ಬಳ್ಳಾರಿ
ಮುಕ್ತ,ನಿರ್ಭಿತಿಯಿಂದ ಮತದಾನ ಚಲಾಯಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಅನೇಕ ಕ್ರಮಗಳನ್ನು ಕೈಗೊಂಡಿದ್ದು ಏ.23ರಂದು ಅತ್ಯಂತ ಉತ್ಸಾಹದಿಂದ ಮತಗಟ್ಟೆಗೆ ಬಂದು ಮತಚಲಾಯಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಹೇಳಿದರು.
ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಸರ್ಕಾರಿ ನೌಕರರ ಸಂಘದ ಸಹಯೋಗದೊಂದಿಗೆ ಲೋಕಸಭಾ ಚುನಾವಣೆ ಅಂಗವಾಗಿ ಮತದಾರರಿಗೆ ಮತದಾನದ ಮಹತ್ವದ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಗರದ ಸರ್ಕಾರಿ ಐ.ಟಿ.ಐ ಕಾಲೇಜು ಆವರಣದಿಂದ ಮಂಗಳವಾರ ಏರ್ಪಡಿಸಿದ್ದ ಬೃಹತ್ ಜಾಥಾಗೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವದ ಹಬ್ಬ ಈ ಮತದಾನ ಪ್ರಕ್ರಿಯೆ ಏ.23ರಂದು ಸರ್ವರೂ ಉತ್ಸಾಹದಿಂದ ಬಂದು ಮತದಾನ ಮಾಡಬೇಕು. ಸರಕಾರಿ ನೌಕರರು ಸಹ ಮತದಾನ ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳಬೇಡಿ ಎಂದು ಅವರು ಹೇಳಿದರು.
ಚುನಾವಣೆಯಲ್ಲಿ ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಿ-ವಿಜಲ್ ಆ್ಯಪ್ ಅಭಿವೃದ್ಧಿಪಡಿಸಲಾಗಿದ್ದು, ಚುನಾವಣಾ ಅಕ್ರಮಗಳು ಕಂಡುಬಂದಲ್ಲಿ ತಕ್ಷಣ ಪೋಟೊ ಮತ್ತು ವಿಡಿಯೋ ಕ್ಲಿಕ್ ಮಾಡಿ ಆ್ಯಪ್ ಪ್ ಮೂಲಕ ದೂರು ನೀಡಬಹುದು ಎಂದು ವಿವರಿಸಿದ ಅವರು ಮತದಾರರು ಅತ್ಯಂತ ಖುಷಿಯಿಂದ ಬಂದು ಮತದಾನ ಮಾಡುವ ನಿಟ್ಟಿನಲ್ಲಿ ನೀರು- ನೆರಳು,ವ್ಹೀಲ್ ಚೇರ್, ಭೂತಗನ್ನಡಿ, ವಾಹನದ ವ್ಯವಸ್ಥೆ, ರ್ಯಾಂಪ್ ಸೇರಿದಂತೆ ಅನೇಕ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿದೆ. ಮುಕ್ತ ಮತ್ತು ನಿರ್ಭಿತಿಯಿಂದ ಬಂದು ಮತದಾನ ಚಲಾಯಿಸಬೇಕು ಎಂಬ ಉದ್ದೇಶದಿಂದ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಮತದಾನ ಮಾಡುವುದಕ್ಕೆ ಸಂಬಂಧಿಸಿದಂತೆ ಕಡ್ಡಾಯ ಮತದಾನದ ಕುರಿತು ಪ್ರತಿಜ್ಞಾ ವಿಧಿ ಬೋದಿಸಲಾಯಿತು.
ಈ ಸಂದರ್ಭದಲ್ಲಿ ಜಿಪಂ ಸಿಇಒ ಕೆ.ನಿತೀಶ, ಚುನಾವಣಾ ಆಯೋಗದ ರಾಯಭಾರಿ,ಹಿರಿಯ ರಂಗಕಲಾವಿದೆ ಸುಭದ್ರಮ್ಮ ಮನ್ಸೂರ್, ಜಿಪಂ ಮುಖ್ಯ ಯೋಜನಾಧಿಕಾರಿ ಚಂದ್ರಶೇಖರ ಗುಡಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ವಿಜಯಕುಮಾರ್, ಡಿಎಚ್‍ಒ ಡಾ.ಶಿವರಾಜ ಹೆಡೆ, ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಮಲ್ಲೇಶಪ್ಪ ಹಾಗೂ ಪದಾಧಿಕಾರಿಗಳು ಸೇರಿದಂತೆ ಸಾವಿರಕ್ಕೂ ಹೆಚ್ಚು ಸರಕಾರಿ ನೌಕರರು ಪಾಲ್ಗೊಂಡಿದ್ದರು.
ಸರಕಾರಿ ಐಟಿಐ ಕಾಲೇಜಿನಿಂದ ಆರಂಭವಾದ ಜಾಥಾವು ಕೌಲ್‍ಬಜಾರ್ ಪೊಲೀಸ್ ಠಾಣೆ ಮಾರ್ಗವಾಗಿ ರೇಡಿಯೋ ಪಾರ್ಕ್, ಗಡಂಗ ಸ್ಟ್ರೀಟ್ ಪ್ರದೇಶಗಳ ಮೂಲಕ ಜಿಲ್ಲಾ ಕ್ರೀಡಾಂಗಣದವರೆಗೆ ಹಾಗೂ ಅಲ್ಲಿಂದ ಸರಕಾರಿ ಐಟಿಐ ಕಾಲೇಜಿನವರೆಗೆ ಸಂಚರಿಸಿತು.
ಬಳ್ಳಾರಿ ಪೂರ್ವ ವಲಯ/ಪಶ್ಚಿಮ ವಲಯದ ವ್ಯಾಪ್ತಿಯ ಸರಕಾರಿ ಶಾಲಾ-ಕಾಲೇಜುಗಳ ಉಪನ್ಯಾಸಕರು ಮತ್ತು ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಬ್ಬಂದಿ,ಅಂಗನವಾಡಿ ಕಾರ್ಯಕರ್ತೆಯರು, ಜಿಲ್ಲಾ ಸರಕಾರಿ ನೌಕರರ ಸಂಘದ ಪದಾಧಿಕಾರಿಗಳು ಮತ್ತು ಸರಕಾರಿ ನೌಕರರು ಇದ್ದರು.
ಮತದಾನ ಮಹತ್ವ ಸಾರುವ ಗೀತೆಗಳ ವಾಹನದೊಂದಿಗೆ ನಾಮಫಲಕಗಳನ್ನಿಡಿದುಕೊಂಡು ಘೋಷಣೆಗಳನ್ನು ಕೂಗುತ್ತಾ ಸಾಗಿದರು. ಇದೇ ಸಂದರ್ಭದಲ್ಲಿ ಇವಿಎಂ-ವಿವಿಪ್ಯಾಟ್‍ನ ಪ್ರಾತ್ಯೆಕ್ಷಿಕೆ ಕಾರ್ಯಕ್ರಮ ಸಹ ಆಯೋಜಿಸಲಾಗಿತ್ತು.