ಲಾಕ್‍ಡೌನ್ ಮಧ್ಯೆಯೂ ನಿಲ್ಲದ ಜನರ ಓಡಾಟ

ದಾವಣಗೆರೆ:

     ಕೊರೊನಾ ಸೋಂಕು ನಿಯಂತ್ರಣ ಕ್ರಮವಾಗಿ 2ನೇ ಹಂತದಲ್ಲಿ ಲಾಕ್‍ಡೌನ್ ಘೋಷಿಸಿದ್ದರೂ, ನಿಷೇಧಾಜ್ಞೆ ಜಾರಿ ಮಾಡಿದ್ದರೂ ಸಹ ಭಾನುವಾರ ಜಿಲ್ಲಾ ಕೇಂದ್ರದಲ್ಲಿ ಜನರ ಓಡಾಟ ಎಂದಿನಂತೆ ಸಾಮಾನ್ಯವಾಗಿತ್ತು.ಇತರೆ ದಿನಗಳಲ್ಲಿ ಅಷ್ಟಾಗಿ ವ್ಯಾಪಾರವಿಲ್ಲದಿದ್ದ ಮಾಂಸದಂಗಡಿ, ಮೀನಿನ ಮಾರುಕಟ್ಟೆಯಲ್ಲಿ ಭಾನುವಾರ ಕಾರಣ ವಹಿವಾಟು ಜೋರಾಗಿತ್ತು. ಹೀಗಾಗಿ ಈ ಅಂಗಡಿಗಳಲ್ಲಿ ದೈಹಿಕ ಅಂತರ ಎಂದರೆ ಏನೆಂಬುದೇ ಗೊತ್ತಿಲ್ಲದಂತೆ ಮಾಂಸ, ಕೋಳಿ, ಮೀನು ಖರೀದಿಗೆ ಮುಗಿಬಿದ್ದಿದ್ದರು.

    ಮನೆ ಬಳಿ ಬರುವ ತಳ್ಳುವ ಗಾಡಿಗಳಿಗೆ ಕಾಯುವ ತಾಳ್ಮೆ ಇಲ್ಲದ ಜನತೆ ತರಕಾರಿ, ಸೊಪ್ಪು, ಹಣ್ಣು ಖರೀದಿಗಾಗಿ ಮಾರುಕಟ್ಟೆ ಪ್ರದೇಶದಲ್ಲಿ ಓಡಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ದಿನಸಿ ಅಂಗಡಿಗಳಲ್ಲೂ ವ್ಯಾಪಾರ ಭರದಿಂದ ಸಾಗಿತ್ತು. ಇದರಿಂದಾಗಿ ಮಧ್ಯಾಹ್ನದ ವರೆಗೂ ಜಿಲ್ಲಾಕೇಂದ್ರದ ಬೀದಿಗಳಲ್ಲಿ ಜನ ಸಂಚಾರ ಎಂದಿನಂತಿತ್ತು.

   ಕೆ.ಆರ್.ಮಾರುಕಟ್ಟೆ, ಗಡಿಯಾರ ಕಂಬ, ಹಗೇದಿಬ್ಬ ವೃತ್ತ, ಬೇತೂರು ರಸ್ತೆ, ಹಳೇ ಗುಜರಿ ಲೈನ್ ಸೇರಿದಂತೆ ಹಳೇ ದಾವಣಗೆರೆಯಲ್ಲಿ ಜನದಟ್ಟಣೆ ತುಸು ಹೆಚ್ಚಾಗಿಯೇ ಕಂಡುಬಂತು. ಮಾರುಕಟ್ಟೆ ಪ್ರದೇಶದಲ್ಲಿ ಸರಕು ಸಾಗಣೆ ಲಾರಿಗಳಿಂದ ಲೋಡ್ ಇಳಿಸುವುದರಲ್ಲಿ ಹಮಾಲಿ ಕಾರ್ಮಿಕರು ನಿರತರಾಗಿದ್ದರು. ಸುತ್ತಮುತ್ತಲಿನ ಪ್ರದೇಶದವರು ಮಾರುಕಟ್ಟೆಗೆ ಬಂದು ದಿನಸಿ, ಹಣ್ಣು, ತರಕಾರಿ ಕೊಂಡುಕೊಂಡು ಹೋಗುತ್ತಿದ್ದರು. ಈ ಎಲ್ಲಾ ಪ್ರದೇಶಗಳಲ್ಲಿ ಸೋಷಿಯಲ್ ಡಿಸ್ಟನ್ಸ್‍ನ ಗಂಧವೇ ಇಲ್ಲದೆ ವ್ಯಾಪಾರ ವಹಿವಾಟು ಸಾಗಿತ್ತು.

    ಪ್ರಮುಖ ರಸ್ತೆಗಳನ್ನು ಸಂಪರ್ಕಿಸುವ ಬೀದಿ ರಸ್ತೆಗಳನ್ನು ಪೊಲೀಸರು ಬ್ಯಾರಿಕೇಡ್ ಹಾಕಿ ಬಂದ್ ಮಾಡಿದ್ದಾರೆ. ಅಲ್ಲದೆ, ಅಲ್ಲಲ್ಲಿ ಪೊಲೀಸರು ವಾಹನ ತಪಾಸಣೆ ಬಿಗಿಗೊಳಿಸಿದ್ದಾರೆ. ಇದರಿಂದಾಗಿ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಕಡಿಮೆಯಾಗಿತ್ತು. ಮಧ್ಯಾಹ್ನದ ನಂತರ ಬಹುತೇಕ ಜನರು ಮನೆ ಸೇರಿದ್ದರು. ಬೀದಿ ರಸ್ತೆಗಳು ಜನರಿಲ್ಲದೆ ಖಾಲಿ ಹೊಡೆಯುತ್ತಿದ್ದವು. ಸಣ್ಣಪುಟ್ಟ ಮಕ್ಕಳು ಮಾತ್ರ ಆಟವಾಡುತ್ತಿದ್ದುದು ಕಂಡುಬಂತು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap