂದೊಂದು ಗಿಡ ನೆಟ್ಟು ಕಾಡು ಬೆಳೆಸಬೇಕಿದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

     ಅಮೃತಸಿಟಿ, ನಗರೋತ್ಥಾನ ಯೋಜನೆಯಡಿ ಚಳ್ಳಕೆರೆ ಟೋಲ್‍ಗೇಟ್‍ನಿಂದ ಮಾಳಪ್ಪನಹಟ್ಟಿವರೆಗೆ ರಸ್ತೆ ವಿಸ್ತರಣೆಯಾಗಲಿದೆ. ಈ ಸಂದರ್ಭದಲ್ಲಿ ರಸ್ತೆ ಬದಿಯ ಮರಗಳನ್ನು ಕಡಿಯುವುದು ಅನಿವಾರ್ಯ. ಅದಕ್ಕಾಗಿ ಇನ್ನು ಹದಿನೈದು ದಿನದೊಳಗೆ ನಗರಸಭೆ, ಅರಣ್ಯ ಇಲಾಖೆ, ಸಾರ್ವಜನಿಕರು, ವಿವಿಧ ಸಂಘ ಸಂಸ್ಥೆಗಳು ರೈತರು ಹೀಗೆ ಎಲ್ಲರನ್ನು ಸೇರಿಸಿಕೊಂಡು ಜಿಲ್ಲಾಧಿಕಾರಿ ಜೊತೆ ಸಭೆ ನಡೆಸಿ ರಸ್ತೆ ಅಗಲೀಕರಣವಾದ ಮೇಲೆ ಗಿಡ ನೆಡುವ ಕುರಿತು ಚರ್ಚಿಸುವುದಾಗಿ ಹೇಳಿದರು.

       ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಮಾತನಾಡಿ ಭೂಮಿ ಹಾಗೂ ಪರಿಸರ ಮಾನವನಿಗೆ ಸಂಬಂಧಿಸಿದ್ದರಿಂದ ಪ್ರತಿಯೊಬ್ಬರು ಇಂತಿಷ್ಟು ಸಸಿಗಳನ್ನು ನೆಟ್ಟು ದೊಡ್ಡ ಮರವನ್ನಾಗಿ ಬೆಳೆಸಿದರೆ ಪರಿಸರದಲ್ಲಿ ತಾಪಮಾನ ಕಡಿಮೆಯಾಗಲಿದೆ. ಇಲ್ಲವಾದಲ್ಲಿ ಮುಂದೊಂದು ದಿನ ಇಲ್ಲಿಯೂ ಮರಳುಗಾಡಾಗುವುದರಲ್ಲಿ ಸಂದೇಹವಿಲ್ಲ ಎಂದು ವಿಷಾಧಿಸಿದರು.

       ಚುನಾಯಿತಿ ಪ್ರತಿನಿಧಿಗಳು, ಮಠಾಧೀಶರು, ಅಧಿಕಾರಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ರೈತರು ಗಿಡ ನೆಡುವ ಕಾರ್ಯಕ್ರಮಗಳಲ್ಲಿ ಭಾಗಿಯಾಗಬೇಕು. ರೈತ ತನ್ನ ಜಮೀನಿನಲ್ಲಿ ಒಂದಿಷ್ಟು ಮರಗಳನ್ನು ಕಡ್ಡಾಯವಾಗಿ ಬೆಳೆಸಬೇಕು. ಗಿಡ-ಮರಗಳು ಇಲ್ಲದ ಕಡೆ ಮಳೆ ಕಡಿಮೆ. ದೆಹಲಿಯಲ್ಲಿ ಮಾಲಿನ್ಯ ಹೆಚ್ಚಾಗಿ ಜನ ಆತಂಕಪಡುತ್ತಿದ್ದಾರೆ. ಅರಣ್ಯೀಕರಣ, ರಸ್ತೆ ಬದಿಯಲ್ಲಿ ಸಸಿಗಳನ್ನು ನೆಡಲು ಸರ್ಕಾರ ಲಕ್ಷಾಂತರ ರೂ.ಗಳನ್ನು ಖರ್ಚು ಮಾಡುತ್ತಿದೆ.

       ಪರಿಸರದ ಬಗ್ಗೆ ನಿರ್ಲಕ್ಷೆ ವಹಿಸಿದ್ದೇ ಆದಲ್ಲಿ ಮರುಭೂಮಿಯಾಗಲಿದೆ. ಬಿಸಿಲಿಗೆ ತುತ್ತಾಗಿ ಮನುಷ್ಯ ಅನೇಕ ರೋಗಗಳಿಗೆ ಬಲಿಯಾಗುತ್ತಿದ್ದಾನೆ. ಅಧಿಕಾರಿಗಳು ಬದ್ದತೆಯಿಟ್ಟುಕೊಂಡು ಕೆಲಸ ಮಾಡಬೇಕು. ಪರಿಸರದಲ್ಲಿ ಬದಲಾವಣೆ ತರಬೇಕಿದೆ. ಅಂರ್ತಜಲ ಹೆಚ್ಚಬೇಕಾದರೆ ಗಿಡ-ಮರಗಳನ್ನು ಬೆಳೆಸಬೇಕು. ಈ ಸಂಬಂಧ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಜೊತೆ ಚರ್ಚಿಸುತ್ತೇನೆಂದರು.

         ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಕೇತೇಶ್ವರ ಮಹಾಸಂಸ್ಥಾನ ಮಠದ ಇಮ್ಮಡಿ ಬಸವ ಮೇದಾರ ಕೇತೇಶ್ವರ ಸ್ವಾಮೀಜಿ ಮಾತನಾಡುತ್ತ ಸಾವಿರಾರು ಗಿಡಗಳನ್ನು ನೆಡುವ ಬದಲು ಇರುವ ಗಿಡ-ಮರಗಳನ್ನು ಕಡಿಯದೆ ರಕ್ಷಿಸುವುದು ಬಹಳ ಮುಖ್ಯ. ಮಾನವನ ದುರಾಸೆಗೆ ಕಾರ್ಖಾನೆಗಳು ಹೆಚ್ಚಾಗುತ್ತಿದ್ದು, ಅವುಗಳು ಸೂಸುವ ಹೊಗೆಯಿಂದ ಮಾನವನ ಆರೋಗ್ಯ ಹಾಳಾಗುತ್ತಿದೆ. ಆದಿಮಾನವ ಹಿಂದಿನ ಕಾಲದಲ್ಲಿ ಗಿಡಮರಗಳ ನಡುವೆ ವಾಸಿಸುತ್ತ ನೂರು ನೂರೈತ್ತು ವರ್ಷಗಳ ಕಾಲ ಬದುಕಿ ಇತಿಹಾಸ ಸೃಷ್ಟಿಸಿ ಹೋಗಿದ್ದಾನೆ. ಈಗ ಮರಗಳನ್ನು ಕಡಿದು ಊರು ಮಾಡಲಾಗುತ್ತಿದೆ. ಮನೆಗಳನ್ನು ಕಟ್ಟಿಕೊಳ್ಳುತ್ತಿರುವುದರಿಂದ ಪ್ರಾಣಿ ಪಕ್ಷಿಗಳು ವಾಸಿಸಲು
ಜಾಗವಿಲ್ಲದೆ ಊರೊಳಗೆ ಬರುತ್ತಿವೆ ಎಂದು ಹೇಳಿದರು.

        ವಿಶ್ವಪರಿಸರ ದಿನಾಚರಣೆ ಜೂ.5 ಕ್ಕೆ ಮಾತ್ರ ಮೀಸಲಾಗಬಾರದು ದಿನವೂ ವಿಶ್ವಪರಿಸರ ದಿನಾಚರಣೆಯಾದಾಗ ಮಾತ್ರ ಪರಿಸರದಲ್ಲಿ ಹಸಿರು ಕಾಣಲು ಸಾಧ್ಯ. ಪರಿಸರಕ್ಕೆ ಸ್ಪಂದಿಸುವ ಗುಣವುಳ್ಳವರು ಬೇಕಾಗಿದ್ದಾರೆ ಎಂದು ತಿಳಿಸಿದರು.ಜಿ.ಪಂ.ಅಧ್ಯಕ್ಷೆ ವಿಶಾಲಾಕ್ಷಿ ನಟರಾಜ್, ಸದಸ್ಯ ನರಸಿಂಹರಾಜು, ಸಾಮಾಜಿಕ ಅರಣ್ಯ ಇಲಾಖೆ ಉಪ ಅರಣ್ಯ ಸಂರಕ್ಷಣಾಧಿಕಾರಿ ರಂಗನಾಥಸ್ವಾಮಿ, ವಲಯ ಅರಣ್ಯಾಧಿಕಾರಿ ಅಕ್ಷತಾ, ಎಂ.ಕೆ.ಹಟ್ಟಿ ಗ್ರಾ.ಪಂ.ಉಪಾಧ್ಯಕ್ಷೆ ಭಾಗ್ಯಮ್ಮ, ತಿಪ್ಪೇಸ್ವಾಮಿ, ವಿಮುಕ್ತಿ ವಿದ್ಯಾಸಂಸ್ಥೆಯ ಆರ್.ವಿಶ್ವಸಾಗರ್, ಪಿ.ಡಿ.ಓ. ಆರ್.ಪಾತಣ್ಣ, ಕುಬೇರಣ್ಣ, ದ್ಯಾಮಣ್ಣ, ವೆಂಕಟೇಶ್ ವೇದಿಕೆಯಲ್ಲಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap