ಹಿರಿಯೂರು :
ಹಿರಿಯೂರು ನಗರಸಭೆ ಬುಧವಾರ ನಡೆದ ಚುನಾವಣೆಯಲ್ಲಿ ಶೇ.70.93 ಮತದಾನವಾಗಿದ್ದು, ಬಹುತೇಕ ಶಾಂತಿಯುತವಾಗಿ ನಡೆಯಿತು.
ಆರಂಭದಲ್ಲಿ ಬೆಳಿಗ್ಗೆ ಮಂದಗತಿಯಿಂದಲೇ ಪ್ರಾರಂಭವಾದ ಮತದಾನ, ನಂತರ ಮತದಾರರು ಉತ್ಸಾಹದಿಂದ ಮತಗಟ್ಟೆಗಳಿಗೆ ಆಗಮಿಸಿ ಸರದಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದರು.
ನಗರಸಭೆ 31 ವಾರ್ಡ್‍ಗಳಿಗೆ ಚುನಾವಣೆ ನಡೆಸಲು 55 ಮತಗಟ್ಟೆಗಳನ್ನು ಸ್ಥಾಪಿಸಿದ್ದು, ಒಟ್ಟು 112 ಅಭ್ಯರ್ಥಿಗಳು ಕಣದಲ್ಲಿದ್ದರು. ಬೆಳಗ್ಗೆ 9 ಗಂಟೆಯ ವೇಳೆಗೆ ಶೇ. 8.48, ನಂತರ 11 ಗಂಟೆಗೆ ಶೇ.21.28, ಮಧ್ಯಾಹ್ನ 1 ಗಂಟೆಯ ವೇಳೆಗೆ ಶೇ.38.50 ನಂತರ ಮಧ್ಯಾಹ್ನ 3 ಗಂಟೆಗೆ ಶೇ.53.78, ಸಂಜೆ 5 ಗಂಟೆಗೆ ಅಂತಿಮವಾಗಿ ಕೊನೆಯಲ್ಲಿ ಶೇ.70.93 ಮತದಾನವಾಯಿತು.
ತಾಲ್ಲೂಕಿನ ಯರಬಳ್ಳಿ ಗ್ರಾಪಂನ ಕಂದಿಕೆರೆ, ಹೊಸಯಳನಾಡು ಗ್ರಾಪಂನ ಆಲೂರು ಹಾಗೂ ಜವನಗೊಂಡನಹಳ್ಳಿ ಗ್ರಾಪಂನ ಕಾಟನಾಯಕನಹಳ್ಳಿ ಕ್ಷೇತ್ರದ ಸದಸ್ಯ ಸ್ಥಾನಕ್ಕೆ ಸಹ ಚುನಾವಣೆ ನಡೆಯಿತು.
ನಗರದಲ್ಲಿ ಮೋಡ ಕವಿದ ವಾತಾವರಣವಿದ್ದುದರಿಂದ ಮತದಾರರು ಉಲ್ಲಾಸದಿಂದ ಮತ ಚಲಾಯಿಸುತ್ತಿದ್ದ ದೃಶ್ಯ ಕಂಡು ಬಂತು. ನಗರದ 31 ವಾರ್ಡ್‍ಗಳ ಪೈಕಿ 1 ಅವಿರೋಧ ಆಯ್ಕೆಯಾಗಿದ್ದು, ಉಳಿದ 30 ವಾರ್ಡ್‍ಗಳಿಗೆ 53 ಮತಗಟ್ಟೆಗಳಲ್ಲಿ ಬೆಳಗ್ಗೆ 7 ರಿಂದ ಸಂಜೆ 5ರವರೆಗೆ ಮತದಾನ ನಡೆಯಿತು. ಮೈತ್ರಿ ಮತ್ತು ಬಿಜೆಪಿ ನಡುವಿನ ತೀವ್ರ ಪೈಪೋಟಿಯಿಂದ ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು ತೀವ್ರ ಕಸರತ್ತು ನಡೆಸುತ್ತಿದ್ದ ದೃಶ್ಯ ಸರ್ವೇಸಾಮಾನ್ಯವಾಗಿತ್ತು.
ತಾಲ್ಲೂಕು ಕಛೇರಿಯಲ್ಲಿ ಇದೇ ಮೇ.31 ರಂದು ಈ ಮತಗಳ ಎಣಿಕೆ ನಡೆಯಲಿದ್ದು, 115 ಅಭ್ಯರ್ಥಿಗಳ ಫಲಿತಾಂಶ ಪ್ರಕಟಗೊಳ್ಳಲಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ, ಶಾಂತಿಯುತವಾಗಿ ಮತದಾನ ನಡೆಯಲು ಸ್ಥಳೀಯ ಪೋಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕೈಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
