ಸಿಎಎ ವಿರುದ್ಧ ಜನ ದಂಗೆ ಏಳಬೇಕು : ಸಿದ್ದರಾಮಯ್ಯ

ಬೆಂಗಳೂರು

    ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾಯ್ದೆ ರಾಜ್ಯಾದ್ಯಂತ ಭಾರೀ ಕೋಲಾಹಲಕ್ಕೆ ಕಾರಣವಾಗಿದ್ದು ಬ್ರಿಟಿಷರನ್ನು ಭಾರತದಿಂದ ಓಡಿಸಲು ದಂಗೆ ಎದ್ದಂತೆ ಈಗಲೂ ಜನ ದಂಗೆ ಏಳಬೇಕು ಎಂದು ಕಾಂಗ್ರೆಸ್ ಅಬ್ಬರಿಸಿದ್ದರೆ ,ತಲ್ಲಣಿಸಿರುವ ಮಂಗಳೂರಿಗೆ ವಿಶೇಷ ವಿಮಾನದಲ್ಲಿ ಭೇಟಿ ಮಾಡಲು ಹೊರಟ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಸರ್ಕಾರ ಅನುಮತಿ ನಿರಾಕರಿಸಿದೆ.

    ಪೌರತ್ವ ತಿದ್ದುಪಡಿ ಕಾಯ್ದೆ ವಿವಾದಕ್ಕೆ ಸಂಬಂಧಿಸಿದಂತೆ ಗುರುವಾರ ಶುರುವಾದ ವ್ಯಾಪಕ ಪ್ರತಿಭಟನೆಯ ಹಿನ್ನೆಲೆಯಲ್ಲಿ ಗೋಲಿಬಾರ್ ನಡೆದದ್ದಿರಿಂದ ಮಂಗಳೂರಿನಲ್ಲಿ ಇಬ್ಬರು ಯುವಕರು ಮೃತರಾಗಿದ್ದರು.ಇದರಿಂದ ಕ್ರುದ್ಧವಾಗಿರುವ ಕಾಂಗ್ರೆಸ್ ಮತ್ತಿತರ ಶಕ್ತಿಗಳು ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದು ಇಂದು ಸಹಾ ರಾಜ್ಯದ ವಿವಿಧೆಡೆ ಪ್ರತಿಭಟನೆ ನಡೆಸಿವೆ.

   ಈ ಮಧ್ಯೆ ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ,ಈ ಪ್ರಜಾಪ್ರಭುತ್ವ ರಾಷ್ಟ್ರವನ್ನು ಸರ್ವಾಧಿಕಾರಿ ರಾಷ್ಟ್ರವನ್ನಾಗಿ ಮಾಡಲು ಕೇಂದ್ರ ಸರ್ಕಾರ ಹೊರಟಿದೆ.ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಇದೇ ಕಾರಣಕ್ಕಾಗಿ ತಂದಿದೆ ಎಂದರು.

    ಬಡವರಿಗೆ ಅನ್ನ ಹಾಕಿದ್ದು,ಮಕ್ಕಳಿಗೆ ಹಾಲು ಕೊಟ್ಟಿದ್ದು,ರೈತರ ಸಾಲ ಮನ್ನಾ ಮಾಡಿದ್ದು ಕಾಂಗ್ರೆಸ್ ಚಿಂತನೆ. ಗೊಬ್ಬರ ಕೇಳಿದ ರೈತರಿಗೆ ಗುಂಡು ಹಾರಿಸಿ ಸಾಯಿಸಿದ್ದು ಬಿಜೆಪಿ ಚಿಂತನೆ ಎಂದು ಅವರು ಕಿಡಿಕಾರಿದರು .ಇವರು ಅಧಿಕಾರದಲ್ಲಿದ್ದಾಗ ಹಿಂದೆ ಮಂಗಳೂರು ಚರ್ಚ್ ಮೇಲೆ ಧಾಳಿಯಾಗಿತ್ತು.ರೈತರ ಮೇಲೆ ಗೋಲಿಬಾರ್ ನಡೆದಿತ್ತು.ಈಗ ಪ್ರಜಾಸತ್ತಾತ್ಮಕ ರೀತಿಯಲ್ಲಿ ಪ್ರತಿಭಟನೆಗಿಳಿದವರ ಮೇಲೂ ಗುಂಡು ಹಾರಿಸಿದ್ದಾರೆ ಎಂದರು.

    ಇದು ಉದ್ದೇಶ ಪೂರ್ವಕ ಘಟನೆ.ಈ ಕುರಿತು ಹಾಲಿ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆಯಾಗಬೇಕು ಎಂದ ಅವರು,ಇವೆಲ್ಲದರ ಹಿಂದಿರುವವರು ಪ್ರಧಾನಿ ನರೇಂದ್ರಮೋದಿ ಹಾಗೂ ಅಮಿತ್ ಷಾ.ಅವರಿಬ್ಬರು ಯಡಿಯೂರಪ್ಪ ಅವರ ಮೂಲಕ ಗಲಭೆ ಸೃಷ್ಟಿಸುತ್ತಿದ್ದಾರೆ ಎಂದರು.

    144 ಸೆಕ್ಷನ್ ಹಾಕಿದ್ದೀರಿ.ಗೋಲಿಬಾರ್ ಮಾಡಿ ಇಬ್ಬರನ್ನು ಸಾಯಿಸಿದ್ದೀರಿ.ಎನ್‍ಆರ್‍ಸಿಯ ದುಷ್ಪರಿಣಾಮಗಳು ಏನೆಂಬುದು ನಮಗೆಲ್ಲ ಗೊತ್ತಿದೆ.ಇವತ್ತು ನಮ್ಮ ರಾಜ್ಯದವರು ಬೇರೆ ರಾಜ್ಯಗಳಲ್ಲೂ ಇರುತ್ತಾರೆ.ಅವರನ್ನು ವಾಪಸ್ ಕಳಿಸುತ್ತೇವೆ ಎಂದರೆ ಹೇಗೆ? ಇವತ್ತಿನ ಪರಿಸ್ಥಿತಿ ನೋಡಿದರೆ ಹಿಟ್ಲರ್ ಆಡಳಿತ ನೆನಪಿಗೆ ಬರುತ್ತಿದೆ.ಅಘೋಷಿತ ತುರ್ತು ಪರಿಸ್ಥಿತಿ ರಾಜ್ಯದಲ್ಲಿ ಜಾರಿಯಲ್ಲಿದೆ .ಶಾಂತಿಯುತವಾಗಿ ಪ್ರತಿಭಟನೆ ಮಾಡಲು ಸಂವಿಧಾನದಲ್ಲಿ ಅವಕಾಶವಿದ್ದರೂ ಅದನ್ನು ಉದ್ದೇಶಪೂರ್ವಕವಾಗಿ ಮೊಟಕು ಮಾಡಲಾಗಿದೆ.

    ಧರ್ಮಗಳ ನಡುವೆ ಕೋಮುಗಲಭೆ ಸೃಷ್ಟಿಸಲು ಬಿಜೆಪಿ ಯತ್ನ ಮಾಡುತ್ತಿದೆ.ಮಂಗಳೂರಿನಲ್ಲಿ ಇದೇ ಕಾರಣಕ್ಕಾಗಿ ಅಮಾಯಕ ಯುವಕರನ್ನು ಉದ್ದೇಶಪೂರ್ವಕವಾಗಿ ಸಾಯಿಸಲಾಗಿದೆ.ಜನರಲ್ಲಿ ಭಯ ಹುಟ್ಟಿಸುವ ಕೆಲಸವಿದು ಎಂದರು .ಕೆಪಿಸಿಸಿ ಕಛೇರಿಯಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಡಿ.ಕೆ.ಶಿವಕುಮಾರ್,ಪೌರತ್ವ ಕಾಯ್ದೆಯಡಿ ಒಬ್ಬ ವಿದ್ಯಾವಂತನ ಬಳಿ ಕೇಳಿದರೆ ಆತ ದಾಖಲೆ ಕೊಡಬಹುದು.ಆದರೆ ಆತನ ಅವಿದ್ಯಾವಂತ ತಂದೆ,ತಾಯಿಯರು ಎಲ್ಲಿಂದ ದಾಖಲೆ ತಂದುಕೊಡಬೇಕು?ಎಂದು ಪ್ರಶ್ನಿಸಿದರು.

     ಬಿಜೆಪಿ ಹುಚ್ಚುಚ್ಚಾಗಿ,ತುಘಲಕ್ ಮಾದರಿಯಲ್ಲಿ ಕೆಲಸ ಮಾಡುತ್ತಿದೆ.ಈ ನಕಲಿ ದೇಶಪ್ರೇಮಿಗಳು ಅಸಲಿ ದೇಶ ಪ್ರೇಮಿಗಳ ಬಳಿ ಸರ್ಟಿಫಿಕೇಟ್ ಕೇಳ್ತಿದ್ದಾರೆ.ಇವರಿಗೇಕೆ ಕೊಡಬೇಕು ಸರ್ಟಿಫಿಕೇಟ್?ಎಂದು ಪ್ರಶ್ನಿಸಿದರು.ಯಾರು ಯಾವ ಧರ್ಮದಲ್ಲಿ ಇರಬೇಕು?ಹೇಗೆ ಜೀವನ ನಡೆಸಬೇಕು?ಅನ್ನುವುದು ಅವರವರಿಗೆ ಸಂಬಂಧಪಟ್ಟ ವಿಚಾರ.ಯಾರ ಮೇಲೂ ಒತ್ತಡ ಹಾಕೋಕೆ ಆಗಲ್ಲ.ಹಿಂದೆ ಯುವಕರು ಮಾತನಾಡುತ್ತಿದ್ದಾಗ ನಾವು ಕೇಳಿಸಿಕೊಂಡಿದ್ದೇವೆ.ಈಗ ಯುವಕರು ಮತ್ತೆ ಮಾತನಾಡುತ್ತಿದ್ದಾರೆ.ಬಿಜೆಪಿಯವರು ಅವರ ಪ್ರಶ್ನೆಯನ್ನು ಕೇಳಿಸಿಕೊಳ್ಳಲಿ ಎಂದರು.

     ಬ್ರಿಟಿಷರನ್ನು ಭಾರತದಿಂದ ಓಡಿಸಲು ಹಿಂದೆ ಜನ ದಂಗೆ ಎದ್ದಿದ್ದರು.ಈಗಲೂ ಅಂತಹ ದಂಗೆಯ ಅಗತ್ಯವಿದೆ ಎಂದ ಅವರು,ಪ್ರತಿಭಟಿಸುವವರನ್ನು ಏಕೆ ಕೊಲ್ಲುತ್ತೀರಿ?ಬರ್ತಾರೆ,ಪ್ರತಿಭಟಿಸ್ತಾರೆ,ಹೋಗ್ತಾರೆ.ಅವರ ಮೇಲೇಕೆ ಗುಂಡು ಹಾರಿಸಬೇಕು ಎಂದರು.

    ಮಾಜಿ ಸಚಿವ,ಕಾಂಗ್ರೆಸ್ ನಾಯಕ ಜಮೀರ್ ಅಹ್ಮದ್,ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾಯ್ದೆ ದೇಶವನ್ನು ಒಡೆಯುವ ಯತ್ನ ಎಂದು ಆರೋಪಿಸಿದರು.ಪೌರತ್ವವನ್ನು ಸಾಬೀತುಪಡಿಸಲು ಡಾಕ್ಯುಮೆಂಟ್ ಕೊಡಿ ಎಂದರೆ ನಮ್ಮ ತಾತ, ಮುತ್ತಾತನ ಡಾಕ್ಯುಮೆಂಟ್ ತೆಗೆಯುವುದು ಹೇಗೆ?ಎಂದು ಪ್ರಶ್ನಿಸಿದ ಜಮೀರ್ ಅಹ್ಮದ್:ನನ್ನ ಡೇಟ್ ಆಫ್ ಬರ್ತ್ ಕೂಡಾ ಇಲ್ಲ.ಎಲ್ಲಿಂದ ತರೋಣ ಎಂದರು.

      ಎನ್.ಆರ್.ಸಿ ಯಿಂದ ಲಾಭವೇನಿದೆ?ಅಂತ ಪ್ರಶ್ನಿಸಿದ ಅವರು,ಇದರಿಂದ ದೇಶ ಒಡೆಯುವುದನ್ನು ಬಿಟ್ಟರೆ ಬೇರೇನೂ ಆಗುವುದಿಲ್ಲ .ಹಿಂದೂ ಮುಸಲ್ಮಾನರು ಒಂದಾಗಿ ಬಾಳಿದ,ಬಾಳುತ್ತಿರುವ ದೇಶ ಇದು.ಇದನ್ನು ಸಹಿಸದ ಕೇಂದ್ರ ಸರ್ಕಾರ ಈಗ ಈ ಆಟಕ್ಕಿಳಿದಿದೆ ಎಂದರು.ಹೀಗೆ ಹಿಂದೂ,ಮುಸ್ಲಿಮರಿಬ್ಬರ ನಡುವೆ ಕಿತ್ತಾಟ ತಂದಿಡಬೇಡಿ .ಇಂತಹ ಪಾಪದ ಕೆಲಸ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಹೇಳಿದರು.

      ಹೃದಯದ ಶಸ್ತ್ರ ಚಿಕಿತ್ಸೆಗೊಳಗಾಗಿ,ವಿಶ್ರಾಂತಿ ಪಡೆಯಿರಿ.ಜೀವಕ್ಕೆ ಅಪಾಯವಿದೆ ಎಂದರೂ ಸಿದ್ಧರಾಮಯ್ಯ ಮಂಗಳೂರಿಗೆ ಹೊರಟು ನಿಂತಿರುವ ಕುರಿತು ಪ್ರಶಂಸಿಸಿದ ಅವರು,ದೇಶಕ್ಕಾಗಿ ಹೀಗೆ ಹೋರಾಡುವವರು ಅಪರೂಪ ಎಂದು ಹೇಳಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap