ಮಧುಗಿರಿ
ಅಯ್ಯಪ್ಪ ಮಾಲಾಧಾರಿಯೊಬ್ಬ ಕಳೆದ 23 ವರ್ಷಗಳಿಂದ ಅನ್ನ ಆಹಾರ ಸೇವಿಸದೆ ಕೇವಲ ವಾಹನಗಳಿಗೆ ಬಳಸಿರುವ ವೇಸ್ಟ್ ಇಂಜಿನ್ ಆಯಿಲ್, ಟೀ ಕುಡಿದು, ಪೇಪರ್ ತಿನ್ನುತ್ತಾ ದೇವಾಲಯದಲ್ಲಿ ಆಶ್ರಯ ಪಡೆದು ತನ್ನ ಬಡತನದ ಬಂಡಿಯನ್ನು ಎಳೆಯುತ್ತಿದ್ದಾನೆ.
ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ವಾಸವಿರುವ ಕುಮಾರ್ (40) ಎನ್ನುವವರು ಮಂಗಳವಾರ ಸಂಜೆ ಬೆಂಗಳೂರಿನಿಂದ ಮಧುಗಿರಿಗೆ ಬಂದಿದ್ದು, ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿದ್ದ ಮಂಜುನಾಥ್ ಎನ್ನುವ ಆಟೋಚಾಲಕನಿಗೆ ಮತ್ತು ಇತರ ಸಹಪಾಠಿಗಳಿಗೆ ನನಗೆ ಕುಡಿಯಲು ಆಯಿಲ್ ಬೇಕೆಂದಾಗ ಆಟೋ ಚಾಲಕರು ಕುಮಾರ್‍ನ ಮಾತುಗಳನ್ನು ಕೇಳಿ ಬೆಚ್ಚಿಬಿದ್ದಿದ್ದಾರೆ.
ಸ್ಥಳೀಯ ಆಟೋಚಾಲಕರು ನಿನಗೆ ಹಣ ಬೇಕಾ ಅಥವಾ ತಿಂಡಿ ಏನ್ನಾದರೂ ಸೇವಿಸುತ್ತೀಯಾ ಎಂದು ಪ್ರಶ್ನಿಸಿದ್ದಾರೆ. ಆದರೆ ಆತ ನನಗೆ ಹಣ ಬೇಡ, ಕುಡಿಯಲು ಆಯಿಲ್ ಮತ್ತು ಟೀ ಕೊಟ್ಟರೆ ಸಾಕು ಎಂದು ತನ್ನ ಪೂರ್ವಪರ ಮಾತನಾಡುತ್ತಾ, ಬಾಲ್ಯದಲ್ಲಿಯೇ ಯಾರು ಇರಲಿಲ್ಲ. ಬಹಳ ಹಸಿವಾಗುತ್ತಿತ್ತು, ಕಿತ್ತು ತಿನ್ನುವ ಬಡತನದಿಂದಾಗಿ ನಾನು ವೇಸ್ಟ್ ಆಯಿಲ್ ಕುಡಿಯುವುದನ್ನು ರೂಢಿಸಿ ಕೊಂಡಿದ್ದೇನೆ. ನನಗೆ ಬೆಂಗಳೂರಿನ ಹಲವರು ತಿಂಡಿ ತಿನ್ನಿಸಲು ಮುಂದಾದಾಗ ಹೊಟ್ಟೆ ಹುರಿಯಿಂದ ರಕ್ತದ ವಾಂತಿಯಾಯಿತು. ಆದ್ದರಿಂದ ಈವರೆವಿಗೂ ನಾನು ಆಯಿಲ್ ಮತ್ತು ಟೀ ಕುಡಿಯುತ್ತಾ ಯಾರಿಂದ ಏನೂ ಬಯಸದೆ ಕಷ್ಟ ಪಟ್ಟು ಜೀವನ ಸಾಗಿಸುತ್ತಿದ್ದೇನೆ ಎಂದರು.
ಆಟೋ ಚಾಲಕರಾದ ಚಂದ್ರು, ಕಿರಣ್, ರಾಕೇಶ್, ರವಿ, ಪ್ರಶಾಂತ್, ಗಿರೀಶ್, ಹಬೀಬ್ ಸಾಬ್, ಇಂತಿಯಾಜ್ ಮತ್ತಿತರರು ಆಟೋಗಳ ಬಾಡಿಗೆಯಿಂದ ಬಂದ ಹಣದಿಂದ ತಮ್ಮ ಕೈಲಾದ ಸಹಾಯ ಮಾಡಿ, ಬಸ್ ಟಿಕೆಟ್ ಕೊಡಿಸಿ ಕುಮಾರನನ್ನು ತುಮಕೂರಿಗೆ ಕಳುಹಿಸಿ ಕೊಟ್ಟು ಮಾನವೀಯತೆ ಮೆರೆದಿದ್ದಾರೆ.