ಶಿರಾ : ಪಾರ್ಕ್ ಮೊಹಲ್ಲಾ ಬಡಾವಣೆ ಸೀಲ್‍ಡೌನ್

ಶಿರಾ

      ನಗರದಲ್ಲಿ ಪ್ರಥಮವಾಗಿ ಕೋರೊನಾ ಸೋಂಕು ಶಿರಾ ನಗರದಲ್ಲಿ ಕಾಣಿಸಿಕೊಂಡು ವ್ಯಕ್ತಿಯೊಬ್ಬ ಮಾ:27 ರಂದು ಮೃತಪಟ್ಟ ಹಿನ್ನೆಲೆಯಲ್ಲಿ ಇಡೀ ತಾಲ್ಲೂಕಿನ ಜನತೆ ಭಯಭೀತರಾಗಿ ಆತಂಕದ ವಾತಾವರಣದಲ್ಲಿ ಮುಳುಗಿದಾಗ ತಾಲ್ಲೂಕು ಆಡಳಿತ ಎಲ್ಲಾ ರೀತಿಯ ಬಿಗಿ ಕ್ರಮಗಳನ್ನು ಕೈಗೊಂಡು ಜನತೆಗೆ ಧೈರ್ಯ ತುಂಬುವ ಕೆಲಸ ಮಾಡಿತು.

      ಕಲಬುರುಗಿಯ ನಂತರ ಇಡೀ ರಾಜ್ಯದಲ್ಲಿಯೇ ಕೊರೋನಾ ಸೋಂಕಿನಿಂದ ವ್ಯಕ್ತಿಯೊಬ್ಬ ಮೃತಪಟ್ಟಿದ್ದು ಶಿರಾ ನಗರದಲ್ಲಿ ಅನ್ನುವುದು ಸರಿಯಷ್ಟೇ. ಲಾಕ್‍ಡೌನ್ ಸಂದರ್ಬದಲ್ಲಂತೂ ಶಿರಾ ಹೆಸರನ್ನು ಕೇಳಿದರೆ ರಾಜ್ಯದ ಜನ ಬೆಚ್ಚಿ ಬೀಳುವುದು ಕೂಡಾ ಸಹಜವಾಗಿತ್ತು.

     ವ್ಯಕ್ತಿಯೊಬ್ಬ ಮೃತಪಟ್ಟು ಸೋಂಕಿತ ಯುವಕ ಕೂಡಾ ಗುಣಮುಖನಾಗಿ ಕ್ವಾರಂಟೇನ್‍ನಲ್ಲಿದ್ದವರೆಲ್ಲರ ಫಲಿತಾಂಶವೂ ನೆಗೆಟೀವ್ ಬಂದಾಗ ಕೇವಲ ಅಧಿಕಾರಿಗಳಷ್ಟೇ ಅಲ್ಲದೆ ತಾಲ್ಲೂಕಿನ ಜನ ಕೂಡಾ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ವಾತಾವರಣ ತಿಳಿಯಾಗುವತನಕವೂ ಇಡೀ ತಾಲ್ಲೂಕು ಆಡಳಿತ, ಆರೋಗ್ಯ ಇಲಾಖೆ ಹಾಗೂ ಆರಕ್ಷಕ ಅಧಿಕಾರಿಗಳು ಮತ್ತು ಸಿಬ್ಬಂಧಿ ಕೈಗೊಂಡ ಬಂದೋಬಸ್ತಿನ ಕ್ರಮಗಳನ್ನು ಜನ ಸಾಮಾನ್ಯರು ಕೂಡಾ ಕೊಂಡಾಡುವಂತಾಗಿತ್ತು.

    ವಾತಾವರಣ ತಿಳಿಯಾಗುವಷ್ಟರಲ್ಲಿ ಬೆಂಗಳೂರಿನ ಪಾದರಾಯನಪುರದ ಸೋಂಕಿತ ವ್ಯಕ್ತಿಯೊಬ್ಬ ಗಾಡಿವಾನ್ ಮೊಹಲ್ಲಾಕ್ಕೆ ಸೋಂಕನ್ನು ಹೊತ್ತು ತಂದಾಗ ಇಡೀ ತಾಲ್ಲೂಕಿನ ವಾತಾವರಣ ಮತ್ತಷ್ಟು ಜಟಿಲಗೊಂಡಿತು. ಪಾದರಾಯನಪುರ ಸೋಂಕಿತ ವ್ಯಕ್ತಿ ಹಾಗೂ ಆತನೂ ಸೇರಿದಂತೆ ಆತನ ಸಂಪರ್ಕದಲ್ಲಿದ್ದ ಎರಡು ಕುಟುಂಬಗಳ ಸದಸ್ಯರ ಫಲಿತಾಂಶವೂ ಕೂಡಾ ನೆಗೆಟೀವ್ ಬಂದು ಗುಣಮುಖರಾದ ಅವರನ್ನು ಮನೆಗೆ ಕಳುಹಿಸಿಕೊಡಲಾಗಿತ್ತು.

    ಇನ್ನೇನು ಲಾಕ್‍ಡೌನ್ ಸಡಿಲಗೊಂಡು ಸೀಲ್‍ಡೌನ್ ಆಗಿದ್ದ ಗಾಡಿವಾನ್ ಮೊಹಲ್ಲಾ ಬಡಾವಣೆಯನ್ನು ಕಳೆದ ಮೂರು ದಿನಗಳ ಹಿಂದಷ್ಟೇ ಸೀಲ್‍ಡೌನ್‍ನಿಂದ ತೆರವುಗೊಳಿಸಲಾಗಿತ್ತು. ಎಲ್ಲವೂ ಸುಧಾರಿಸಿತು ಅನ್ನುವಷ್ಟರಲ್ಲಿ ಆಂದ್ರ ಪ್ರದೇಶದ ಹಿಂದೂಪುರದ ಸೋಂಕು ಶಿರಾ ನಗರಕ್ಕೆ ನಿನ್ನೆಯಷ್ಟೇ ಪಾದಾರ್ಪಣೆ ಮಾಡಿದೆ.

     ನಗರದ ಪಾರ್ಕ್ ಮೊಹಲ್ಲಾ ಬಡಾವಣೆಯ ವ್ಯಕ್ತಿಯೊಬ್ಬರಲ್ಲಿ ಕೊರೋನಾ ಸೋಂಕು ದೃಢಗೊಂಡ ಹಿನ್ನೆಲೆಯಲ್ಲಿ ಸದರಿ ಬಡಾವಣೆಯ ನಾಲ್ಕನೇ ಅಡ್ಡ ರಸ್ತೆಯನ್ನು ಸಂಪೂರ್ಣವಾಗಿ ನಿನ್ನೆಯೇ ಸೀಲ್‍ಡೌನ್ ಮಾಡಲಾಗಿದೆ.ನಗರದ ಪಾರ್ಕ್ ಮೊಹಲ್ಲಾ ಬಡಾವಣೆಯಲ್ಲಿ ಕೊರೋನಾ ಶಂಕಿತ ವ್ಯಕ್ತಿಯೊಬ್ಬನ ಮಾಹಿತಿ ಲಭ್ಯವಾದ ಕೂಡಲೇ ಸೋಮವಾರ ರಾತ್ರಿ ಸೋಂಕಿತ ವ್ಯಕ್ತಿ ಇದ್ದ ಸ್ಥಳಕ್ಕೆ ತೆರಳಿದ ಅಂಬ್ಯುಲೆನ್ಸ್ ಅವರ ಕುಟುಂಬದ ಸದಸ್ಯರನ್ನೂ ಕರೆದೊಯ್ದು ಕ್ವಾರಂಟೈನ್ ಮಾಡಲಾಗಿದೆ.

     40 ವರ್ಷದ ಸೋಂಕಿತ ವ್ಯಕ್ತಿಯ ಕುಟುಂಬವು ಆಂದ್ರ ಪ್ರದೇಶದ ಹಿಂದೂಪುರದಲ್ಲಿ ಇದ್ದದ್ದರಿಂದ ಅವರನ್ನು ಕರೆ ತರಲು ಮೇ:30ರಂದು ಹಿಂದೂಪುರಕ್ಕೆ ದ್ವಿಚಕ್ರ ವಾಹನದಲ್ಲಿ ಹೋಗಿದ್ದ ಎನ್ನಲಾಗಿದೆ. ಜೂನ್:2 ರಂದು ಆಂದ್ರ ಪ್ರದೇಶದಿಂದ ಹಿಂದಿರುಗಿದ್ದ ಆತನಿಗೆ ಇದೇ ತಿಂಗಳ 6 ರಂದು ಜ್ವರ, ಕೆಮ್ಮು ಕಾಣಿಸಿಕೊಂಡಿದ್ದು ಚಿಕಿತ್ಸೆಗೆಂದು ಖಾಸಗಿ ವೈದ್ಯರ ಬಳಿ ತೆರಳಿದ್ದರು. ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಿದಾಗ ಆತನು ಸರ್ಕಾರಿ ಆಸ್ಪತ್ರೆಗೆ ತೆರಳಿ ಪರೀಕ್ಷೆಗೆ ಒಳಪಡಿಸಿ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಿಕೊಡಲಾಗಿತ್ತು. ಜೂನ್:8 ರಂದು ಆತನಿಗೆ ಕೊರೋನಾ ಸೋಂಕಿರುವುದು ದೃಢಪಟ್ಟಿದೆ.

     ಶಂಕಿತ ವ್ಯಕ್ತಿಯ ಬಡಾವಣೆಗೆ ಸೋಮವಾರ ರಾತ್ರಿಯೇ ತೆರಳಿದ ಕಂದಾಯ ಇಲಾಖೆಯ ಸಿಬ್ಬಂಧಿ ಹಾಗೂ ಆರಕ್ಷಕ ಇಲಾಖೆಯ ಅಧಿಕಾರಿಗಳು ಸದರಿ ಸ್ಥಳಕ್ಕೆ ಭೇಟಿ ನೀಡಿ ಸೀಲ್‍ಡೌನ್ ಮಾಡಿದರು. ಮಂಗಳವಾರ ಬೆಳಿಗ್ಗೆ ಸೀಲ್‍ಡೌನ್ ಪ್ರದೇಶಕ್ಕೆ ಭೇಟಿ ನೀಡಿದ ತಾಲ್ಲೂಕು ದಂಡಾಧಿಕಾರಿ ಶ್ರೀಮತಿ ನಾಹಿದಾ ಜಮ್ ಜಮ್ ಸದರಿ ಬಡಾವಣೆಯಲ್ಲಿನ ಸಾರ್ವಜನಿಕರಿಗೆ ಮುಂಜಾಗ್ರತಾ ಕ್ರಮಗಳ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ತಾಲ್ಲೂಕು ದಂಡಾಧಿಕಾರಿಗಳೇ ಮುಂದೆ ನಿಂತು ಸೋಂಕಿತ ವ್ಯಕ್ತಿಯ ಬಡಾವಣೆಯಲ್ಲಿನ ರಸ್ತೆಗಳಿಗೆ ಸ್ಯಾನಿಟೈಸರ್ ಮಾಡಿಸಿದ್ದಾರೆ.

      ಸೀಲ್‍ಡೌನ್ ಆಗಿರುವ ಪಾರ್ಕ್ ಮೊಹಲ್ಲಾ ಬಡಾವಣೆಯ ಒಳಗೆ ಯಾರೂ ಕೂಡಾ ಪ್ರವೇಶಿಸುವಂತಿಲ್ಲ, ಬಡಾವಣೆಯಲ್ಲಿನ ನಿವಾಸಿಗಳು ಅನಾರೋಗ್ಯದ ನಿಮಿತ್ತ ಹೊರ ಬಂದರೂ ಅಧಿಕಾರಿಗಳಿಗೆ ಮಾಹಿತಿ ನೀಡಿ ಹೊರ ಬರಬೇಕು. ಮೂಲಭೂತ ಸೌಲಭ್ಯಗಳನ್ನು ಬಡಾವಣೆಯ ಒಳಗೆಯೇ ಪಡೆದುಕೊಳ್ಳಲು ಅವಕಾಶವಿದ್ದು ಯಾರೂ ಕೂಡಾ ಆತಂಕಪಡುವ ಅಗತ್ಯವಿಲ್ಲ ಎಂದು ತಾಲ್ಲೂಕು ದಂಡಾಧಿಕಾರಿ ಶ್ರೀಮತಿ ನಾಹಿದಾ ಜಮ್ ಜಮ್ ಬಡಾವಣೆಯ ಸಾರ್ವಜನಿಕರಿಗೆ ದೈರ್ಯ ತುಂಬಿದ್ದಾರೆ.

       ಈ ನಡುವೆ ನಗರದ ನಾಯಕರ ಹಟ್ಟಿಯಲ್ಲಿ ಸೋಂಕಿತ ವ್ಯಕ್ತಿಯು ಪಾತ್ರೆ ಮಾರಾಟದ ಅಂಗಡಿಯೊಂದನ್ನು ಇಟ್ಟಿದ್ದು ಸದರಿ ವ್ಯಕ್ತಿ ಈ ಭಾಗದ ರಸ್ತೆಯಲ್ಲಿ ಓಡಾಡಿರಬಹುದೆಂಬ ಶಂಕೆಯಿಂದ ನಾಯಕರ ಹಟ್ಟಿಯ ರಸ್ತೆಯನ್ನೂ ಸ್ಯಾನಿಟೈಸರ್ ಮಾಡಲಾಗಿದೆ. ಸೋಂಕಿತ ವ್ಯಕ್ತಿಯನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು. ಅವರ ಕುಟುಂಬದ ಸದಸ್ಯರನ್ನು ಶಿರಾದ ತಾಯಿ-ಮಗು ಆಸ್ಪತ್ರೆಯಲ್ಲಿ ಕ್ವಾರಂಟೇನ್ ಮಾಡಲಾಗಿದೆ. ಸೋಂಕಿತನ ಪ್ರಾಥಮಿಕ ಸಂಪರ್ಕ ಹೊಂದಿದ್ದವರ ಬಗ್ಗೆಯೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ ಎನ್ನಲಾಗಿದೆ.

       ಈ ಹಿಂದೆ ನಗರದಲ್ಲಿ ವ್ಯಕ್ತಿಯೊಬ್ಬರು ಕೊರೋನಾ ಸೋಂಕಿಗೆ ಬಲಿಯಾಗಿದ್ದರು. ಇನ್ನೊಬ್ಬ ಯುವಕನಿಗೆ ಸೋಂಕು ಇರುವುದು ಪತ್ತೆಯಾಗಿ ಆತನನ್ನು ಜಿಲ್ಲಾಸ್ಪತ್ರೆಯ ಐಸೋಲೇಷನ್‍ನಲ್ಲಿಟ್ಟು ಚಿಕಿತ್ಸೆಯ ನಂತರ ಗುಣಮುಖನಾಗಿದ್ದನು. ಎಲ್ಲರ ಫಲಿತಾಂಶ ನೆಗೆಟೀವ್ ಬಂದು ಇನ್ನೇನು ಶಿರಾ ಸ್ವಲ್ಪ ರಿಲ್ಯಾಕ್ಸ್ ಆಯ್ತು ಅನ್ನುವಷ್ಟರಲ್ಲಿ ಬೆಂಗಳೂರು ಪಾದರಾಯನಪುರದ ಸೋಂಕು ಶಿರಾದಲ್ಲಿ ಕಾಣಿಸಿಕೊಂಡದ್ದನ್ನು ಸ್ಮರಿಸಬಹುದು.

     ಪಾದರಾಯನಪುರದ ಸೋಂಕು ಮರೆಯಾಗಿ ಎಲ್ಲವೂ ಸರಿ ಹೋಯ್ತು ಎಂದು ಮತ್ತೊಮ್ಮೆ ಜನತೆ ನಿಟ್ಟುಸಿರು ಬಿಡುವಷ್ಟರಲ್ಲಿ ಇದೀಗ ಕರ್ನಾಟಕದ ಗಡಿಯಲ್ಲಿನ ಅದರಲ್ಲೂ ತಾಲ್ಲೂಕಿಗೆ ಹೊಂದಿಕೊಂಡಂತೆಯೇ ಇರುವ ಹಿಂದೂಪುರದ ಸೋಂಕು ಶಿರಾ ನಗರದಲ್ಲಿ ಕಾಣಿಸಿಕೊಂಡ ಪರಿಣಾಮ ಸಾರ್ವಜನಿಕರಲ್ಲಿ ಕೊಂಚ ಆತಂಕಕ್ಕೆ ಎಡೆಯಾಗಿದೆ.

     ಶಿರಾ ತಾಲ್ಲೂಕಿನ ಗಡಿಭಾಗದಿಂದ ಹಿಂದೂಪುರ ಅಷ್ಟೇನೂ ದೂರವಿಲ್ಲ. ಇದೇ ಆಂದ್ರ ಪ್ರದೇಶದ ಮಡಕಶಿರಾ ತಾಲ್ಲೂಕಿನ ಬಹುತೇಕ ಗ್ರಾಮಗಳ ಶಿರಾ ಗಡಿಯಲ್ಲಿಯೇ ಇರುವ ಕಾರಣ ಗಡಿ ಭಾಗದ ಗ್ರಾಮಗಳ ಜನತೆಯಲ್ಲಿ ಆತಂಕ ಸಹಜವಾಗಿಯೇ ಇದೆ.ಆಂದ್ರ ಪ್ರದೇಶದಲ್ಲಿ ಈವರೆಗೂ ಲಾಕ್‍ಡೌನ್ ಸಡಿಲಗೊಳಿಸಿಲ್ಲ. ಕಾರಣ ಹಿಂದೂಪುರ ಭಾಗದಲ್ಲಿ ಸೋಂಕಿನ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ತನ್ನ ಗಡಿಯಲ್ಲಿ ಆಂದ್ರದ ಆರಕ್ಷಕ ಇಲಾಖೆ ಕಣ್ಗಾವಲು ಇಟ್ಟಿದೆ. ಈ ನಡುವೆಯೂ ಆಂದ್ರ ಪ್ರದೇಶದಿಂದ ಶಿರಾ ತಾಲ್ಲೂಕಿನೊಳಗೆ ಕೆಲವರು ಬಂದು ಹೋಗುತ್ತಿದ್ದು ಶಿರಾ ಭಾಗದ ಗಡಿಯ ಚೆಕ್‍ಪೋಸ್ಟ್‍ಗಳನ್ನು ತಾಲ್ಲೂಕು ಆಡಳಿತ ಬಿಗಿಗೊಳಿಸುವ ಅನಿವಾರ್ಯತೆಯೂ ಇದೆ.

     ಶಿರಾ ನಗರದಲ್ಲಿ ಕೊರೋನಾ ಸೋಂಕಿನ ಪ್ರಕರಣ ಮತ್ತೊಮ್ಮೆ ಮೇಳೈಸಿದ ಹಿನ್ನೆಲೆಯಲ್ಲಿ ನಗರಸಭೆಯೂ ಸೇರಿದಂತೆ ಆರಕ್ಷಕ ಇಲಾಖೆ ಹಾಗೂ ತಾಲ್ಲೂಕು ಆಡಳಿತ ಮತ್ತಷ್ಟು ಬಿಗಿ ಕ್ರಮ ಕೈಗೊಳ್ಳುವುದು ಅನಿವಾರ್ಯವೂ ಆಗಿದೆ. ಮಾಸ್ಕ್ ಇಲ್ಲದೆಯೇ ಸಂಚರಿಸುವವರ ವಿರುದ್ಧ ನಗರಸಭೆ ಬಹಳಷ್ಟು ದಂಡ ವಿಧಿಸುತ್ತಿದ್ದರೂ ನಗರದ ಬಹುಭಾಗದಲ್ಲಿ ಮಾಸ್ಕ್ ಧರಿಸದೆಯೇ ಓಡಾಡುವವರ ಸಂಖ್ಯೆ ಹೆಚ್ಚಾಗಿದ್ದು ಕೂಡಲೇ ತಾಲ್ಲೂಕು ಆಡಳಿತ ಕ್ರಮ ಕೈಗೊಳ್ಳಬೇಕಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link