ಕನ್ನಡ ರಂಗಭೂಮಿಗೆ ಪಿ ಬಿ ಧುತ್ತರಗಿ ಕೊಡುಗೆ ಅನನ್ಯ

ಬಳ್ಳಾರಿ

       ಕನ್ನಡ ರಂಗಭೂಮಿ ಶ್ರೀಮಂತಗೊಳ್ಳಲು ಹೆಸರಾಂತ ನಾಟಕಕವಿ ಪಿ. ಬಿ ಧುತ್ತರಗಿ ಅವರ ಶ್ರಮವೂ ಅನನ್ಯ ಎಂದು ಪ್ರತಿಷ್ಠಿತ ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕತ, ಹಿರಿಯ ರಂಗಕರ್ಮಿ ವರವಿ ಫಕ್ಕೀರಪ್ಪ ಅವರು ತಿಳಿಸಿದರು.

      ಅವರು ಬಾಗಲಕೋಟೆ ಪಿ ಬಿ ಧುತ್ತರಗಿ ಟ್ರಸ್ಟ್(ಸೂಳೀಬಾವಿ) ತಾಲೂಕಿನ ಚೆಳ್ಳಗುರ್ಕಿ ಶ್ರೀ ಎರ್ರಿಸ್ವಾಮಿ ಜೀವ ಸಮಾದಿ ಕ್ಷೇತ್ರದ ಸಭಾಂಗಣದಲ್ಲಿ ಆಯೋಜಿಸಿದ್ದ ಎರಡು ದಿನಗಳ ಪಿ. ಬಿ ಧುತ್ತರಗಿ ಸ್ಮರಣೋತ್ಸವ-2018ರ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಪಿ ಬಿ ಧುತ್ತರಗಿ ಅವರ ಸ್ನೇಹಪರತೆ ಕುರಿತು ವಿಶೇಷ ಉಪನ್ಯಾಸ ನೀಡಿದರು.

        ಹಲವು ಹಿರಿಯ ರಂಗಕರ್ಮಿಗಳಂತೆ ಕಂಪನಿಗಳ ಮಾಲಿಕರಾಗಿ, ನಾಟಕಕರಾಗಿ ವೃತ್ತಿರಂಗಭೂಮಿಗೆ ಧುತ್ತರಗಿ ಅವರು ಮಹತ್ತರ ಕಾಣಿಕೆ ನೀಡಿದ್ದಾರೆ ಎಂದು ಹೇಳಿದರು.

        ಸಂಪತ್ತಿಗೆ ಸವಾಲ್ ನಾಟಕ ರಚನೆಯಿಂದ ನಾಡಿನಾದ್ಯಾಂತ ಜನಪ್ರಿಯರಾದರೂ ಧುತ್ತರಗಿ ಅವರು ಎಲ್ಲರೊಂದಿಗೆ ಬೆರೆಯುತ್ತಿದ್ದರು. ಸರಳ ಸಂಪನ್ನರಾಗಿದ್ದರು. ಮನೆಗೆ ಕರೆದು ರೊಟ್ಟಿ ಖಾರಪುಡಿಕೊಟ್ಟರೂ ಅತ್ಯಂತ ಖುಷಿಯಿಂದ ಉಂಡು ಮನೆಯವರನ್ನು ಹರಸುತ್ತಿದ್ದರು ಎಂದು ತಮ್ಮ ಮತ್ತು ಧುತ್ತರಗಿ ಅವರ ಒಡನಾಟವನ್ನು ಸ್ಮರಿಸಿಕೊಂಡರು.

         ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕತ, ಸಾಂಸ್ಕತಿಕ ಸಂಘಟಕ ಸಿ. ಮಂಜುನಾಥ್ ಮಾತನಾಡಿ ಧುತ್ತರಗಿ ಅವರು ರಚಿಸಿದ ಸಂಪತ್ತಿಗೆ ಸವಾಲ್ ನಾಟಕ ಏಕಕಾಲಕ್ಕೆ ಕನ್ನಡ, ತೆಲುಗು, ತಮಿಳು ಮತ್ತು ಮಲೆಯಾಳಂ ಭಾಷೆಗಳಲ್ಲಿ ಚಲನ ಚಿತ್ರವಾಗಿ ಅದ್ಭುತ ಯಶಸ್ಸು ಗಳಿಸಿತ್ತು. ಕನ್ನಡದಲ್ಲಿ ವರ ನಟ ಡಾ. ರಾಜಕುಮಾರ್ ಮತ್ತು ಮಂಜುಳಾ ಅವರು ನಟಿಸಿದ ಸಂಪತ್ತಿಗೆ ಸವಾಲ್ ಚಿತ್ರ ದಾಖಲೆ ಪ್ರದರ್ಶನ ಕಂಡಿತ್ತು ಎಂದು ತಿಳಿಸಿದರು.

     ಸಾಮಾಜಿಕ ನಾಟಕಗಳ ಜತೆಗೆ ಐತಿಹಾಸಿಕ, ಪೌರಾಣಿಕ ರಚನೆಯಲ್ಲೂ ಸeದ್ಧ ಹಸ್ತರಾಗಿದ್ದರು. ಕೇವಲ ಆರನೇ ತರಗತಿ ಕಲಿತಿದ್ದ ಧುತ್ತರಗಿ ಅವರು ಒಟ್ಟು 64 ಜನಪ್ರಿಯ ನಾಟಕಗಳನ್ನು ರಚಿಸಿದ್ದಾರೆ. ಈ ಮೂಲಕ ನಾಟಕಕಾರರಿಗೆ ಗೌರವ ತಂದು ಕೊಟ್ಟಿದ್ದಾರೆ ಎಂದು ಹೇಳಿದರು.

        ಕಾರ್ಯಕ್ರಮದಲ್ಲಿ ಶ್ರೀ ಎರ್ರಿಸ್ವಾಮಿ ಜೀವಸಮಾದಿ ಕ್ಷೇತ್ರದ ದಾಸೋಹ ಸೇವಾ ಸಮಿತಿ ಕಾರ್ಯದರ್ಶಿ ಟಿ. ಮಲ್ಲನಗೌಡ್ರು, ಖಜಾಂಚಿ ಕೆ ಎಸ್ ಎರ್ರಣ್ಣ, ಸದಸ್ಯ ಸಿ.ಕೆ ದೊಡ್ಡ ಬಸವನಗೌಡ, ಗ್ರಾಮದ ಹಿರಿಯ ರಂಗ ಕಲಾವಿದ ಜೀರ್ ಎರ್ರೆಪ್ಪ, ಕಲಾವಿದ ಯಂಕಣ್ಣ ಸೂಳೀಬಾವಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

         ಸನ್ಮಾನ: ಇದೇ ಸಂದರ್ಬದಲ್ಲಿ ರಂಗಭೂಮಿಗೆ ಗಣನೀಯ ಸೇವೆ ಸಲ್ಲಿಸುತ್ತಿರುವ ಹಿರಿಯ ರಂಗ ಕಲಾವಿದ ರಮೇಶಗೌಡ ಪಾಟೀಲ್, ರಂಗ ಕರ್ಮಿ ನಾಡಂಗ ಬಸವರಾಜ್, ರಂಗ ಕಲಾವಿದ, ಗಾಯಕ ಬೆಳಗಲ್ಲು ಪ್ರಕಾಶ್, ಹಿರಿಯ ಕಲಾವಿದೆ ಲತಾಶ್ರೀ ಮತ್ತು ವೆಂಕಣ್ಣ ಸೂಳೀಬಾವಿ ಅವರನ್ನು ಟ್ರಸ್ಟ್‍ವತಿತಿಂದ ಸನ್ಮಾನಿಸಿ ಗೌರವಿಸಲಾಯಿತು.

         ನಾಟಕ ಪ್ರದರ್ಶನ: ಶ್ರೀ ಮಹಾದೇವ ತಾತ ಕಲಾ ಸಂಘ, ಹಂದ್ಯಾಳ್ ಇವರಿಂದ ಪಿ ಬಿ ಧುತ್ತರಗಿ ವಿರಚಿತ ಹರ ಗಿರಿಜೆ ನಾಟಕ (ನಿರ್ದೇಶನ: ಉಮಾರಾಣಿ ಬಾರಿಗಿಡದ) ರಂಗಪ್ರಿಯರನ್ನು ಮುದಗೊಳಿಸಿತು. ನಾಟಕಕ್ಕೆ ಕ್ಯಾಷಿಯೋದಲ್ಲಿ ತಿಪ್ಪೇಸ್ವಾಮಿ ಸೂಲದಹಳ್ಳಿ ಮತ್ತು ತಬಲದಲ್ಲಿ ಸಂಡೂರು ಉಮೇಶ್ ಸಂಗೀತ ಒದಗಿಸಿದರು.

        ಧುತ್ತರಗಿ ವಿರಚಿತ, ಆದೋನಿ ವಿಜಯ ಕುಮಾರ ಮತ್ತು ತಂಡದವರು ಪ್ರಸ್ತುತ ಪಡಿಸಿದ ಬಿಜಾಪುರ ವೈಭವ ನೃತ್ಯರೂಪಕ ಸಭಿಕರ ಮನರಂಜಿಸಿತು.

        ರಂಗಗೀತೆ: ಲಕ್ಷ್ಮೀಬಾಯಿ ಮತ್ತು ತಂಡದ ಪ್ರಕಾಶ್ ಬೆಳಗಲ್ಲು, ಲತಾಶ್ರೀ ಅವರು ರಂಗಗೀತೆಗಳನ್ನು ಹಾಡಿದರು.ರಂಗ ಕರ್ಮಿ ಪುರುಷೋತ್ತಮ ಹಂದ್ಯಾಳ್ ಸ್ವಾಗತಿಸಿ ನಿರೂಪಿಸಿದರು. ಪಿ ಬಿ ಧುತ್ತರಗಿ ಟ್ರಸ್ಟ್‍ನ ಸಂಚಾಲಕಿ ಉಮಾರಾಣಿ ಬಾರಿಗಿಡದ ಪ್ರಾಸ್ತಾವಿಕವಾಗಿ ಮಾತನಾಡಿದರು. ಯುವರಂಗ ಕರ್ಮಿ ನೇತಿ ರಘುರಾಮ್ ವಂದಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap