ಬೆಂಗಳೂರು
ಖಾಸಗಿ ಕಂಪನಿಯ ಸಾಫ್ಟ್ವೇರ್ ಇಂಜಿನಿಯರೊಬ್ಬರು ದೇವರ ದರ್ಶನಕ್ಕೆ ನೆಪ ಮಾಡಿ ಕರೆದುಕೊಂಡು ಹೋಗಿದ್ದ ಪತ್ನಿಯ ಮೇಲೆ ಗಂಭೀರ ಹಲ್ಲೆ ಮಾಡಿರುವ ಘಟನೆ ನೆಲಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಹಲ್ಲೆಯಿಂದ ಗಾಯಗೊಂಡಿರುವ ಪತ್ನಿಯು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾಳೆ ,ಸಾಫ್ಟ್ವೇರ್ ಇಂಜಿನಿಯರ್ ನವೀನ್ ಪತ್ನಿಯೊಂದಿಗೆ ರಾಜಾಜಿನಗರದಲ್ಲಿ ವಾಸವಾಗಿದ್ದು ಕೆಲ ದಿನಗಳಿಂದ ಇಬ್ಬರ ನಡುವೆ ಕೌಟುಂಬಿಕ ಕಲಹ ಏರ್ಪಟ್ಟಿತ್ತು. ಆರೋಪಿ ನವೀನ್ ಪದೇ ಪದೇ ವರದಕ್ಷಿಣೆ ಕೊಡುವಂತೆ ಪತ್ನಿಯನ್ನ ಪೀಡಿಸುತ್ತಿದ್ದನು ಎಂದು ತಿಳಿದುಬಂದಿದೆ.
ಮೂರು ದಿನಗಳ ಹಿಂದೆ ನವೀನ್ ಧರ್ಮಸ್ಥಳಕ್ಕೆ ಹೋಗಿ ದೇವರ ದರ್ಶನ ಮಾಡಿಕೊಂಡು ಬರೋಣ ಎಂದು ಸುಳ್ಳು ಹೇಳಿ ಕರೆದುಕೊಂಡು ಹೋಗಿದ್ದನು. ಧರ್ಮಸ್ಥಳದಲ್ಲಿ ದೇವರ ದರ್ಶನ ಪಡೆದು ಅಲ್ಲಿಂದ ವಾಪಸ್ ಬರುತ್ತಿದ್ದಾಗ ಕುಣಿಗಲ್ ಬಳಿ ನವೀನ್ ಏಕಾಏಕಿ ರಾಡ್ ನಿಂದ ನನಗೆ ಹೊಡೆದು ಕೊಲೆ ಮಾಡಲು ಪ್ರಯತ್ನಿಸಿದ್ದಾನೆ ಎಂದು ಪತ್ನಿ ಆರೋಪಿಸಿದ್ದಾರೆ.
ಅದೃಷ್ಟವಶಾತ್ ನವೀನ್ ಕೈಯಿಂದ ತಪ್ಪಿಸಿಕೊಂಡು ಬಂದು ಸಾರ್ವಜನಿಕರ ಸಹಾಯದಿಂದ ಪತ್ನಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಳಿಕ ನಡೆದ ವಿಚಾರದ ಬಗ್ಗೆ ತಮ್ಮ ಪೋಷಕರಿಗೆ ಮಾಹಿತಿ ತಿಳಿಸಿದ್ದಾರೆ. ತಕ್ಷಣ ಪೋಷಕರು ಈ ಕುರಿತು ನೆಲಮಂಗಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನೆಲಮಂಗಲ ಪೊಲೀಸರು ಆರೋಪಿ ನವೀನ್ನನ್ನು ಬಂಧಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








