ನಾಳೆಯಿಂದ ಶಿವಮೊಗ್ಗದಲ್ಲಿ ಭಾಗಶಃ ಲಾಕ್ ಡೌನ್ : ಈಶ್ವರಪ್ಪ

ಶಿವಮೊಗ್ಗ

    ಕರೋನಾ ಸೋಂಕು ನಿಯಂತ್ರಣದ ಕ್ರಮವಾಗಿ ಶಿವಮೊಗ್ಗ ಜಿಲ್ಲೆಯಾದ್ಯಂತ  ಜುಲೈ 16ರಿಂದ  ಮುಂದಿನ ಆದೇಶದವರೆಗೆ ಮಧ್ಯಾಹ್ನ 2ಗಂಟೆಯವರೆಗೆ ಮಾತ್ರ ವ್ಯಾಪಾರ ವಹಿವಾಟಿಗೆ ಅವಕಾಶ ಕಲ್ಪಿಸಲಾಗುವುದು. ಉಳಿದಂತೆ ಭಾಗಶಃ ಲಾಕ್ ಡೌನ್ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.

     ಅವರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಸಮಾಲೋಚನಾ ಸಭೆ ನಡೆಸಿದ ಬಳಿಕ ಈ ತೀರ್ಮಾನ ಪ್ರಕಟಿಸಿದರು.

      ಪೆಟ್ರೋಲ್ ಬಂಕ್‍ಗಳು, ಮದ್ಯದ ಅಂಗಡಿಗಳು, ಕಚೇರಿಗಳು ಸೇರಿದಂತೆ ಎಲ್ಲಾ ವ್ಯಾಪಾರ ವಹಿವಾಟುಗಳನ್ನು ಮಧ್ಯಾಹ್ನ 2ಗಂಟೆವರೆಗೆ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಆದರೆ ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ಯಾವುದೇ ನಿರ್ಬಂಧ ಇರುವುದಿಲ್ಲ. ಕೈಗಾರಿಕಾ ಚಟುವಟಿಕೆಗಳಿಗೆ ಸಮಯದ ಮಿತಿ ವಿಧಿಸಿಲ್ಲ. ಆದರೆ ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಕಡ್ಡಾಯವಾಗಿ ಗುರುತಿನ ಚೀಟಿ ಹೊಂದಿರಬೇಕು. ಕಾರ್ಮಿಕರಿಗೆ ಗುರುತಿನ ಚೀಟಿಯನ್ನು ಒದಗಿಸುವುದು ಮಾಲಿಕರ ಜವಾಬ್ದಾರಿ ಎಂದು ಹೇಳಿದರು.

     ಹಬ್ಬ ಹರಿದಿನಗಳನ್ನು ಸಾಮೂಹಿಕವಾಗಿ ಆಚರಿಸಲು ಅವಕಾಶವಿಲ್ಲ. ಎಲ್ಲಾ ಹಬ್ಬಗಳನ್ನು ಮನೆಗಳಲ್ಲಿಯೇ ಆಚರಿಸಬಹುದಾಗಿದೆ. ಮದುವೆ, ಅಂತ್ಯಸಂಸ್ಕಾರ ಚಟುವಟಿಕೆಗಳಿಗೆ ಈ ಹಿಂದೆ ನಿಗದಿಪಡಿಸಲಾಗಿದ್ದ ಮಾನದಂಡವನ್ನು ಕಟ್ಟುನಿಟ್ಟಿನಿಂದ ಪಾಲಿಸಲು ಸೂಚಿಸಲಾಗಿದೆ ಎಂದು ನುಡಿದರು.
 
     ವ್ಯಕ್ತಿಗತ ಅಂತರ ಕಾಯ್ದುಕೊಳ್ಳದೇ ಗುಂಪುಗೂಡುವುದು, ಮಾಸ್ಕ್ ಧರಿಸದೇ ಇರುವುದು ಸೇರಿದಂತೆ ಮಾರ್ಗಸೂಚಿಗಳನ್ನು ಉಲ್ಲಂಘಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಪೆÇಲೀಸ್ ಇಲಾಖೆಗೆ ಸೂಚಿಸಲಾಗಿದೆ ಎಂದರು.

      ಇದಕ್ಕೂ ಮೊದಲು ನಡೆದ ಸಮಾಲೋಚನಾ ಸಭೆಯಲ್ಲಿ ಚೇಂಬರ್ ಆಫ್ ಕಾಮರ್ಸ್, ಲಾರಿ ಮಾಲಿಕರ ಸಂಘ, ಅಟೋ ಕಾಂಪ್ಲೆಕ್ಸ್ ಸಂಘ, ಸಗಟು ತರಕಾರಿ ವ್ಯಾಪಾರಿಗಳ ಸಂಘ, ಮಾಚೇನಹಳ್ಳಿ ಕೈಗಾರಿಕಾ ವಸಾಹತು ಸಂಘ, ವಿಶ್ವೇಶ್ವರಯ್ಯ ಸಣ್ಣ ಕೈಗಾರಿಕೆಗಳ ಸಂಘ, ಬಸ್ ಮಾಲಿಕರ ಸಂಘ, ಜವಳಿ ವರ್ತಕರ ಸಂಘ, ರಿಕ್ಷಾ ಚಾಲಕರ ಒಕ್ಕೂಟ ಸೇರಿದಂತೆ ಹಲವು ಸಂಘ ಸಂಸ್ಥೆಗಳ ಪ್ರತಿನಿಧಿಗಳು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

     ಕೈಗಾರಿಕೆಗಳಿಗೆ ವಿನಾಯಿತಿ ನೀಡಬೇಕು, ಅಟೋ ಕಾಂಪ್ಲೆಕ್ಸ್‍ನಲ್ಲಿ ಸಂಜೆ 6ರವರೆಗೆ ಚಟುವಟಿಕೆಗಳಿಗೆ ಅನುವು ಮಾಡಿಕೊಡಬೇಕು, ಸೀಲ್‍ಡೌನ್ ಪ್ರದೇಶದಲ್ಲಿರುವ ಬಡವರಿಗೆ ಜಿಲ್ಲಾಡಳಿತದಿಂದ ಉಚಿತವಾಗಿ ತರಕಾರಿ, ದಿನಸಿ ವಿತರಿಸಬೇಕು, ಮಾರ್ಗಸೂಚಿಗಳನ್ನು ಕಟ್ಟುನಿಟ್ಟಿನಿಂದ ಜಾರಿಗೊಳಿಸಬೇಕು ಇತ್ಯಾದಿ ಸಲಹೆಗಳು ಬಂದವು.

     ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಶಾಸಕರಾದ ಹರತಾಳು ಹಾಲಪ್ಪ, ಅರಗ ಜ್ಞಾನೇಂದ್ರ, ಆಯನೂರು ಮಂಜುನಾಥ, ಪ್ರಸನ್ನ ಕುಮಾರ್, ಮೇಯರ್ ಸುವರ್ಣಾ ಶಂಕರ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜ್ಯೋತಿ ಎಸ್ ಕುಮಾರ್, ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಗುರುಮೂರ್ತಿ, ಆರ್ಯವೈಶ್ಯ ನಿಗಮದ ಅಧ್ಯಕ್ಷ ಡಿ.ಎಸ್.ಅರುಣ್, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ, ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ ವಟಾರೆ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap