ಜು.13 ಮತ್ತು 14ಕ್ಕೆ 16ನೇ ವರ್ಷದ ಮಹಾಧಿವೇಶನ

ಹೊಸಪೇಟೆ :

        ದಿ.ನಾರ್ತ್ ಕರ್ನಾಟಕ ಟೆಂಟ್ ಅಂಡ್ ಡೆಕೋರೇಟರ್ಸ್ ವೆಲ್‍ಫೇರ್ ಅಸೋಸಿಯೇಷನ್(ರಿ) ವಿಜಯಪುರ, ಆಲ್ ಇಂಡಿಯಾ ಟೆಂಟ್ ಡೀಲರ್ಸ್ ವೆಲ್‍ಫೇರ್ ಆರ್ಗನೈಸೇಷನ್ ನವದೆಹಲಿ ಇವರ ಸಂಯುಕ್ತಾಶ್ರಯದಲ್ಲಿ ಇದೇ ಜು.13 ಮತ್ತು 14ರಂದು 2 ದಿನಗಳ ಕಾಲ ನಗರದ ಬಾಲಾಜಿ ನಗರದಲ್ಲಿ 16ನೇ ವರ್ಷದ ಮಹಾಧಿವೇಶನ ವಿಜಯನಗರ ವೈಭವ 2019 ಆಯೋಜಿಸಲಾಗಿದೆ ಎಂದು ಸಂಘಟನೆಯ ಅಧ್ಯಕ್ಷ ಕೆ.ನರಸಿಂಹಮೂರ್ತಿ ಅಪ್ಪಣ್ಣ ತಿಳಿಸಿದರು.

       ಇಲ್ಲಿನ ಬಾಲಾಜಿ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಸಂಘಟನೆಯನ್ನು ಕಳೆದ 15 ವರ್ಷಗಳಿಂದ ಉತ್ತರ ಕರ್ನಾಟಕದಲ್ಲಿ ಬಹಳ ಯಶಸ್ವಿಯಾಗಿ ನಡೆಸಿಕೊಂಡು ಬರಲಾಗುತ್ತಿದೆ. ಪ್ರತಿ ವರ್ಷ ನಮ್ಮ ಸಂಘದ ವತಿಯಿಂದ ವಾರ್ಷಿಕೋತ್ಸವದ ಮಹಾಧಿವೇಶನ ನಡೆಸಿ ವೃತ್ತಿಬಾಂಧವರಿಗಾಗಿ ಸಲಹೆ ಸೂಚನೆಗಳು, ಅವರಿಗೆ ಸಿಗುವ ಸರ್ಕಾರಿ ಸೌಲಭ್ಯಗಳು, ಜೀವವಿಮೆ ಬಗ್ಗೆ, ಯಾವ ರೀತಿ ಸಂಘಟನೆಯನ್ನು ಮುನ್ನಡೆಸಿಕೊಂಡು ಹೋಗಬೇಕು ಎಂಬುದರ ಕುರಿತು ತಿಳಿಸಿ ಕೊಡಲಾಗುತ್ತಿದೆ. ಸಮಾರಂಭದಲ್ಲಿ ಸುಮಾರು 4ರಿಂದ 5 ಸಾವಿರ ಜನ ಸೇರುವ ನಿರೀಕ್ಷೆಯಿದೆ ಎಂದರು.

       ನಮ್ಮ ಸಂಘಟನೆಯಿಂದ ಸುನಾಮಿ ಸಂತ್ರಸ್ತರಿಗೆ ನೆರವು, ರಕ್ತದಾನ, ವಿಧವೆಯರಿಗೆ, ಹಿರಿಯ ನಾಗರಿಕರಿಗೆ, ಬೆಂಕಿ ಅವಘಡಗಳು ಸಂಭವಿಸಿದಾಗ ನೆರವು ಸೇರಿದಂತೆ ಅನೇಕ ಸಾಮಾಜಿಕ ಸೇವೆಗಳನ್ನು ಮಾಡಿಕೊಂಡು ಬರಲಾಗುತ್ತಿದೆ. ಸುಮಾರು 35ರಿಂದ 40 ಸಾವಿರ ಕಾರ್ಮಿಕರಿದ್ದು ಅವರನ್ನು ಕಾರ್ಮಿಕ ಕಾಯಿದೆಯಡಿ ಸೇರಿಸುವಂತೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಕಾರ್ಮಿಕ ಕಾಯಿದೆಯಡಿ ಸರ್ಕಾರದ ಸಾಲ ಸೌಲಭ್ಯಗಳು ಲಭಿಸುತ್ತಿಲ್ಲ. ಸಣ್ಣ ಗುಡಿ ಕೈಗಾರಿಕೆ ಕಾಯಿದೆಯಡಿ ಸೇರಿಸಿದರೆ ಸಾಲ ಸೌಲಭ್ಯಗಳು ಉಂಟು. ಹೀಗಾಗಿ ನಾವು ಸಂಘಟನೆಯನ್ನು ಸಣ್ಣ ಗುಡಿ ಕೈಗಾರಿಕೆಯಡಿ ಸೇರಿಸಬೇಕು ಎಂಬ ಒತ್ತಾಯವಿದೆ ಎಂದು ತಿಳಿಸಿದರು.

       ಜು.13ರಂದು ಬೆಳಿಗ್ಗೆ 9ಕ್ಕೆ ಧ್ವಜಾರೋಹಣ ನೆರವೇರಿಸಿದ ಬಳಿಕ 10.30ಕ್ಕೆ ವಸ್ತಿ ಪ್ರದರ್ಶನ ಮಳಿಗೆಗಳ ಹಾಗು ರಕ್ತದಾನ ಶಿಬಿರಕ್ಕೆ ಸಂಘಟನೆಯ ಉಪಾಧ್ಯಕ್ಷ ಪೂರ್ಣಚಂದ್ರರಾವ್ ಉದ್ಘಾಟಿಸುವರು. ಜಿಲ್ಲಾ ಶಾಮಿಯಾನ ಸಂಘದ ಅಧ್ಯಕ್ಷ ಶಿವಪ್ರಸಾದ್ ಅಧ್ಯಕ್ಷತೆ ವಹಿಸುವರು. ಮುಖಂಡರಾದ ದೀಪಕಸಿಂಗ್, ಕೆ.ಕೊಟ್ರೇಶ್, ವೈಧ್ಯಾಧಿಕಾರಿ ಡಾ.ಎನ್.ಸಲೀಂ, ತಾಲೂಕು ವೈಧ್ಯಾಧಿಕಾರಿ ಡಾ.ಭಾಸ್ಕರ್ ಭಾಗವಹಿಸುವರು.

       ಬೆಳಿಗ್ಗೆ 11.30ಕ್ಕೆ ಶ್ರೀ ವಡಕರಾಯ ದೇವಸ್ಥಾನದಿಂದ ತಾಲೂಕು ಕ್ರೀಡಾಂಗಣದ ವರೆಗೆ ಮೆರವಣಿಗೆ ನಡೆಯಲಿದೆ. ಸಂಜೆ ನಡೆಯುವ ವೇದಿಕೆ ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ಕೊಟ್ಟೂರು ಸಂಸ್ಥಾನಮಠದ ಡಾ.ಸಂಗನಬಸವ ಸ್ವಾಮೀಜಿ, ತೆಗ್ಗಿನಮಠದ ಶ್ರೀ ವರಸೋಜ್ಯಾತ ಶಿವಾಚಾರ್ಯ ಸ್ವಾಮೀಜಿ, ಮುಸ್ಲಿಂ ಧರ್ಮಗುರು ಮುಸ್ತಾಫ್ ಅಹ್ಮದ್, ಕ್ರಿಶ್ಚಿಯನ್ ಗುರು ಪೀಟರ್ ಜೇಮ್ಸ್ ವಹಿಸಲಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಚಿವರಾದ ಪಿ.ಟಿ.ಪರಮೇಶ್ವರನಾಯ್ಕ್, ಇ.ತುಕಾರಾಂ, ಸಂಸದ ವೈ.ದೇವೇಂದ್ರಪ್ಪ, ಕರಡಿ ಸಂಗಣ್ಣ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

      ಜು.14ರಂದು ಬೆಳಿಗ್ಗೆ 10.30ಕ್ಕೆ ಸಂಘದ ಕಾರ್ಯ ಚಟುವಟಿಕೆಗಳು, ಸಂಘಟನೆಯ ವಿಚಾರ ವಿನಿಮಯ, ವ್ಯಾಪಾರ ಅಭಿವೃದ್ದಿ ಕುರಿತು ಉಪನ್ಯಾಸ ನಡೆಯಲಿದ್ದು, ಸಂಘದ ನಾನಾ ಪದಾಧಿಕಾರಿಗಳಿಗೆ ಸನ್ಮಾನ ನಡೆಯಲಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಸಂಘದ ಸಂಸ್ಥಾಪಕ ಅಧ್ಯಕ್ಷ ಶಿವಾನಂದ ಆರ್.ಮಾನಕರ್, ಗೌರವಾಧ್ಯಕ್ಷ ಎನ್.ರಾಮರಾವ್, ಪ್ರಧಾನ ಕಾರ್ಯದರ್ಶಿ ಬಿ.ಎಂ.ಸೋಮಶೇಖರ್, ಪದಾಧಿಕಾರಿಗಳಾದ ವಡಿಗೇರಿ ಜಂಬಣ್ಣ, ಈ.ಸುಬ್ಮಮಣ್ಯ ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link