ಬೆಂಗಳೂರು
ಕುಡಿದು ಮಲಗಿದ್ದ ಹೂವಿನ ವ್ಯಾಪಾರಿಯೊಬ್ಬರು ಹಿಂತೆಗೆದುಕೊಳ್ಳುತ್ತಿದ್ದ ಟೆಂಪೋ ಹರಿದು ಮೃತಪಟ್ಟಿರುವ ದಾರುಣ ಘಟನೆ ಆಡುಗೋಡಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೃತಪಟ್ಟವರನ್ನು ತಮಿಳುನಾಡು ಮೂಲದ ವೆಂಕಟೇಶ್(45)ಎಂದು ಗುರುತಿಸಲಾಗಿದೆ.ತಮಿಳುನಾಡಿನಿಂದ ಹೂವು ತಂದು ಆಡುಗೋಡಿಯ ಸುತ್ತಮುತ್ತಲ ಪ್ರದೇಶಗಳಲ್ಲಿ ಮಾರಾಟ ಮಾಡುತ್ತಿದ್ದ ವೆಂಕಟೇಶ್ ಮಂಗಳವಾರ ರಾತ್ರಿ 10.45ರ ವೇಳೆ ವ್ಯಾಪಾರ ಮುಗಿಸಿ ಮದ್ಯಪಾನ ಮಾಡಿ ಆಡುಗೋಡಿಯ ಬಿಜಿ ರಸ್ತೆಯಲ್ಲಿ ನಿಂತಿದ್ದ ಟೆಂಪೋ ಮಗ್ಗುಲಲ್ಲಿ ಮಲಗಿದ್ದರು.
ಟೆಂಪೋ ಚಾಲಕ ವೆಂಕಟೇಶ್ ಅವರು ಮಲಗಿರುವುದನ್ನು ಗಮನಿಸದೇ ಹಿಂದಕ್ಕೆ ವಾಹನವನ್ನು ಚಲಾಯಿಸಿದ್ದು ಅದರಡಿ ಸಿಲುಕಿ ಗಂಭೀರವಾಗಿ ಗಾಯಗೊಂಡ ವೆಂಕಟೇಶ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.ಪ್ರಕರಣ ದಾಖಲಿಸಿಕೊಂಡಿರುವ ಆಡುಗೋಡಿ ಸಂಚಾರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಮಹಿಳೆ ಸಾವು
ರಸ್ತೆ ದಾಟುತ್ತಿದ್ದ ಜಯಮ್ಮ ಅವರು ಬಿಎಂಟಿಸಿ ಬಸ್ ಹರಿದು ಮೃತಪಟ್ಟಿರುವ ದುರ್ಘಟನೆ ಹೆಬ್ಬಾಳ ಸಂಚಾರ ಪೊಳೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾತ ಬೆಳಿಗ್ಗೆ ನಡೆದಿದೆ.
ಕೆಂಪಾಪುರದ ಜಯಮ್ಮ(65)ಅವರು ಬೆಳಿಗ್ಗೆ 11.30ರ ವೇಳೆ ರಸ್ತೆ ದಾಟುತ್ತಿದ್ದಾಗ ಮಾನ್ಯತಾ ಟೆಕ್ಪಾರ್ಕ್ ಕಡೆಯಿಂದ ಬಂದು ಹೆಬ್ಬಾಳ ವೃತ್ತದ ಬಳಿ ಯು ತಿರುವು ತೆಗೆದುಕೊಳ್ಳುತ್ತಿದ್ದ ಬಸ್ ಹರಿದು ಮೃತಪಟ್ಟಿದ್ದಾರೆ ಹೆಬ್ಬಾಳ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿ ಬಸ್ ಚಾಲಕನನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








