ಹುಳಿಯಾರು
ಹುಳಿಯಾರು ಹೋಬಳಿಯ ಎಲ್ಲಾ ನ್ಯಾಯಬೆಲೆ ಅಂಗಡಿಯಲ್ಲಿ ಏಪ್ರಿಲ್- ಮೇ ತಿಂಗಳ ಪಡಿತರ ಆಹಾರ ಅಕ್ಕಿ ಹಾಗೂ ಗೋಧಿ ವಿತರಣೆ ಕಾರ್ಯ ಆರಂಭವಾಗಿದ್ದು ಪಡಿತರ ಪಡೆಯಲು ನೂಕುನುಗ್ಗಲು ಏರ್ಪಟ್ಟಿತ್ತು ಕೊವಿಡ್-19 ಲಾಕ್‍ಡೌನ್ ಹಿನ್ನೆಲೆ ಜಿಲ್ಲಾಡಳಿತ ಮನೆಯಿಂದ ಹೊರಬರುವ ಪ್ರತಿಯೊಬ್ಬರು ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಆದೇಶಿಸಿದ್ದರೂ, ನ್ಯಾಯಬೆಲೆ ಅಂಗಡಿ ಮುಂಭಾಗ ನೂರಾರು ಮಂದಿ ಬಿಪಿಎಲ್ ಕಾರ್ಡ್‍ದಾರರು ಪಡಿತರಕ್ಕಾಗಿ ಬಂದಿದ್ದು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಗುಂಪಾಗಿ ನಿಂತಿದ್ದ ದೃಶ್ಯ ಕಂಡುಬಂದಿತು.
ಬಹುತೇಕ ನ್ಯಾಯಬೆಲೆ ಅಂಗಡಿಗಳಲ್ಲಿ ಟೋಕನ್ ವ್ಯವಸ್ಥೆಯಿದ್ದ ಕಾರಣ ಟೋಕನ್ ಪಡೆಯುಲು ನೂಕುನುಗ್ಗಲು ಏರ್ಪಟ್ಟಿತ್ತಲ್ಲದೆ, ಟೋಕನ್ ಪಡೆದವರು ತಮ್ಮ ಸರದಿ ಬರುವವರೆವಿಗೂ ಉರಿ ಬಿಸಿಲಿನಲ್ಲಿ ಸರತಿ ಸಾಲಿನಲ್ಲಿ ನಿಲ್ಲಲಾಗದೆ ತಮ್ಮ ಚೀಲಗಳನ್ನಿಟ್ಟು ಮರದ ನೆರಳನ್ನು ಅರಸಿ ಗುಂಪಾಗಿ ನಿಲುತ್ತಿದ್ದರು.
ನ್ಯಾಯಬೆಲೆ ಅಂಗಡಿಯವರು, ಪೊಲೀಸರು ಹಾಗೂ ಕೆಲ ನಾಗರಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ. ಮಾಸ್ಕ್ ಧರಿಸಿ ಬಂದವರಿಗಷ್ಟೆ ಪಡಿತರ ಎಂದಾಗ ಮಾಸ್ಕ್ ಇಲ್ಲದ ಮಹಿಳೆಯರು ಸೀರೆ ಸೆರಗನ್ನೆ ಮುಖಗವಸು ಮಾಡಿಕೊಂಡು ರೇಷನ್ ಪಡೆಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
