ಹುಳಿಯಾರಿನಲ್ಲಿ ಬೀದಿ ನಾಯಿ ಉಪಟಳಕ್ಕೆ ಜನ ತತ್ತರ

ಹುಳಿಯಾರು

     ಬೀದಿ ನಾಯಿಗಳ ಹಾವಳಿಗೆ ಹುಳಿಯಾರು ನಿವಾಸಿಗಳು ಬೆಚ್ಚಿ ಬಿದ್ದಿದ್ದಾರೆ. ರಸ್ತೆ, ಅಂಗಡಿ, ಮನೆ, ಬಸ್ ನಿಲ್ದಾಣ ಹೀಗೆ ಎಲ್ಲಿ ಹೋದರೂ ನಾಯಿಗಳದ್ದೇ ಕಿರಿಕಿರಿ, ಓಡಾಡುವುದಕ್ಕೆ ಜನ ಭಯಪಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.ರಸ್ತೆಯಲ್ಲಿ ಓಡಾಡುವ ನಾಗರಿಕರು ಹಾಗೂ ವಾಹನ ಸವಾರರನ್ನು ನಾಯಿಗಳು ಹಿಂಡು ಹಿಂಡಾಗಿ ಬೆನ್ನತ್ತುತ್ತವೆ. ಮೇಲೆ ಎಗರುವಂತೆ ಬಂದು ಭಯಗೊಳಿಸುತ್ತಿವೆ. ನಾಯಿಗಳನ್ನು ಕಂಡು ಓಡಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಓಡಿದವರು ಎಡವಿ ಬಿದ್ದು ಗಾಯ ಮಾಡಿಕೊಳ್ಳಬೇಕು ಇಲ್ಲ ನಾಯಿಗಳಿಂದ ಕಚ್ಚಿಸಿಕೊಳ್ಳಬೇಕು ಎನ್ನುವಂತ ಸ್ಥಿತಿ ಇದೆ.

      ರಾತ್ರಿ ಹೊತ್ತಿನಲ್ಲಿ ಅವುಗಳ ಕೂಗಾಟದಿಂದ ಇಲ್ಲಿನ ಮನೆಗಳವರಿಗೆ ಜಾಗರಣೆ ತಪ್ಪಿದ್ದಲ್ಲ. ಮನೆ ಬಾಗಿಲ ಬಳಿಯೇ ಬಂದು ಕಿತ್ತಾಡುತ್ತವೆ, ಕಚ್ಚಾಡುತ್ತವೆ. ಆಗ ಮನೆಯ ಗಂಡಸರು ನಿದ್ದೆಯಿಂದೆದ್ದು ಬಂದು ನಾಯಿಗಳನ್ನು ಓಡಿಸಬೇಕು. ಒಂದು ಮನೆಯವರು ಓಡಿಸಿದ ತಕ್ಷಣ ಮತ್ತೊಂದು ಮನೆಯ ಮುಂದೆ ಕಚ್ಚಾಡುತ್ತವೆ. ಹೀಗೆ ಇವುಗಳ ಉಪಟಳಕ್ಕೆ ಜನ ಬೆಚ್ಚಿಬಿದ್ದಿದ್ದಾರೆ.

      ಮಾಂಸದಂಗಡಿಗಳು, ಮಾಂಸದ ಹೋಟೆಲ್‍ಗಳು, ತಳ್ಳುವ ಗಾಡಿಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೀದಿ ನಾಯಿಗಳ ಕಾರುಬಾರು ಜೋರು. ಈ ಅಂಗಡಿಗಳ ತ್ಯಾಜ್ಯ ಎಸೆಯುವ ಕಡೆಗಳಲ್ಲಿ ಮುತ್ತಿಕೊಂಡಿರುತ್ತವೆ. ತಾಜ್ಯ ರಾಶಿ ಎಳೆದಾಡಿ ಅಳಿದುಳಿದ ಮೂಳೆ, ಮಾಂಸಕ್ಕಾಗಿ ಪೈಪೋಟಿಗೆ ಬಿದ್ದು ಕಚ್ಚಾಡುತ್ತವೆ.

      ಇನ್ನು ವಾಯುವಿಹಾರಿಗಳಿಗೂ ನಾಯಿಗಳು ಕಾಟ ತಪ್ಪಿಲ್ಲ. ಕುರುಕಲು ತಿನಿಸು ಹಿಡಿದು ಸಾಗುವ ಮಕ್ಕಳ ಮೇಲೆ ಎರಗಿದ ನಿದರ್ಶನ ಅನೇಕ. ಮನೆಗಳ ಬಳಿ, ರಸ್ತೆಗಳಲ್ಲಿ, ಸಂದಿಗೊಂದಿಗಳಲ್ಲಿ ಪವಡಿಸುತ್ತವೆ. ಒಂದೇ ಸಮನೆ ಅರಚುವುದು, ಬೊಗಳುವುದು ಮಾಡುತ್ತವೆ. ಇದು ಜನರಿಗೆ ನೆಮ್ಮದಿಗೆ ಭಂಗ ತರುತ್ತಿದೆ.

      ಮನೆ ಆಸುಪಾಸಿನಲ್ಲಿ ನಾಯಿಗಳ ಚಲನವಲನಗಳ ಮೇಲೆ ಪೋಷಕರು ಸದಾ ಕಣ್ಣಿಟ್ಟಿರಲೇಬೇಕು. ಶಾಲಾ ವಾಹನ ಬರುವ ಸ್ಥಳದವರೆಗೂ ಪೋಷಕರೂ ಮಕ್ಕಳನ್ನು ಜೊತೆಯಲ್ಲಿ ಹೋಗಿ ಹತ್ತಿಸಬೇಕಾಗಿದೆ. ರಸ್ತೆಗಳಲ್ಲಿ ನಾಯಿಗಳು ಬೀಡುಬಿಟ್ಟಿದ್ದು ವಾಹನಗಳಿಗೆ ಅಡ್ಡಬಂದು ಸಂಚಾರಕ್ಕೆ ಅಡ್ಡಿ ಮಾಡುವ ಜೊತೆಗೆ ಅಪಘಾತಕ್ಕೂ ಕಾರಣವಾಗುತ್ತಿವೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap