ಪರಿಸರ ಸಂರಕ್ಷಣೆಯ ಪ್ರಜ್ಞೆ ಎಲ್ಲರದ್ದಾಗಲಿ

ತುಮಕೂರು:

     ಇಂದು ಎಲ್ಲ ಕಡೆ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಗುತ್ತಿದೆ. ಇತ್ತೀಚೆಗೆ ಈ ದಿನ ಅತ್ಯಂತ ಮಹತ್ವದ ದಿನವಾಗಿ ಮಾರ್ಪಡುತ್ತಿದೆ. ಅದಕ್ಕೆ ಕಾರಣವೂ ಇದೆ. ದಿನೆ ದಿನೇ ಪರಿಸರ ಕಲುಷಿತಗೊಳ್ಳುತ್ತಿರುವ ಈ ದಿನಮಾನದಲ್ಲಿ ಅದನ್ನು ಸಂರಕ್ಷಿಸುವ ಹೊಣೆಗಾರಿಕೆ ಎಲ್ಲರ ಮೇಲಿದೆ. ಈ ಜಾಗೃತಿ ಪ್ರತಿಯೊಬ್ಬರಲ್ಲಿಯು ಮೂಡಬೇಕಿದೆ.

      ನಾವಿಂದು ಅಭಿವೃದ್ಧಿಯ ಪಥದೆಡೆಗೆ ನಾಗಾಲೋಟದಲ್ಲಿ ಓಡುತ್ತಿದ್ದೇವೆ. ವಿವಿಧ ಆವಿಷ್ಕಾರಗಳಲ್ಲಿ ತೊಡಗಿ ನಮ್ಮ ಸುತ್ತ ಇರುವ ಪರಿಸರವನ್ನು ಹಾಳು ಮಾಡಿಕೊಳ್ಳುತ್ತಿದ್ದೇವೆ. ನಮ್ಮ ಪೂರ್ವಿಕರು ಬಾಳಿ ಬದುಕುತ್ತಿದ್ದ ದಿನಗಳಿಗೂ, ಇಂದಿನ ದಿನಗಳಿಗೂ ಸಾಕಷ್ಟು ವ್ಯತ್ಯಾಸ ಉಂಟಾಗಿದೆ. ಅಂದಿನ ಆ ಪ್ರಕೃತಿಯನ್ನು ಇಂದು ಕಾಣಲು ಸಾಧ್ಯವಾಗುತ್ತಿಲ್ಲ. ಅದೆಷ್ಟೋ ಪಕ್ಷಿ ಪ್ರಬೇದಗಳು ನಶಿಸಿ ಹೋಗಿವೆ.

     ಭೂಮಿಯ ಮೇಲೆ ಹಾಗೂ ಭೂಗರ್ಭದಲ್ಲಿ ಅಸಮತೋಲನ ಸೃಷ್ಟಿಯಾಗಿದೆ. ಅರಣ್ಯ ಸಂಪತ್ತು ನಾಶವಾಗಿ ಮಳೆ ಸಕಾಲಕ್ಕೆ ಬರುತ್ತಿಲ್ಲ. ಕೃಷಿ ಭೂಮಿ ಕಡಿಮೆಯಾಗುತ್ತಾ ಅಲ್ಲೆಲ್ಲಾ ವೈಭವದ ಕಟ್ಟಡಗಳು ನಿರ್ಮಾಣವಾಗುತ್ತಿವೆ. ಬಯಲು ಪ್ರದೇಶ ಹೆಚ್ಚಿದಂತೆಲ್ಲಾ ತಣ್ಣನೆಯ ವಾತಾವರಣ ಇಲ್ಲದಂತಾಗುತ್ತಿದೆ. ಮೋಡಗಳನ್ನು ಸೆಳೆಯುವ ವಾತಾವರಣವೇ ಇಲ್ಲದಿರುವಾಗ ಮಳೆ ಇನ್ನೆಲ್ಲಿಂದ ಬರಲು ಸಾಧ್ಯವಾದೀತು. ಮುಂಗಾರು ಮಳೆ ಎಂಬುದು ಮರೀಚಿಕೆಯಾಗಿದೆ. ಹಳ್ಳಕೊಳ್ಳಗಳು ತುಂಬುತ್ತಿಲ್ಲ. ವರ್ಷಪೂರ್ತಿ ಹರಿಯುತ್ತಿಲ್ಲ. ಮರಳು ನಿಕ್ಷೇಪ ಖಾಲಿಯಾಗಿದೆ. ಅಂತರ್ ಜಲ ಬತ್ತಿ ಹೋಗಿದೆ. ಪ್ರತಿವರ್ಷವೂ ನೀರಿನ ಸಂಕಷ್ಟ ಎದುರಾಗಿ ಕುಡಿಯುವ ನೀರಿಗೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

       ನೀರಿನ ಸಂರಕ್ಷಣೆಯ ಬಗ್ಗೆ ಯಾರಿಗೂ ಕಾಳಜಿಯೇ ಇಲ್ಲ. ಸರ್ಕಾರದ ಯೋಜನೆಗಳು ಕಡತಗಳಲ್ಲಿ ಸೇರಿ ಹೋಗುತ್ತಿವೆ. ಅಧಿಕಾರಿ ಮತ್ತು ಜನಪ್ರತಿನಿಧಿಗಳಲ್ಲಿ ಭವಿಷ್ಯದ ಬಗ್ಗೆ ಚಿಂತಿಸುವ ಯೋಜನೆಗಳಿಲ್ಲ. ತಾತ್ಕಾಲಿಕ ಯೋಜನೆಗಳಿಂದ ಸಮಸ್ಯೆ ನಿವಾರಣೆಯಾಗುತ್ತಿಲ್ಲ. ಭೂಮಿಯನ್ನು ಕಸದ ತಿಪ್ಪೆಯನ್ನಾಗಿ ಮಾಡಿಕೊಂಡಿದ್ದೇವೆ. ವಿಷಕಾರಿ ತ್ಯಾಜ್ಯ ಭೂಮಿಯೊಳಗೆ ಸೇರಿ ಹೋಗುತ್ತಿದೆ. ಶುದ್ಧ ಕುಡಿಯುವ ನೀರಿಗಾಗಿ ಅಲೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂದೆ ಈ ಸಮಸ್ಯೆ ಮತ್ತಷ್ಟು ಭೀಕರ ಆಗಬಹುದು.

        ಯಥೇಚ್ಛವಾಗಿ ಮಳೆ ಬರಲು ಕಾಡು ಇರಬೇಕು. ಅರಣ್ಯ ಸಂಪತ್ತನ್ನು ರಕ್ಷಿಸಬೇಕು. ಗಿಡ ಮರಗಳನ್ನು ಹೆಚ್ಚು ಹೆಚ್ಚಾಗಿ ಬೆಳೆಸಬೇಕು. ಖನಿಜ ಸಂಪತ್ತು ಹಾಳಾಗದಂತೆ ನೋಡಿಕೊಳ್ಳಬೇಕು. ಜಲವರ್ಗ ವೃದ್ಧಿಗೆ ಏನೆಲ್ಲಾ ಪೂರಕ ಕ್ರಮಗಳನ್ನು ಕೈಗೊಳ್ಳಬೇಕೋ ಅವೆಲ್ಲವನ್ನೂ ತ್ವರಿತವಾಗಿ ಮಾಡಬೇಕು. ಕೆರೆಕಟ್ಟೆಗಳನ್ನು ಸಂರಕ್ಷಿಸಬೇಕು. ನೀರಿನ ಬಳಕೆಯ ಬಗ್ಗೆ ಕೃಷಿಕರಿಗೆ ಅರಿವು ಮೂಡಿಸಬೇಕು. ನಗರ ಪ್ರದೇಶಗಳಲ್ಲಿ ನೀರಿನ ಮಿತವ್ಯಯದ ಜಾಗೃತಿ ಮೂಡಿಸಬೇಕು.

     ಮಕ್ಕಳಲ್ಲಿ ಪರಿಸರ ಪ್ರಜ್ಞೆ ಹೆಚ್ಚಿಸಬೇಕು. ಪರಿಸರ ಕಾಳಜಿ ಮತ್ತು ಪ್ರಜ್ಞೆಯನ್ನು ಈಗಿನಿಂದಲೇ ಮೂಡಿಸದೇ ಹೋದರೆ, ಪ್ರಯತ್ನ ಹಾಕದೇ ಹೋದರೆ ಮುಂದಿನ ದಿನಗಳು ಭಯಾನಕವಾಗಲಿವೆ. ಪರಿಸರ ದಿನಾಚರಣೆ ಹೆಸರಿನಲ್ಲಿ ಒಂದು ದಿನ ಗಿಡ ನೆಟ್ಟರೆ ಸಾಲದು. ನಿತ್ಯವೂ ಪರಿಸರ ಪ್ರಜ್ಞೆ ಎಲ್ಲರಲ್ಲೂ ಇರುವಂತಾಗಬೇಕು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap