ದಾವಣಗೆರೆ:
ಪರಿಸರ ಸಂರಕ್ಷಣೆಯು ಪ್ರತಿಯೊಬ್ಬರ ಹೊಣೆಯಾಗಿದ್ದು, ಪರಿಸರ ರಕ್ಷಣೆ ಮಾಡುವ ಮೂಲಕ ಮುಂದಿನ ಪೀಳಿಗೆಗೆ ಕಲ್ಮಶವಿಲ್ಲದ ಉತ್ತಮ ವಾತಾವರಣ ನೀಡಬೇಕೆಂದು ಜೆ.ಎಚ್.ಪಟೇಲ್ ಕಾಲೇಜು ಕಾರ್ಯದರ್ಶಿ ದೊಗ್ಗಳ್ಳಿ ಗೌಡ್ರು ಪುಟ್ಟರಾಜು ಕರೆ ನೀಡಿದರು.
ನಗರದ ವಿಶ್ವೇಶ್ವರಯ್ಯ ಉದ್ಯಾನವನದಲ್ಲಿ ಬುಧವಾರ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಪರಿಸರ ಸಂರಕ್ಷಣಾ ವೇದಿಕೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್, ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘ ಇವುಗಳ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಏರ್ಪಡಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಮ್ಮ ಪೂರ್ವಜರು ನಮಗೆ ಉತ್ತಮ ಪರಿಸರವನ್ನು ಬಿಟ್ಟುಕೊಟ್ಟು ಹೋಗಿದ್ದಾರೆ. ಆದರೆ, ಇಂದು ನಾವು ನಮ್ಮ ದುರಾಸೆಗಾಗಿ ಪರಿಸರವನ್ನೇ ನಾಶ ಮಾಡುತ್ತಿರುವುದು ಸರಿಯಲ್ಲ. ನಮ್ಮ ಪೂರ್ವಿಕರಂತೆ ನಾವು ಸಹ ಪರಿಸರ ಸಂರಕ್ಷಣೆಗೆ ಮುಂದಾಗುವ ಮೂಲಕ ಮುಂದಿನ ಪೀಳಿಗೆಗೆ ಉತ್ತಮ ಪರಿಸರನ್ನು ಕೊಡುಗೆಯಾಗಿ ನೀಡೋಣ ಎಂದರು.
ಪರಿಸರದ ರಕ್ಷಣೆಯ ಕಡೆಗೆ ಯಾರೂ ಸಹ ಗಮನ ಹರಿಸುತ್ತಿಲ್ಲ. ಹೀಗಾಗಿ ವಾಹನಗಳ ದಟ್ಟವಾದ ಹೊಗೆ, ಕಸದ ರಾಶಿ, ಅಸ್ವಚ್ಛತೆ, ಪ್ಲಾಸ್ಟಿಕ್ ಬಳಕೆ, ಗಿಡ ಮರಗಳ ಮಾರಣಹೋಮದಿಂದಾಗಿ ಪರಿಸರ ನಾಶವಾಗುತ್ತಿದೆ. ಹೀಗಾಗಿ ಪರಿಸರ ಸಂರಕ್ಷಣೆಯ ಬಗ್ಗೆ ಈಗಿನಿಂದಲೇ ಮಕ್ಕಳಲ್ಲಿ ಅರಿವು ಮೂಡಿಸಬೇಕು. ಆಗ ಮಾತ್ರ ಸ್ವಚ್ಛ ಪರಿಸರ ನಿರ್ಮಾಣವಾಗಿ ಆರೋಗ್ಯಯುತ ಜೀವನ ನಡೆಸಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಜಿಲ್ಲಾ ಪರಿಸರ ನಿಯಂತ್ರಣಾಧಿಕಾರಿ ಕೆ.ಬಿ.ಕೊಟ್ರೇಶ ಮಾತನಾಡಿ, ವಾಹನಗಳ ಹೊಗೆ, ಧೂಳು, ಚರಂಡಿ ಸ್ವಚ್ಛವಾಗಿರದೇ ಇರುವುದು, ನಮ್ಮ ಮನೆಯ ಸುತ್ತಮುತ್ತ ಸ್ವಚ್ಛತೆ ಇಲ್ಲದಿರುವುದು, ಕಾರ್ಖಾನೆಗಳು ಹೊರ ಬಿಡುವ ಕಲ್ಮಶಯುಕ್ತ ಹೊಗೆಯ ಕಾರಣದಿಂದ ಇಂದು ಪರಿಸರ ಹಾಳಾಗುತ್ತಿದೆ. ಕಾರ್ಖಾನೆಗಳು ವೈಜ್ಞಾನಿಕ ಪದ್ದತಿಗಳನ್ನು ಅಳವಡಿಸಿಕೊಂಡು ಹೊಗೆಯನ್ನು ಶುದ್ಧೀಕರಣ ಮಾಡಿ ಹೊರ ಬಿಡುವ ಕ್ರಮ ಅನುಸರಿಸಬೇಕು ಹಾಗೂ ಸಾರ್ವಜನಿಕರು ಅನವಶ್ಯವಾಗಿ ವಾಹನ ಬಳಕೆಯನ್ನು ಮಾಡುವುದನ್ನು ನಿಲ್ಲಿಸಬೇಕೆಂದು ಹೇಳಿದರು.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‍ನ ಜಿಲ್ಲಾ ಅಧ್ಯಕ್ಷ ಡಾ.ಬಿ.ಇ.ರಂಗಸ್ವಾಮಿ ಮಾತನಾಡಿ, 1972ರಲ್ಲಿ ಯುರೋಪ್‍ನಲ್ಲಿ ಈ ದಿನಾಚರಣೆ ಆರಂಭಗೊಂಡಿತು. 1974ರ ಜೂ.5 ರಿಂದ ಪ್ರತಿ ವರ್ಷ ವಿಶ್ವ ಪರಿಸರ ದಿನವನ್ನು ಆಚರಿಸುತ್ತಿದ್ದೇವೆ. 1987ರಿಂದ ಪ್ರತಿವರ್ಷ ಒಂದೊಂದು ಥೀಮ್‍ನೊಂದಿಗೆ ವಿಶ್ವ ಪರಿಸರ ದಿನಾಚರಣೆ ಆಚರಿಸುತ್ತಾ ಬಂದಿದ್ದೇವೆ. ನಮ್ಮ ದೇಶದಲ್ಲಿ 15 ಕೋಟಿ ಜನಸಂಖ್ಯೆ ಕಲ್ಮಶಗಳಿಂದ ನರಳುತ್ತಿದ್ದಾರೆ. 5ಲಕ್ಷ ಮಕ್ಕಳು ವಾಯು ಮಾಲಿನ್ಯ ಖಿನ್ನತೆಯಿಂದ ಹುಟ್ಟುತ್ತಿವೆ
ಜನರಿಗೆ ಶುದ್ಧವಾದ ಗಾಳಿ, ಕುಡಿಯಲು ಶುದ್ಧವಾದ ನೀರು ಸಿಗುವಂತಾಗಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕೂಡಾ ಗಿಡ ಮರಗಳನ್ನು ಬೆಳೆಸಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಪರಿಸರ ಪ್ರೇಮಿ ಕೆ.ಟಿ.ಗೋಪಾಲಗೌಡ, ನಂದಿ ನರ್ಸಿಂಗ್ ಹೋಂನ ಡಾ.ಪಿ.ಅಶ್ವಿನ್, ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ನಾಗಭೂಷಣ, ಕಾರ್ಯದರ್ಶಿ ಶಾಂತಯ್ಯ ಪರಡಿಮಠ, ಕರಾವಿಪ ಕಾರ್ಯದರ್ಶಿ ಎಂ.ಗುರುಸಿದ್ದಸ್ವಾಮಿ, ಪಸಂವೇ ಅಧ್ಯಕ್ಷ ಗಿರೀಶ ದೇವರಮನಿ, ಪ್ರಧಾನ ಕಾರ್ಯದರ್ಶಿ ಪ್ರಸನ್ನ ಬೆಳಕೆರೆ, ಅಮೃತ ಯುವಕರ ಸಂಘದ ಅಧ್ಯಕ್ಷ ಆರ್.ಜಿ.ಹನುಮಂತಪ್ಪ, ಪತ್ರಕರ್ತ ನವೀನ್, ಭಾನುವಳ್ಳಿ ಶೆಟ್ರು ರಾಘವೇಂದ್ರ ಭಾಗವಹಿಸಿದ್ದರು. ಪರಿಸರ ದಿನಾಚರಣೆ ಅಂಗವಾಗಿ ನಡೆದ ಚಿತ್ರಕಲಾ ಸ್ಪರ್ಧೆಯಲ್ಲಿ 160ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದು, ಎಲ್ಲರಿಗೂ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.