ಶಿರಾ:
ತಾಲ್ಲೂಕಿನ ಯಲಿಯೂರು ಗ್ರಾಮ ಪಂಚಾಯ್ತಿಯ ಎಮ್ಮೇರಹಳ್ಳಿ ತಾಂಡಾ ಗ್ರಾಮದಲ್ಲಿ ಕಳೆದ ಹಲವಾರು ತಿಂಗಳುಗಳಿಂದ ಕುಡಿಯುವ ನೀರಿಲ್ಲದೆ ಗ್ರಾಮಸ್ಥರು ತೀವ್ರತರವಾದ ಸಮಸ್ಯೆ ಅನುಭವಿಸುತ್ತಿದ್ದು ಈ ಕೂಡಲೇ ಕುಡಿಯುವ ನಿರಿನ ಪೂರೈಕೆ ಮಾಡುವಂತೆ ಒತ್ತಾಯಿಸಿ ಕರ್ನಾಟಕ ಬಂಜಾರ ರಕ್ಷಣಾ ವೇದಿಕೆಯ ವತಿಯಿಂದ ಎಮ್ಮೇರಹಳ್ಳಿ ತಾಂಡಾ ಗ್ರಾಮಸ್ಥರು ಗ್ರಾಮ ಪಂಚಾಯ್ತಿಗೆ ಬೀಗ ಜಡಿದು ಶುಕ್ರವಾರ ಪ್ರತಿಭಟನೆ ನಡೆಸಿದರು.
ಎಮ್ಮರಹಳ್ಳಿ ಗ್ರಾಮದಲ್ಲಿ ಕಳೆದ ಕೆಲವು ತಿಂಗಳಿಂದ ಹಾಲಿ ಇದ್ದ ಕೊಳವೆ ಬಾವಿ ಕೂಡಾ ಬತ್ತಿ ಹೋಗಿದ್ದು ಕುಡಿಯಲು ನಿರು ಇಲ್ಲದಂತಾಗಿದೆ. ಈ ಬಗ್ಗೆ ಸಂಬಂಧಪಟ್ಟ ಗ್ರಾಮ ಪಂಚಾಯ್ತಿಗೆ ಸಾಕಷ್ಟು ದೂರುಗಳನ್ನು ನೀಡಿದ್ದರೂ ಯಾವುದೇ ಪ್ರಯೋಜನವಾಗಲಿಲ್ಲ. ಗ್ರಾಮಸ್ಥರ ಮನವಿಗೂ ಜಗ್ಗದ ಗ್ರಾಮ ಪಂಚಾಯ್ತಿಯ ಮುಂದೆ ಶುಕ್ರವಾರ ಬೆಳಿಗ್ಗೆ ಜಮಾಯಿಸಿದ ಬಂಜಾರ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಪಂಚಾಯ್ತಿಯ ಒಳಗಿದ್ದ ಸಿಬ್ಬಂಧಿ ಹೊರ ಕರೆದು ಪಂಚಾಯ್ತಿಗೆ ಬೀಗ ಜಡಿದರು.
ಕರ್ನಾಟಕ ಪ್ರದೇಶ ಬಂಜಾರ ರಕ್ಷಣಾ ವೇದಿಕೆಯ ಅಧ್ಯಕ್ಷ ಎಲ್.ಟಿ.ಶ್ರೀವಾಸನಾಯ್ಕ ಮಾತನಾಡಿ ಗ್ರಾಮದಲ್ಲಿ ಕುಡಿಯುವ ನಿರಿನ ಕೊಳವೆ ಬಾವಿಯಲ್ಲಿನ ನೀರು ಬತ್ತಿ ಹೋಗಿ ಅನೇಕ ತಿಂಗಳುಗಳೇ ಆದರೂ ಈ ಬಗ್ಗೆ ತಾಲ್ಲೂಕು ಪಂಚಾಯ್ತಿಯ ಅಧಿಕಾರಿಗಳಾಗಲಿ, ಗ್ರಾ.ಪಂ. ಅಧಿಕಾರಿಗಳಾಗಲಿ ಗಮನಹರಿಸಿಲ್ಲ. ಈ ಕೂಡಲೇ ಕುಡಿಯುವ ನೀರಿನ ವ್ಯವಸ್ಥೆ ಮಾಡದಿದ್ದಲ್ಲಿ ತಾ.ಪಂ. ಕಛೇರಿಗೆ ಬೀಗ ಜಡಿದು ಪ್ರತಿಭಟಿಸಲಾಗುವುದು ಎಂದರು.
ಎಮ್ಮೇರಹಳ್ಳಿ ಗ್ರಾಮದ ಸ.ನಂ.22ರಲ್ಲಿನ ಗೋಮಾಳದ ಜಮೀನಿನಲ್ಲಿ ಲಂಚ ಪಡೆದು ಇಲ್ಲಿನ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಸುಮಾರು 10-15 ಮಂದಿಗೆ ಮನೆಗಳ ಗ್ರ್ಯಾಂಟ್ ಮಾಡಿಕೊಟ್ಟಿದ್ದು ಲಂಚ ಕೊಡದ ಅರ್ಹರಿಗೆ ಜಿ.ಪಿ.ಎಸ್. ಮಾಡದೆ ಸತಾಯಿಸುತ್ತಿದ್ದಾರೆಂದು ಶ್ರೀನಿವಾಸನಾಯ್ಕ ದೂರಿದರು. ಗ್ರಾ.ಪಂ. ಸದಸ್ಯ ಆನಂದ್, ಮೇಘ್ಯಾನಾಯ್ಕ ಸೇರಿದಂತೆ ಎಮ್ಮೇರಹಳ್ಳಿ ತಾಂಡಾ ಗ್ರಾಮಸ್ಥರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
