ಗುಬ್ಬಿ

ವಿಕಲಚೇತನ ಚೇತನತೆ ಅನಿವಾ ಕಾರಣಗಳಿಂದ ಬರುವಂತಹದ್ದು. ಅಂತಹ ಮಕ್ಕಳನ್ನು ಸಮಾನತೆಯಿಂದ ಕಾಣುವುದರ ಜೊತೆಗೆ ಅವರಿಗೆ ಸರ್ಕಾರದಿಂದ ದೊರೆಯುವ ಎಲ್ಲಾ ರೀತಿಯ ಸೌಲಭ್ಯಗಳನ್ನು ಸಮರ್ಪಕವಾಗಿ ತಲುಪಿಸುವ ಮೂಲಕ ಅವರನ್ನು ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಅಭಿವೃದ್ಧಿಪಡಿಸುವತ್ತ ಪ್ರಾಮಾಣಿಕ ಪ್ರಯತ್ನ ಮಾಡುವಂತೆ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಅನುಸೂಯ ನರಸಿಂಹಮೂರ್ತಿ ಕರೆನೀಡಿದರು.
ಪಟ್ಟಣದ ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿಯಲ್ಲಿ ಶಿಕ್ಷಣ ಇಲಾಖೆ ವತಿಯಿಂದ ಏರ್ಪಡಿಸಿದ್ದ 2018-19 ನೇ ಸಾಲಿನ ವೈದ್ಯಕೀಯ ಮೌಲ್ಯಾಂಕನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ಅವರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವತ್ತ ಶಿಕ್ಷಕರು ಚಿಂತನೆ ನಡೆಸಬೇಕಿದೆ ಎಂದು ತಿಳಿಸಿದರು.
ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷೆ ಜಿ.ಕಲ್ಪನ ಮಾತನಾಡಿ ವಿಕಲಚೇತನ ಮಕ್ಕಳಿಗೆ ಸರ್ಕಾರ ವಿಶೇಷವಾದ ಸೌಲಭ್ಯಗಳನ್ನು ನೀಡುತ್ತಿದ್ದು, ಅಂತಹ ವಿದ್ಯಾರ್ಥಿಗಳು ಸರ್ಕಾರದ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಶೈಕ್ಷಣಿಕವಾಗಿ ಪ್ರಗತಿ ಹೊಂದುವಂತೆ ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶಪ್ಪ ಮಾತನಾಡಿ ವಿಕಲಚೇತನ ಮಕ್ಕಳಿಗೆ ವಿಶೇಷ ವೈದ್ಯಕೀಯ ತಪಾಸಣಾ ಶಿಬಿರಗಳನ್ನು ತಜ್ಞ ವೈದ್ಯರಿಂದ ನಡೆಸುವುದರ ಜೊತೆಗೆ ಸಾಧನಾ ಸಲಕರಣೆಗಳನ್ನು ವಿತರಿಸಲಾಗುತ್ತಿದ್ದು ವಿಕಲಚೇತನ ಮಕ್ಕಳು ಇಲಾಖೆಯಿಂದ ನೀಡುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಆದರ್ಶ ವಿದ್ಯಾರ್ಥಿಗಳಾಗಿ ರೂಪುಗೊಳ್ಳುವಂತೆ ತಿಳಿಸಿದರು.
ಇದೆ ಸಂದರ್ಭದಲ್ಲಿ ವಿಕಲಚೇತನ ಮಕ್ಕಳಿಗೆ ವಿವಿಧ ತಜ್ಞವೈದ್ಯರುಗಳಿಂದ ಆರೋಗ್ಯ ತಪಾಸಣೆ ನಡೆಸಿ ಸಾಧನಾ ಸಲಕರಣೆಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಜಿ.ವಿ.ಮೋಹನ್ ಕುಮಾರ್, ಡಿವೈಪಿಸಿ ಹನುಮಾನಾಯ್ಕ, ಎಪಿಸಿ ಲಾವಣ್ಯ, ಡಿಎಸ್‍ಆರ್‍ಟಿಯ ಸುಮತಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಯೋಗಾನಂದ್, ಕ್ಷೇತ್ರ ಸಮನ್ವಯಾಧಿಕಾರಿ ಸಿದ್ದಲಿಂಗಸ್ವಾಮಿ, ಬಿಐಇಆರ್‍ಟಿ ಎ.ವಿ.ಮಲ್ಲಿಕಾರ್ಜುನ್, ವೀರಣ್ಣ, ವಿಜಯಕುಮಾರ್, ಪ್ರಭಾಕರ್, ಸಿಆರ್‍ಪಿ ಜಗದೀಶ್ ಸೇರಿದಂತೆ ಶಿಕ್ಷಣ ಸಂಯೋಜಕರು, ಬಿಆರ್‍ಪಿಗಳು ಭಾಗವಹಿಸಿದ್ದರು.
