ಬೆಂಗಳೂರು
ಹೈದರಾಬಾದ್‌ನ ಪಶುವೈದ್ಯೆ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದ ದುಷ್ಕರ್ಮಿಗಳ ಮೇಲೆ ಎನ್‌ಕೌಂಟರ್ ಮಾಡಿರುವುದು ಸೂಕ್ತ ಕ್ರಮವಾಗಿದ್ದು ಇಂತಹ ಸಂದರ್ಭದಲ್ಲಿ ಪೊಲೀಸರನ್ನು ಸಮಾಜದ ಎಲ್ಲರೂ ಅಪಸ್ವರ ಎತ್ತದೆ ಬೆಂಬಲಿಸಬೇಕು ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್‌ರಾವ್ ಅವರು ಮನವಿ ಮಾಡಿದ್ದಾರೆ.
ಜನಾಗ್ರಹ ಹಾಗೂ ನಗರ ಪೊಲೀಸರ ಸಹಕಾರದೊಂದಿಗೆ ಶುಕ್ರವಾರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದ ಕಮ್ಯೂನಿಟಿ ಪೊಲೀಸಿಂಗ್‌ನ ಮಹಿಳೆಯರ ರಕ್ಷಣೆಯನ್ನು ಕೇಂದ್ರವಾಗಿರಿಸಿಕೊಂಡು ಸುರಕ್ಷಿತ ನಗರ ನಿರ್ಮಿಸುವ ಚರ್ಚಾ ಸಭೆಯಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರ ಜೊತೆ ಮಾತನಾಡಿ ಅತ್ಯಾಚಾರ ಕೊಲೆ ನಡೆಸಿದ ದುಷ್ಕರ್ಮಿಗಳನ್ನು ಎನ್‌ಕೌಂಟರ್ ಮಾಡಿದ್ದು ಸರಿಯಾಗಿದೆ ಇದರ ಬಗ್ಗೆ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಪೊಲೀಸರ ಬೆಂಬಲಕ್ಕೆ ಎಲ್ಲರೂ ನಿಲ್ಲಬೇಕು ಎಂದು ತಿಳಿಸಿದರು.
ವೈದ್ಯೆ ಮೇಲಿನ ಅತ್ಯಾಚಾರ ಪ್ರಕರಣ ದೇಶದ ಗಮನ ಸೆಳೆದು ಎಲ್ಲೆಡೆ ಆಕ್ರೋಶ ವ್ಯಕ್ತವಾಗಿತ್ತು ಒಬ್ಬ ಆರೋಪಿ ತಪ್ಪಿಸಿಕೊಂಡಿದ್ದರೂ ಪೊಲೀಸರ ಮೇಲೆ ಒತ್ತಡ ಹೆಚ್ಚಾಗುತ್ತಿತ್ತು ಆರೋಪಿಗಳು ತಪ್ಪಿಸಿಕೊಂಡಿದ್ದರೆ ಪರಿಸ್ಥಿತಿ ಬೇರೆ ರೀತಿ ತಿರುಗುತ್ತಿತ್ತು. ಇದನ್ನು ತಪ್ಪಿಸಲು ಎನ್‌ಕೌಂಟರ್ ಮಾಡಿರುವುದು ಸಮರ್ಥನೀಯ, ಸರಿಯಾದ ನಿರ್ಧಾರ ಕೂಡ ಆಗಿದೆ ಎಂದರು.
ಕೃತ್ಯದಲ್ಲಿ ಒಬ್ಬ ಮಾತ್ರ ಭಾಗಿಯಾಗಿಲ್ಲ. ನಾಲ್ವರು ಸೇರಿದ್ದು ವೈದ್ಯೆಯ ಮೇಲೆ ಅತ್ಯಾಚಾರ ಮತ್ತು ಕೊಲೆ ವ್ಯವಸ್ಥಿತವಾದ ಅಪರಾಧವಾಗಿದೆ. ಆರೋಪಿಗಳ ವಿಷಯದಲ್ಲಿ ಪೊಲೀಸರ ತೀರ್ಮಾನ ಸೂಕ್ತವಾಗಿದೆ ಇದಕ್ಕೆ ಸಮಾಜದ ಒಕ್ಕೂರಲಿನ ಬೆಂಬಲ ಬೇಕು ಎಂದು ಹೇಳಿದರು.
ನಗರ ಪೊಲೀಸರು ರೂಪಿಸಿರುವ ಸುರಕ್ಷಾ ಆಪ್‌ಗೆ ಬೇಡಿಕೆ ಹೆಚ್ಚಾಗಿದ್ದು ಈ ಮೊದಲು 40 ಸಾವಿರ ಮಂದಿ ಡೌನ್‌ಲೋಡ್ ಮಾಡಿಕೊಂಡಿದ್ದರು. ಹೈದರಾಬಾದ್ ಘಟನೆ ನಂತರ 1.90ಲಕ್ಷ ಡೌನಲೋಡ್ ಆಗಿದೆ. ಸ್ಮಾರ್ಟ್‌ಫೋನ್ ಇಲ್ಲದವರಿಗೆ ಸಹಾಯವಾಣಿ 100ರ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಮಹಿಳೆಯರ ರಕ್ಷಣೆ ಮತ್ತು ಬೆಂಗಳೂರನ್ನು ಸುರಕ್ಷಿತ ತಾಣವಾಗಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದರು.
ಗಸ್ತು ಹೆಚ್ಚಳ
ಘಟನೆ ನಡೆದ ಸ್ಥಳಕ್ಕೆ ಹೋಗಲು ಕನಿಷ್ಠ 9 ನಿಮಿಷಗಳ ಕಾಲಮಿತಿ ತೆಗೆದುಕೊಳ್ಳಲಾಗುತ್ತಿತ್ತು. ಈಗ ಹೊಸದಾಗಿ ಮತ್ತಷ್ಟು ಕ್ರಮಗಳನ್ನು ಕೈಗೊಂಡಿರುವುದರಿಂದ 7 ನಿಮಿಷಗಳ ಒಳಗಾಗಿಯೇ ಪೊಲೀಸರು ಸ್ಥಳಕ್ಕೆ ಹೋಗುತ್ತಾರೆ. ಇದಕ್ಕಾಗಿ ದುರಸ್ಥಿಯಲ್ಲಿದ್ದ ಹೊಯ್ಸಳ ವಾಹನಗಳನ್ನು ರಾತ್ರೋರಾತ್ರಿ ರಿಪೇರಿ ಮಾಡಿಸಲಾಗಿದೆ.
ಸಿಬ್ಬಂದಿಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಗಸ್ತು ಸಿಬ್ಬಂದಿಗಳನ್ನು ಹೆಚ್ಚಿಸಲಾಗಿದೆ. ಮಹಿಳೆಯರಿಗೆ ತಿಳುವಳಿಕೆ ನೀಡಲಾಗುತ್ತಿದೆ. ಬೆಂಗಳೂರಿನಲ್ಲಿ ರಾತ್ರಿ ವೇಳೆಯೂ ಕೆಲಸ ಮಾಡುತ್ತಾರೆ. ಅವರ ಪ್ರಯಾಣ ಸುರಕ್ಷಿತವಾಗಿರಬೇಕು ಎಂಬ ಕಾರಣಕ್ಕಾಗಿ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಖಾಸಗಿ ಟ್ಯಾಕ್ಸಿ ಸರ್ವೀಸ್‌ಗಳಿಗೆ ಸೂಕ್ತ ಸೂಚನೆ ನೀಡಿದ್ದೇವೆ. ಸರ್ಕಾರದ ಮುಖ್ಯ ಕಾರ್ಯದರ್ಶಿಗಳೂ ಕೂಡ ಈ ನಿಟ್ಟಿನಲ್ಲಿ ಬಹಳಷ್ಟು ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ವಿವರಿಸಿದರು.
ನೆರೆ ಹೊರೆ ಸಂಪರ್ಕ
ಅಪರಾಧ ಕೃತ್ಯಗಳನ್ನು ಕಡಿಮೆ ಮಾಡಲು ಸಾರ್ವಜನಿಕರ ಸಹಭಾಗಿತ್ವ ಅಗತ್ಯವಾಗಿದೆ ನೆರೆ-ಹೊರೆಯವರು ಪರಸ್ಪರ ಸಂಪರ್ಕದಲ್ಲಿರುವುದು ಕೂಡ ಮುಖ್ಯ, ಬೆಂಗಳೂರಿನ ಬಹಳಷ್ಟು ಅಪಾರ್ಟ್‌ಮೆಂಟ್‌ಗಳಲ್ಲಿ ಪಕ್ಕದ ಮನೆಯಲ್ಲಿ ಯಾರಿದ್ದಾರೆ ಎಂಬುದೇ ತಿಳಿಯುವುದಿಲ್ಲ. ಹೀಗಾಗಿ ಪೊಲೀಸರು ಹಲೋ ನೈಬರ್ ಎಂಬ ಹೊಸ ಕಾರ್ಯಕ್ರಮವನ್ನು ರೂಪಿಸಿದ್ದಾರೆ.ಆಯಾ ಠಾಣೆಗಳ ವ್ಯಾಪ್ತಿಯಲ್ಲಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ ನೆರೆ-ಹೊರೆಯವರನ್ನು ಪರಸ್ಪರ ಪರಿಚಯಿಸಲಾಗುತ್ತದೆ. ಸಾರ್ವಜನಿಕರಿಗೆ ಪೊಲೀಸ್ ಠಾಣೆಗಳ ಹೆಸರು, ಗಸ್ತು ಸಿಬ್ಬಂದಿಗಳ ವಿವರಗಳನ್ನು ಒದಗಿಸಲಾಗುತ್ತದೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








