ರಾಜಕೀಯ ಪಕ್ಷಗಳ ಬಿರುಸುಗೊಂಡ ಚಟುವಟಿಕೆ

0
17

ಬೆಂಗಳೂರು

      ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ ರಾಜಕೀಯ ಪಕ್ಷಗಳ ಚಟುವಟಿಕೆಗಳು ಬಿರುಸಾಗಿವೆ. ಈ ಬಾರಿ ಚುನಾವಣೆಯಲ್ಲಿ ದಕ್ಷಿಣ ಭಾರತದ ರಾಜ್ಯಗಳನ್ನು ಗುರಿಯಾಗಿಸಿಕೊಂಡಿರುವ ಬಿಜೆಪಿ, ರಹದಾರಿ ಕಂಡುಕೊಳ್ಳಲು ಯತ್ನಿಸುತ್ತಿದೆ. ಕರ್ನಾಟಕದ ಮೂಲಕ ದಕ್ಷಿಣ ಭಾರತದಲ್ಲಿ ಅಧಿಪತ್ಯ ಸಾಧಿಸಲು 2018 ರ ವಿಧಾನಸಭೆ ಚುನಾವಣೆಯಿಂದಲೇ ಬಿಜೆಪಿ ರಣತಂತ್ರ ರೂಪಿಸುತ್ತಿದೆ. ದೆಹಲಿಯಲ್ಲಿ ಈಗಾಗಲೇ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ನಡೆಯುತ್ತಿದ್ದು, ಕರ್ನಾಟಕವೂ ಸೇರಿದಂತೆ ವಿವಿಧ ರಾಜ್ಯಗಳ ಲೋಕಸಭೆಗೆ ತಂತ್ರಗಳು ಸಭೆಯಲ್ಲಿ ಸಿದ್ಧಗೊಳ್ಳುತ್ತಿವೆ.

       ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ದೆಹಲಿ ಸಭೆ ಬಳಿಕ ಕರ್ನಾಟಕದ ಶಾಸಕರು ಹಾಗೂ ಸಂಸದರ ಜೊತೆಗೆ ವಿಶೇಷ ಸಭೆ ನಡೆಸಲು ಮುಂದಾಗಿದ್ದಾರೆ. ಜ. 14 ರಂದು ಕರ್ನಾಟಕ ಬಿಜೆಪಿ ಮುಖಂಡರ ಅನೌಪಚಾರಿಕ ಸಭೆ ನಡೆಯಲಿದ್ದು, ಸಭೆಯಲ್ಲಿ ಚುನಾವಣೆಗೆ ಅಜೆಂಡಾ ಸಿದ್ಧವಾಗಲಿದೆ. ಯಡಿಯೂರಪ್ಪ-ಈಶ್ವರಪ್ಪ ನಡುವಿನ ಜಿದ್ದು ಕಡಿಮೆಯಾಗಿದೆಯೇ ಇಲ್ಲವೇ ಎಂಬುದರ ಬಗ್ಗೆಯೂ ಸಭೆಯಲ್ಲಿ ಷಾ ಅವಲೋಕಿಸಲಿದ್ದಾರೆ.

      ಚುನಾವಣೆಗೆ ರಣತಂತ್ರ ಸಿದ್ಧಗೊಳಿಸಿರುವಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಅಭ್ಯರ್ಥಿಗಳ ಸಂಭಾವ್ಯಪಟ್ಟಿ, ಆಕಾಂಕ್ಷಿಗಳು, ರಾಜ್ಯ ಬಿಜೆಪಿ ಬಳಿಯಿರುವ ಚುನಾವಣಾ ಕಾರ್ಯತಂತ್ರದ ಮಾಹಿತಿಯನ್ನು ಷಾಗೆ ಒಪ್ಪಿಸಲಿದ್ದಾರೆ. ಇನ್ನು ಬಿಜೆಪಿ ಸಂಭಾವ್ಯ ಅಭ್ಯರ್ಥಿಗಳುಮತ್ತು ಕಾಂಗ್ರೆಸ್, ಜೆಡಿಎಸ್ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಜೊತೆ ತುಲನೆಯೂ ಸಭೆಯಲ್ಲಿ ನಡೆಯಲಿದೆ.

        ಉತ್ತರ ಭಾರತದಲ್ಲಿ ಅಯೋಧ್ಯೆ ವಿಚಾರವನ್ನು ಚುನಾವಣಾ ವಿಷಯವನ್ನಾಗಿಸಿಕೊಂಡಿರುವ ಬಿಜೆಪಿಗೆ ಶಬರಿಮಲೆ ವಿವಾದ ದಕ್ಷಿಣ ಭಾರತದಲ್ಲಿ ವಿಷಯವಸ್ತು ಆಗಿದೆ. ಹೀಗಾಗಿ ವಿವಾದಗಳ ಕಾವನ್ನು ಚುನಾವಣೆ ಹೊತ್ತಿನಲ್ಲಿ ಹೇಗೆ ಬಳಸಿಕೊಳ್ಳಬೇಕು ಹಾಗೂ ಕೇಂದ್ರದ ಮೇಲ್ವರ್ಗದ ಬಡವರಿಗೆ ಶೇ.10 ರಷ್ಟು ಮೀಸಲಾತಿ ವಿಚಾರವನ್ನು ಕರ್ನಾಟಕದಲ್ಲಿ ಹೇಗೆ ಮತಗಳನ್ನಾಗಿ ಪರಿವರ್ತಿಸಬೇಕು ಎಂಬುದೂ ಸೇರಿದಂತೆ ಹತ್ತು ಹಲವು ಮಹತ್ವದ ವಿಚಾರಗಳು ಸಭೆಯಲ್ಲಿ ಚರ್ಚೆಗೆ ಬರಲಿವೆ.
ಒಟ್ಟಾರೆ ಅಮಿತ್ ಷಾ ಬಂದು ಹೋದ ಬಳಿಕವೇ ರಾಜ್ಯ ಬಿಜೆಪಿಗೆ ಚುನಾವಣೆಯ ನಿಜವಾದ ಬಿಸಿ ತಟ್ಟಲಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here