ಜಾಮಿನಿನ ಮೇಲೆ ಹೊರಬಂದ ಕೇವಲ 4 ಗಂಟೆಗಳೊಳಗೆ ಗ್ಯಾಂಗ್ ಕಟ್ಟಿಕೊಂಡು ಸುಲಿಗೆ

ಬೆಂಗಳೂರು

       ಜೈಲಿನಿಂದ ಜಾಮಿನಿನ ಮೇಲೆ ಹೊರಬಂದ ಕೇವಲ 4 ಗಂಟೆಗಳೊಳಗೆ ಗ್ಯಾಂಗ್ ಕಟ್ಟಿಕೊಂಡು ಸುಲಿಗೆಗೆ ಇಳಿದಿದ್ದ ಶ್ರೀಧರ್ ಅಲಿಯಾಸ್ ಮಿಲ್ಟ್ರಿ ಜೊತೆ ಮೂವರು ಸುಲಿಗೆ ಮಾಡಿಕೊಂಡು ಪರಾರಿಯಾಗುವಾಗ ಅಪಘಾತಗೊಂಡು ಕೆಳಗೆಬಿದ್ದು ಗಿರಿನಗರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

       ಇಟ್ಟಮಡುವಿನ ಶ್ರೀಧರ್ (20) ಸೋಮವಾರ ರಾತ್ರಿ 9.30ರ ವೇಳೆ ಜೈಲಿನಿಂದ ಬಿಡುಗಡೆಯಾಗಿ ಬಂದು ಐವರ ಜೊತೆ ಸೇರಿ ಎರಡು ಬೈಕ್‍ಗಳಲ್ಲಿ ಸುತ್ತಾಡುತ್ತಾ, ಪೀಣ್ಯ, ಚೆನ್ನಮ್ಮನಕೆರೆ ಅಚ್ಚುಕಟ್ಟುಗಳಲ್ಲಿ ಸುಲಿಗೆ ನಡೆಸಿದ್ದಾರೆ.

      ಚೆನ್ನಮ್ಮನಕೆರೆ ಅಚ್ಚುಕಟ್ಟುವಿನಿಂದ ಹನುಮಂತನಗರದ ಕಡೆಗೆ ರಾತ್ರಿ 12.30ರ ವೇಳೆ ದುಷ್ಕರ್ಮಿಗಳು ಬರುತ್ತಿದ್ದ ಎರಡು ಬೈಕ್‍ಗಳಲ್ಲಿ ಒಂದು ಬೈಕ್, ಮತ್ತೊಂದು ಬೈಕ್‍ಗೆ ಡಿಕ್ಕಿ ಹೊಡೆದು ಅದರಲ್ಲಿದ್ದ ಶ್ರೀಧರ್, ಭರತ್ (18) ಹಾಗೂ ಪವನ್ (18) ಕೆಳಗೆ ಬಿದ್ದು ಗಾಯಗೊಂಡಿದ್ದು, ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಸುಲಿಗೆ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ತಿಳಿಸಿದ್ದಾರೆ.

      ಶ್ರೀಧರ್‍ನ ಗ್ಯಾಂಗ್‍ನಲ್ಲಿ ಸುಲಿಗೆ ಮಾಡುತ್ತಿದ್ದ ಇನ್ನೂ ಮೂವರು ಪರಾರಿಯಾಗಿದ್ದು, ಅವರಿಗಾಗಿ ತೀವ್ರಶೋಧ ನಡೆಸಲಾಗಿದೆ. ಶ್ರೀಧರ್ ಸೇರಿ ಮೂವರು, ಪೀಣ್ಯದಲ್ಲಿದ್ದ ದೋಚಿದ್ದ ಮೊಬೈಲ್, ಚೆನ್ನಮ್ಮನಕೆರೆ ಅಚ್ಚುಕಟ್ಟುವಿನಲ್ಲಿ ಹೊರಗೆ ಕಸ ಹಾಕಲು ಬಂದಿದ್ದ ವ್ಯಕ್ತಿಯೊಬ್ಬರನ್ನು ಬೆದರಿಸಿ ಕಸಿದಿದ್ದ ಚಿನ್ನದ ಸರವನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

     ಬಂಧಿತ ಶ್ರೀಧರ್, ಗ್ಯಾಂಗ್ ಕಟ್ಟಿಕೊಂಡು ಸುಲಿಗೆ, ಕಳ್ಳತನ ಮಾಡುತ್ತಿದ್ದ. ಹಿಂದೆ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿ ಜೈಲಿಗೆ ಸೇರಿದ್ದ ಆತ ನಿನ್ನೆ ರಾತ್ರಿ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದ ಕೂಡಲೇ ಸುಲಿಗೆಗೆ ಇಳಿದು ಸಿಕ್ಕಿಬಿದ್ದಿದ್ದಾನೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link