ಕಸ ವಿಂಗಡಣೆಗೆ ಕೋರಿದ್ದಕ್ಕೆ ಚೂರಿ ತೋರಿಸಿದ ಭೂಪ!

ತುಮಕೂರು
      ಮನೆ-ಮನೆಗಳಿಂದ ಕಸ ಸಂಗ್ರಹಿಸುವ ಸಿಬ್ಬಂದಿಯು ಮನೆಯೊಂದರ ಬಳಿ “ಹಸಿ ಕಸ ಮತ್ತು ಒಣ ಕಸವನ್ನು ವಿಂಗಡಿಸಿ ನೀಡುವಂತೆ” ಮನವಿ ಮಾಡಿದಾಗ, ಆ ಮನೆಯ ವ್ಯಕ್ತಿಯು ಸಿಟ್ಟಿಗೆದ್ದು ಚಾಕು ತೋರಿಸಿ ಬೆದರಿಸಿರುವ ಆತಂಕಕಾರಿ ಘಟನೆ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
         ತುಮಕೂರು ನಗರದ 5 ನೇ ವಾರ್ಡ್ ವ್ಯಾಪ್ತಿಯ ಕ್ರಿಶ್ಚಿಯನ್ನರ ಬೀದಿ ಬಳಿ ಕಳೆದ ವಾರ (ಏಪ್ರಿಲ್ 27) ಬೆಳ್ಳಂಬೆಳಗ್ಗೆ 8 ಗಂಟೆಯಲ್ಲಿ ಇಂತಹುದೊಂದು ವಿಚಿತ್ರ ಘಟನೆ ಜರುಗಿದ್ದು, ಈ ಪ್ರಸಂಗವು ಪಾಲಿಕೆ ಸಿಬ್ಬಂದಿಯನ್ನು ವಿಚಲಿತಗೊಳಿಸಿದೆಯೆಂದು ಮೂಲಗಳಿಂದ ತಿಳಿದಿದೆ.
       ಕಳೆದ ವಾರ ಎಂದಿನಂತೆ ಮನೆ-ಮನೆಗಳಿಂದ ಕಸವನ್ನು ಸಂಗ್ರಹಿಸುವ ಆಟೋ ಟಿಪ್ಪರ್ ಇಲ್ಲಿನ ಮನೆಯೊಂದರ ಬಳಿ ಕಸ ಸಂಗ್ರಹಕ್ಕಾಗಿ ತೆರಳಿದೆ. ಆ ಮನೆಯವರು ತಮ್ಮ ಮನೆಯಲ್ಲಿ ಸಂಗ್ರಹಿಸಿದ್ದ ಕಸವನ್ನು ನೀಡಿದ್ದಾರೆ. ಆಗ ಆಟೋ ಟಿಪ್ಪರ್ ಚಾಲಕ “ಇನ್ನು ಮುಂದೆ ಕಸ ನೀಡುವಾಗ ಹಸಿ ಕಸ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ವಿಂಗಡಿಸಿ ಕೊಡಿ. ಇದರಿಂದ ಕಸ ವಿಲೇವಾರಿಗೆ ಅನುಕೂಲವಾಗುತ್ತದೆ” ಎಂದು ಕೋರಿದ್ದಾರೆ.
         ಇದರಿಂದ ಸಿಟ್ಟಿಗೆದ್ದ ಆ ಮನೆಯ ವ್ಯಕ್ತಿಯು “ನಾವೇಕೆ ಕಸವನ್ನು ವಿಂಗಡಣೆ ಮಾಡಿಕೊಡಬೇಕು?” ಎಂದು ಚಾಲಕನ ಜೊತೆ ವಾಗ್ವಾದಕ್ಕಿಳಿದಿದ್ದಾರೆ. ಕೊನೆಗೆ ಸಿಟ್ಟಿಗೆದ್ದು “ನಾನು ಯಾರು ಗೊತ್ತಾ? ಮೂಲತಃ ಯಾವ ಬಡಾವಣೆಯವನು ಗೊತ್ತಾ?” ಎನ್ನುತ್ತ ಆ ಚಾಲಕನಿಗೆ ಚಾಕುವನ್ನು ತೋರಿಸಿ ಬೆದರಿಸಿದ್ದಾರೆ ಎಂದು ಹೇಳಲಾಗುತ್ತಿದೆ.
        ಈ ವಿಷಯ ತಿಳಿಯುತ್ತಿದ್ದಂತೆಯೇ ಪಾಲಿಕೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಸ್ಥಿತಿಯನ್ನು ತಿಳಿಗೊಳಿಸಿದರೆನ್ನಲಾಗಿದೆ.
ಶೇ.70 ರಷ್ಟು ವಿಂಗಡಣೆ
        “ತುಮಕೂರು ನಗರದಲ್ಲಿ ಪ್ರತಿನಿತ್ಯ 100 ರಿಂದ 110 ಟನ್‍ಗಳಷ್ಟು ಕಸ ಸಂಗ್ರಹವಾಗುತ್ತಿದೆ. ಇದರಲ್ಲಿ ಪ್ರಸ್ತುತ ಶೇ. 65 ರಿಂದ 70 ರಷ್ಟು ವಿಂಗಡಣೆಗೊಂಡಿರುವ ಕಸವೇ ದೊರಕುತ್ತಿದೆ. ಪ್ರತಿನಿತ್ಯ ಸಂಗ್ರಹವಾಗುವ ಕಸದಲ್ಲಿ 8 ರಿಂದ 10 ಟನ್‍ಗಳಷ್ಟು ಒಣ ಕಸ ಇರುತ್ತದೆ. ವಿಂಗಡಿತ ಕಸ ದೊರೆತಷ್ಟೂ ಅಜ್ಜಗೊಂಡನಹಳ್ಳಿಯ `ಘನತ್ಯಾಜ್ಯ ವಿಲೇವಾರಿ ಘಟಕ’ದಲ್ಲಿ ಕಸವನ್ನು ವಿಲೇವಾರಿ ಮಾಡುವುದು ಸುಲಭವಾಗುತ್ತದೆ.
 
          ಹಸಿಕಸವನ್ನು ಕ್ಷಿಪ್ರಗತಿಯಲ್ಲಿ ಗೊಬ್ಬರವನ್ನಾಗಿ ಪರಿವರ್ತಿಸಬಹುದು. ಪುನರ್ ಬಳಕೆಗೆ ಸಾಧ್ಯವಿರುವ ಒಣಕಸವನ್ನು ವೈಜ್ಞಾನಿಕವಾಗಿ ವಿಂಗಡಿಸಿಕೊಂಡು ಪುನರ್‍ಬಳಕೆಗೆ ತೆಗೆದಿಡಬಹುದು” ಎಂದು ಪಾಲಿಕೆಯ ಮೂಲಗಳು ಅಭಿಪ್ರಾಯಪಡುತ್ತವೆ.
“ಮನೆ-ಮನೆಗಳಲ್ಲೂ ಒಣಕಸ ಮತ್ತು ಹಸಿ ಕಸವನ್ನು ವಿಂಗಡಿಸಿ ಕೊಡುವುದು ತುಂಬ ಸಹಕಾರಿಯಾಗುತ್ತದೆ. ಸಾಮಾನ್ಯವಾಗಿ ಅಡುಗೆ ಮನೆ ತ್ಯಾಜ್ಯವೇ ಹೆಚ್ಚಾಗಿರುವ ಹಸಿ ಕಸವೇ ಅಧಿಕವಾಗಿರುತ್ತದೆ.  ಒಣಕಸ ಕಡಿಮೆಯಿರುತ್ತದೆ.
 
           ಎರಡನ್ನೂ ಸೇರಿಸಿ ಕೊಟ್ಟರೆ, ಅದನ್ನು ವಿಂಗಡಿಸುವುದು ಕಷ್ಟಸಾಧ್ಯವಾಗುತ್ತದೆ. ಅಷ್ಟೇ ಅಲ್ಲದೆ ಒಣಕಸವನ್ನು ಹಸಿಕಸದೊಂದಿಗೆ ಸೇರಿಸಿದರೆ ಕೆಲವೊಮ್ಮೆ ಒಣಕಸವನ್ನು ಪುನರ್‍ಬಳಕೆಗೆ ತೆಗೆದುಕೊಳ್ಳಲಾಗದಂತಹ ಸ್ಥಿತಿಯೂ ತಲೆದೋರುತ್ತದೆ. ಇಂತಹ ಸನ್ನಿವೇಶವನ್ನು ನಿವಾರಿಸಬೇಕಾದರೆ ಮನೆ-ಮನೆಗಳಲ್ಲೇ ವಿಂಗಡಿಸಿಕೊಡುವುದು ಊರಿನ ಹಿತದೃಷ್ಟಿಯಿಂದ ಒಳ್ಳೆಯದು” ಎಂದು ಮೂಲಗಳು ಹೇಳುತ್ತವೆ.
ಇನ್ನೂ ಜಾಗೃತಿ ಅಗತ್ಯ
       “ತುಮಕೂರಿನ ಬಹುತೇಕ ಬಡಾವಣೆಗಳಲ್ಲಿ ಸಾರ್ವಜನಿಕರು ಒಣಕಸ- ಹಸಿಕಸ ಬೇರ್ಪಡಿಸಿ ನೀಡುವ ಮೂಲಕ ಸಹಕರಿಸುತ್ತಿದ್ದಾರೆ. ಆದರೆ ಇದು ಇನ್ನೂ ಪೂರ್ಣಪ್ರಮಾಣದಲ್ಲಿ ಆಗುತ್ತಿಲ್ಲ. ಕೆಲವು ಬಡಾವಣೆಗಳಲ್ಲಿ ಈ ಬಗ್ಗೆ ಅರಿವು, ಜಾಗೃತಿ ಮೂಡಿಸಬೇಕಾಗಿದೆ.
 
         ಕೆಲವರು `ನಾವೇಕೆ ವಿಂಗಡಿಸಬೇಕು? ಇದು ನಮ್ಮ ಕೆಲಸವಲ್ಲ. ಪಾಲಿಕೆಯವರೇ ಮಾಡಿಕೊಳ್ಳಬೇಕು’ ಎನ್ನುತ್ತಾರೆ. ಇನ್ನು ಕೆಲವರು `ಕಸವನ್ನು ವಿಂಗಡಿಸಬೇಕೆಂದರೆ ನಮಗೆ ಹಸಿ ಕಸ ಮತ್ತು ಒಣ ಕಸ ಹಾಕುವ ಎರಡು ಡಬ್ಬಿ ಕೊಡಿ’ ಎಂದು ಕೇಳುತ್ತಿದ್ದಾರೆ. ಮತ್ತೆ ಕೆಲವರು `ನಮ್ಮ ಚಿಕ್ಕಪುಟ್ಟ ಮನೆಗಳಲ್ಲಿ ಎರಡೆರಡು ಕಸದ ಡಬ್ಬಿಗಳನ್ನು ಇಡಲು ಸಾಧ್ಯವಿಲ್ಲ’ ಎನ್ನುತ್ತಿದ್ದಾರೆ. ಇವರಿಗೆಲ್ಲ ಈಗ ಕಸ ವಿಂಗಡಣೆ ಬಗ್ಗೆ ಅರಿವು ಮೂಡಿಸಬೇಕಿದೆ. ರಾಜೀವ್‍ಗಾಂಧಿನಗರ, ದಿಬ್ಬೂರಿನ 1200 ಮನೆಗಳ ಪ್ರದೇಶ, ನಜರಾಬಾದ್, ಕೋತಿತೋಪು ಆಸುಪಾಸು, ಶಾಂತಿನಗರ, ಕುರಿಪಾಳ್ಯ, ಲೇಬರ್ ಕಾಲೋನಿ, ಪೂರ್‍ಹೌಸ್ ಕಾಲೋನಿ ಮೊದಲಾದ ಕಡೆಗಳಲ್ಲಿ ಕಸವನ್ನು ವಿಂಗಡಿಸಿಕೊಡುವ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ” ಎಂದು ಹೇಳಲಾಗುತ್ತಿದೆ.
   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap