ಬೆಂಗಳೂರು
ಕಾಂಗ್ರೆಸ್ ನಿಂದ ಆಯ್ಕೆಯಾಗಿದ್ಧ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷಕ್ಕೆ ಅನ್ಯಾಯ ಮಾಡಿದ್ದು, ಇವರನ್ನು ಸುಪ್ರೀಂ ಕೋರ್ಟ್ ಹೇಗೆ ಅನರ್ಹಗೊಳಿಸಿದೆಯೋ ಅದೇ ರೀತಿ ಚುನಾವಣೆಯಲ್ಲಿ ಜನರೂ ಸಹ ಅವರನ್ನು ಅನರ್ಹಗೊಳಿಸುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಕೆ.ಆರ್.ಪುರಂ ಕ್ಷೇತ್ರದ ಉಪಚುನಾವಣೆಗೆ ಪಕ್ಷದಿಂದ ಕಣಕ್ಕಿಳಿಯುತ್ತಿರುವ ನಾರಾಯಣಸ್ವಾಮಿ ಅವರಿಗೆ ಬಿ.ಫಾರಂ ನೀಡಿ ಶುಭಕೋರಿದರು. ಶಾಸಕ ಬೈರತಿ ಬಸವರಾಜ್ ಗೆ ವಿರುದ್ಧವಾಗಿ ನಾರಾಯಣಸ್ವಾಮಿ ಕಣಕ್ಕಿಳಿದಿದ್ದು, ಸೋಮವಾರ ನಾಮಪತ್ರ ಸಲ್ಲಿಸಲಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ದಿನೇಶ್ ಗುಂಡೂರಾವ್. ಜನತೆ ಅನರ್ಹರನ್ನು ಗೆಲ್ಲಿಸುವುದಿಲ್ಲ ಪಕ್ಷ ದ್ರೋಹಿಗಳಿಗೆ ಸೋಲು ಕಟ್ಟಿಟ್ಟಬುತ್ತಿ ಎಂದರು.
ಕೆ.ಆರ್.ಪುರಂ ಕ್ಷೇತ್ರದಲ್ಲಿ ಬೈರತಿ ಬಸವರಾಜ್ ವಿರುದ್ಧವಾದ ಜನಾಭಿಪ್ರಾಯವಿದೆ. ಇದನ್ನು ಸರಿಯಾಗಿ ಬಳಸಿಕೊಳ್ಳಬೇಕು. ಹೊಸಕೋಟೆ ಸೇರಿದಂತೆ ಎಲ್ಲೆಡೆ ಕಾಂಗ್ರೆಸ್ ಪರ ಒಲವು ಇದೆ. ಇದನ್ನು ಅಭ್ಯರ್ಥಿಗಳು ಅರಿತು ಮತದಾರರ ಮನ ಗೆಲ್ಲಲು ಪ್ರಯತ್ನಿಸಬೇಕು ಎಂದರು.
ಶಿವಾಜಿನಗರ ಕ್ಷೇತ್ರದಿಂದ ತಮ್ಮ ಪತ್ನಿ ಟಬು ಸ್ಪರ್ಧಿಸಲಿದ್ದಾರೆ ಎಂಬ ಮಾಧ್ಯಮ ವರದಿಗಳನ್ನು ತಳ್ಳಿಹಾಕಿದ ದಿನೇಶ್ ಗುಂಡೂರಾವ್, ಸದ್ಯಕ್ಕೆ ಅಂತಹ ಪರಿಸ್ಥಿತಿಯಿಲ್ಲ. ತಮ್ಮ ಪತ್ನಿಗೂ ರಾಜಕೀಯ ಜ್ಞಾನವಿದೆ. ಗೆಲ್ಲುವ ಅರ್ಹತೆಯೂ ಇದೆ. ಈಗ ಉಳಿದಿರುವುದು ಕೇವಲ ಇಪ್ಪತ್ತು ದಿನ ಮಾತ್ರ. ಹೀಗಾಗಿ ಇಂತಹ ಪರಿಸ್ಥಿತಿಯಲ್ಲಿ ಸ್ಪರ್ಧೆ ಸಾಧ್ಯವಿಲ್ಲ ಎಂದರು. ಮೊದಲೇ ಈ ಬಗ್ಗೆ ಆಲೋಚನೆ ಬಂದಿದ್ದರೆ ತೀರ್ಮಾನ ಮಾಡಬಹುದಿತ್ತು. ಆದರೆ ಈಗ ತಮ್ಮ ಪತ್ನಿ ಚುನಾವಣೆಗೆ ನಿಲ್ಲುವ ಯೋಚನೆ ಹೊಂದಿಲ್ಲ ಎಂದರು.
ಶಿವಾಜಿನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗೆ ಮಾಜಿ ಸಚಿವ ರೋಷನ್ ಬೇಗ್ ಬೆಂಬಲ ನೀಡುವ ವಿಚಾರವಾಗಿ ಪ್ರತಿಕ್ರಿಯಿಸಿ, ರೋಷನ್ ಬೇಗ್ ಹಲವು ವರ್ಷಗಳಿಂದ ನಮ್ಮ ಪಕ್ಷದಲ್ಲಿಯೇ ಇದ್ದವರು. ಅವರ ಮಾತುಗಳಿಗೆ ಪಕ್ಷದಲ್ಲಿ ಬೆಲೆ ಸಿಗುತ್ತಿತ್ತು. ಅವರು ಈಗ ಏಕೆ ಬಿಜೆಪಿಗೆ ಹೋಗುತ್ತಿದ್ದಾರೆಯೋ ಗೊತ್ತಿಲ್ಲ. ಕೋಮುವಾದಿ ಪಕ್ಷಕ್ಕೆ ಸೇರಿರುವ ಅವರು ಈಗ ನಮ್ಮ ಪಕ್ಷದಲ್ಲಿಲ್ಲ. ಹೀಗಾಗಿ ಅವರು ಬೆಂಬಲ ಕೊಡುವುದಾಗಲೀ, ಬಿಡುವುದಾಗಲೀ ಪ್ರಸ್ತುತವಲ್ಲ ಎಂದರು.
ಉಳಿದ ಏಳು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚರ್ಚೆ ಮುಗಿದಿದ್ದು, ಯಾವಾಗ ಬೇಕಾದರೂ ಪಟ್ಟಿ ಬಿಡುಗಡೆ ಆಗಬಹುದು. ಈ ಸಂಬಂಧ ಶುಕ್ರವಾರ ದೆಹಲಿಯಲ್ಲಿ ಹೈಕಮಾಂಡ್ ಬಳಿ ಚರ್ಚಿಸಿದ್ದು, ಯಾವುದೇ ಕ್ಷೇತ್ರದ ಟಿಕೆಟ್ ಹಂಚಿಕೆ ಬಗ್ಗೆ ಗೊಂದಲವಿಲ್ಲ ಎಂದರು.ಉಪಚುನಾವಣೆಗೆ ಎಐಸಿಸಿ ನಾಯಕರ ಪ್ರಚಾರ ವಿಚಾರವಾಗಿ ಮಾತನಾಡಿದ ದಿನೇಶ್ ಗುಂಡೂರಾವ್, ಉಪಚುನಾವಣೆಯಲ್ಲಿ ಈ ಹಿಂದೆ ಎಐಸಿಸಿ ನಾಯಕರು ಪ್ರಚಾರಕ್ಕೆ ಬಂದಿಲ್ಲ. ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರು ಪ್ರಚಾರಕ್ಕೆ ಬರುತ್ತಾರೆ. ಕೆ.ಆರ್.ಪುರಂ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ತಾವು ಭಾಗಿಯಾಗಲಿದ್ದು, ಉಪಚುನಾವಣಾ ಪ್ರಚಾರದಲ್ಲಿ ಸ್ಥಳೀಯ, ರಾಜ್ಯ ನಾಯಕರು ಪ್ರಚಾರ ನಡೆಸುತ್ತಾರೆ. ಎಐಸಿಸಿ ನಾಯಕರು ಆಗಮಿಸುತ್ತಿಲ್ಲ ಎಂದರು.
ಅನರ್ಹ ಶಾಸಕ ಎಂಟಿಬಿ ನಾಗರಾಜು ಕೋಮುವಾದಿ ಪಕ್ಷಕ್ಕೆ ಹೋಗಿ ದೊಡ್ಡ ತಪ್ಪು ಮಾಡಿದ್ದಾರೆ. ಎಂಟಿಬಿ ಇವತ್ತು ರೇಸ್ ನಲ್ಲಿಲ್ಲ. ಹೊಸಕೋಟೆಯಲ್ಲಿ ಕಾಂಗ್ರೆಸ್ ಹಾಗೂ ಪಕ್ಷೇತರ ಅಭ್ಯರ್ಥಿ ನಡುವೆ ಮಾತ್ರ ಪೈಪೋಟಿ ಇದೆ. ಎಂಟಿಬಿ ಸ್ಪರ್ಧೆ ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾಗಿದೆ. ಎಂ ಟಿ ಬಿ ತಮ್ಮ ಕತ್ತನ್ನು ತಾವೇ ಕೊಯ್ದುಕೊಂಡಿದ್ದಾರೆ. ಹಣ ಎಷ್ಟಿದ್ದರೇನು ಪ್ರಯೋಜನ. ಪಾಪ ಅವರ ಸ್ಥಿತಿ ಏನಾಗಿದೆ ನೋಡಿ ಎಂದು ಲೇವಡಿ ಮಾಡಿದರು.ಗೋಕಾಕ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿಗೆ ಜೆಡಿಎಸ್ ಬೆಂಬಲ ನೀಡಿರುವ ವಿಚಾರವನ್ನು ತಳ್ಳಿಹಾಕಿದ ಅವರು,ಯಾರು ಯಾರಿಗೆ ಬೆಂಬಲ ಕೊಡುತ್ತಾರೆಯೋ ಗೊತ್ತಿಲ್ಲ.ಗೋಕಾಕ್ ಟಿಕೆಟ್ ಬಗ್ಗೆ ಗೊಂದಲವಿಲ್ಲ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
