ಹಿರೇಕೆರೂರು ಶೇ.72.42 ಹಾಗೂ ರಾಣೇಬೆನ್ನೂರು ಶೇ.67.90 ರಷ್ಟು ಮತದಾನ
ಹಾವೇರಿ

ಜಿಲ್ಲೆಯ ಹಿರೇಕೆರೂರು ಹಾಗೂ ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಶಾಂತಿಯುತವಾಗಿ ನಡೆದಿದೆ. ಗುರುವಾರ ಬೆಳಿಗ್ಗೆ 6 ರಿಂದ ಎರಡು ಕ್ಷೇತ್ರಗಳ ಎಲ್ಲ ಮತಗಟ್ಟೆಗಳಲ್ಲಿ ಅಣುಕು ಮತದಾನ ನಡೆಸಲಾಯಿತು. ಬೆಳಿಗ್ಗೆ 7 ರಿಂದ ಮತದಾನ ಆರಂಭಗೊಂಡಿತು. ಯಾವುದೇ ತಾಂತ್ರಿಕ ದೋಷವಿಲ್ಲದೆ ಶಾಂತಿಯುತವಾಗಿ ಮತದಾನ ಮುಕ್ತಾಗೊಂಡಿದೆ.
ಮುಂಜಾನೆಯಿಂದಲೇ ಹಿರೇಕೆರೂರು ಭಾಗದ ಯತ್ತಿನಹಳ್ಳಿ, ಹಂಸಭಾವಿ, ಅಬಲೂರು, ರಟ್ಟೀಹಳ್ಳಿ, ಹಿರೇಕೆರೂರಲ್ಲಿ ಮಂದಗತಿಯಲ್ಲಿ ಮತದಾನ ನಡೆಯಿತು. ಯಾವುದೇ ಅಹಿತಕರ ಘಟನೆಗಳು ನಡೆದಿರುವುದಿಲ್ಲ. ಮತದಾನ ಆರಂಭವಾದ ಎರಡು ತಾಸಿನ ನಂತರ ಶೇ.5.94, ನಾಲ್ಕು ತಾಸಿನ ನಂತರ 11 ಗಂಟೆಗೆ ರಾಣೇಬೆನ್ನೂರು ಕ್ಷೇತ್ರದಲ್ಲಿ ಶೇ.19.08, ಹಿರೇಕೆರೂರು ಕ್ಷೇತ್ರದಲ್ಲಿ ಶೇ.20.03, ಮಧ್ಯಾಹ್ನ 1 ಗಂಟೆಗೆ ಹಿರೇಕೆರೂರು ಕ್ಷೇತ್ರದಲ್ಲಿ ಶೇ.38.63, ರಾಣೇಬೆನ್ನೂರ ಕ್ಷೇತ್ರದಲ್ಲಿ ಶೇ.36.09, ಮಧ್ಯಾಹ್ನ 3 ಗಂಟೆ ವರದಿಯಂತೆ ಹಿರೇಕೆರೂರಿನಲ್ಲಿ ಶೇ. 56.60, ಶೇ.ರಾಣೇಬೆನ್ನೂರು 53.50 ಹಾಗೂ ಸಂಜೆ 5 ಗಂಟೆ ವರದಿಯಂತೆ ಹಿರೇಕೆರೂರು ಶೇ.72.42 ಹಾಗೂ ರಾಣೇಬೆನ್ನೂರು ಶೇ.67.90 ರಷ್ಟು ಮತದಾನವಾಗಿದೆ.
ಮತದಾನ ಆರಂಭವಾಗುತ್ತಿದ್ದಂತೆ ವಿಶೇಷ ಚೇತನ ಮತದಾರರು, ಹಿರಿಯ ನಾಗರಿಕರು ಮತದಾನದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಜಿಲ್ಲಾ ಸ್ವೀಪ್ ಸಮಿತಿಯಿಂದ ಹಿರಿಯ ನಾಗರಿಕರು ಹಾಗೂ ವಿಕಲ ಚೇತನ ಮತದಾರರಿಗೆ ತ್ರಿಚಕ್ರ ವಾಹನ ವ್ಯವಸ್ಥೆ ಹಾಗೂ ಸ್ವಯಂ ಸೇವಕರನ್ನು ನಿಯೋಜಿಸಿದ ಪರಿಣಾಮ ನಿಯಮಿತವಾಗಿ ಬೆಳಿಗ್ಗೆಯಿಂದಲೇ ಇತರರಿಗಿಂತ ಮತದಾನ ಮಾಡುವಲ್ಲಿ ಹಿರಿಯ ಚೇತನಗಳು, ವಿಶೇಷ ಚೇತನರು ಕಂಡುಬಂದರು.
ಹಂಸಭಾವಿ ಮತಗಟ್ಟೆಯಲ್ಲಿ ಬೆಳಿಗ್ಗೆ 11ರ ವೇಳೆಯಲ್ಲಿ ಮತದಾರರ ನೀರಸ ಪ್ರತಿಕ್ರಿಯೆ ಕಂಡುಬಂದರೆ ಹಿರೇಕೆರೂರು ಪಟ್ಟಣದ ತಾಲೂಕು ಪಂಚಾಯತಿ ಸಭಾಂಗಣದಲ್ಲಿನ ಮಾದರಿ ಮತಗಟ್ಟೆ ಹಾಗೂ ಹಿರೇಕೆರೂರು ನಗರದ ಪಟ್ಟಣ ಪಂಚಾಯತಿಯಲ್ಲಿ ಸ್ಥಾಪಿಸಲಾದ ಸಖಿ ಮತಗಟ್ಟೆಯಲ್ಲಿ ಸರತಿ ಸಾಲಿನಲ್ಲಿ ನಿಂತು ತುರಿಸಿನ ಮತದಾನ ಮಾಡುತ್ತಿರುವುದು ಕಂಡುಬಂದಿತು.
ಹಿರೇಕೆರೂರು ಮತಕ್ಷೇತ್ರದಲ್ಲಿ 229 ಮತಗಟ್ಟೆ ಹಾಗೂ ರಾಣೇಬೆನ್ನೂರು ಕ್ಷೇತ್ರದಲ್ಲಿ 266 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ರಾಣೇಬೆನ್ನೂರಿನಲ್ಲಿ 54 ಹಾಗೂ ಹಿರೇಕೆರೂರಿನಲ್ಲಿ 46 ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದ್ದು, ಗುಜರಾತ್ ರಾಜ್ಯದ ಸಶಸ್ತ್ರ ಮೀಸಲು ಪಡೆ ಸಿಬ್ಬಂದಿಗಳು ಸೇರಿದಂತೆ ರಾಜ್ಯದ ಪೊಲೀಸ್ ಹಾಗೂ ಹೋಂ ಗಾರ್ಡ್‍ಗಳನ್ನು ನೇಮಕ ಮಾಡಿ ಸೂಕ್ತ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು.
ಗಸ್ತು ಪಡೆಗಳು ತಾಸಿಗೊಮ್ಮೆ ಪ್ರತಿ ಮಜತಗಟ್ಟೆಗಳಿಗೆ ಭೇಟಿ ನೀಡಿ ಪರಿಸ್ಥಿತಿಯ ಮೇಲೆ ನಿಗಾವಹಿಸಿದ್ದು ಕಂಡುಬಂದಿತು.
ರಾಣೇಬೆನ್ನೂರ ತಾಲೂಕಿನ ಪತ್ತೆಪೂರ ಗ್ರಾಮದ 258ನೇ ಮತಗಟ್ಟೆಯಲ್ಲಿ ಶತಾಯುಷಿ ನಾಗಮ್ಮ ಚಿಟ್ಟೆಣ್ಣನವರ ಹಾಗೂ ಹಿರೇಕೆರೂರು ಮತಗಟ್ಟೆ ಸಂಖ್ಯೆ 40ರಲ್ಲಿ ಶತಾಯುಷಿ ಲೋಕಪ್ಪ ಮಲ್ಲನಗೌಡ ಮತದಾನ ಮಾಡಿ ಗಮನ ಸೆಳೆದರು. ಕರೂರ ಗ್ರಾಮ ಪಂಚಾಯತಿಯ 164ನೇ ಮತಗಟ್ಟೆಯಲ್ಲಿ 93ನೇ ವಯೋಮಾನದ ಪಾರ್ವತೆವ್ವ ಶೆಟ್ಟರ, ಹಿರೇಕೆರೂರು 82ನೇ ಮತಗಟ್ಟೆಯಲ್ಲಿ 82 ವರ್ಷದ ನಾಗವ್ವ ಕಿತ್ತೂರ ಇತರರು ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡಿದ್ದು ಎಲ್ಲರ ಗಮನ ಸೆಳೆಯಿತು.
ಎಲ್ಲ ಮತಗಟ್ಟೆಗಳಲ್ಲಿ ತ್ರಿಚಕ್ರವಾಹನ, ಕುಡಿಯುವ ನೀರಿನ ವ್ಯವಸ್ಥೆ, ರ್ಯಾಂಪ್ ವ್ಯವಸ್ಥೆ, ವೋಟರ್ ಸೌಲಭ್ಯ ಕೇಂದ್ರಗಳನ್ನು ತೆರೆಯಲಾಗಿತ್ತು. ಹಿರಿಯ ನಾಗರಿಕರಿಗೆ ಹಾಗೂ ವಿಕಲಚೇತನರಿಗೆ ಸ್ವಯಂ ಸೇವಕರು ನೆರವು ನೀಡುತ್ತಿರುವುದು ಎಲ್ಲರ ಗಮನ ಸೆಳೆಯಿತು.
ಹಿರೇಕೆರೂರು ಪಟ್ಟಣದ ಮತಗಟ್ಟೆ ಸಂಖ್ಯೆ 144 (ಪಟ್ಟಣ ಪಂಚಾಯತಿ ಕಚೇರಿ ಹಾಲ್) ಹಾಗೂ ತಾಲೂಕಿನ ದೂದಿಹಳ್ಳಿ ಗ್ರಾಮದ 156ನೇ ಮತಗಟ್ಟೆ (ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ) ಹಾಗೂ ರಾಣೇಬೆನ್ನೂರು ನಗರದ ಮತಗಟ್ಟೆ ಸಂಖ್ಯೆ 119(ಲೋಕೋಪಯೋಗಿ ಇಲಾಖೆ ಅಭಿಯಂತರರ ಕಚೇರಿ) ಹಾಗೂ ಕಮದೋಡ ಮತಗಟ್ಟೆ ಸಂಖ್ಯೆ 177(ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ)ಯನ್ನು ಸಖಿ ಮತಗಟ್ಟೆಯನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಪಿಂಕ್ ಬಣ್ಣದ ಸಮವಸ್ತ್ರದಿಂದ ಮಹಿಳೆಯರು ಶಿಸ್ತುಬದ್ಧವಾಗಿ ಕಾರ್ಯನಿರ್ವಹಿಸುತ್ತಿದ್ದರು. ಪೊಲೀಸ್ ಸಿಬ್ಬಂದಿಗಳು ಸೇರಿದಂತೆ ಎಲ್ಲರೂ ಮಹಿಳೆಯರೇ ಕಾರ್ಯನಿರ್ವಹಿಸುತ್ತಿದ್ದು ಗಮನ ಸೆಳೆಯಿತು.
ಹಿರೇಕೆರೂರು ಪಟ್ಟಣದ 151ನೇ ಮತಗಟ್ಟೆ(ತಾಲೂಕು ಪಂಚಾಯತಿ ಸಾಮಥ್ರ್ಯ ಸೌಧ) ಹಾಗೂ ರಾಣೇಬೆನ್ನೂರ ನಗರದ ಮತಗಟ್ಟೆ ಸಂಖ್ಯೆ 63(ನಗರಸಭೆ ಕಟ್ಟಡ)ಯನ್ನು ಮಾದರಿ ಮತಗಟ್ಟೆಗಳಲ್ಲಿ ಸೆಲ್ಫಿಕಾರ್ನರ್, ಸ್ವಾಗತ ಕಮಾನುಗಳ ನಿರ್ಮಾಣ, ಬಣ್ಣ ಬಲೂನ್‍ಗಳಿಂದ ಚಂದವಾಗಿ ಅಲಂಕರಿಸಲಾಗಿತ್ತು.
ಹಿರೇಕೆರೂರು ತಾಲೂಕಿನ ಶ್ರೀರಾಮನಕೊಪ್ಪ ಮತಗಟ್ಟೆ ಸಂಖ್ಯೆ 40(ಸರಕಾರಿ ಹಿರಿಯ ಪ್ರಾಥಮಿಕ ಶಾಲೆ) ಹಾಗೂ ರಾಣೇಬೆನ್ನೂರ ತಾಲೂಕಿನ ಚಳಗೇರಿ ಗ್ರಾಮದ ಮತಗಟ್ಟೆ ಸಂಖ್ಯೆ 172(ಗ್ರಾಮ ಪಂಚಾಯತಿ ಕಚೇರಿ) ವಿಶೇಷ ಚೇತನರ ಮತಗಟ್ಟೆಗಳನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಆಸನ ವ್ಯವಸ್ಥೆ, ಕುಡಿಯುವ ನೀರು, ಶೌಚಾಲಯ, ಮತದಾರರ ಸೇವಾ ಕೇಂದ್ರದ ಸೌಲಭ್ಯ, ನೆಲಹಾಸು ಮತಗಟ್ಟೆಗಳಿಗೆ ವಿಶೇಷ ಮೆರಗು ನೀಡಿದವು. ಮತದಾರರ ಉತ್ಸಾಹ ಇಮ್ಮಡಿಯಾಗಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
