ಬಳ್ಳಾರಿ
ಕಂದಾಯ ಇಲಾಖೆಯ ಗ್ರಾಮಲೆಕ್ಕಾಧಿಕಾರಿಗಳ ವೃತ್ತವಾರು ರೈತಸ್ನೇಹಿ ಗ್ರಾಮಲೆಕ್ಕಾಧಿಕಾರಿಗಳ ಕಚೇರಿ ನಿರ್ಮಾಣ ಮಾಡಬೇಕು ಎಂದು ಜಿಪಂ ಅಧ್ಯಕ್ಷೆ ಸಿ.ಭಾರತಿ ತಿಮ್ಮಾರೆಡ್ಡಿ ಅವರು ಹೇಳಿದ್ದಾರೆ.
ಜಲಸಂಪನ್ಮೂಲ,ವೈದ್ಯಕೀಯ ಶಿಕ್ಷಣ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ ಅವರಿಗೆ ಬರೆದ ಪತ್ರದಲ್ಲಿ ಅವರು ಎಲ್ಲ ಇಲಾಖೆಗಳ ಸರಕಾರದ ಯೋಜನೆಗಳು ಗ್ರಾಮಮಟ್ಟದ ಸಾರ್ವಜನಿಕರಿಗೆ ಶಾಶ್ವತವಾಗಿ ದೊರೆಯಲು ರೈತಸ್ನೇಹಿ ಗ್ರಾಮಲೆಕ್ಕಾಧಿಕಾರಿಗಳ ಕಚೇರಿ ನಿರ್ಮಾಣ ಮಾಡುವ ಯೋಜನೆ ಜಾರಿಗೊಳಿಸಬೇಕಾದ ಅಗತ್ಯತೆ ಇದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಈ ಯೋಜನೆ ಯಶಸ್ವಿಯಾಗಿ ಜಾರಿಯಾಗಲು ಗ್ರಾಮಲೆಕ್ಕಾಧಿಕಾರಿಗಳ ವೃತ್ತವಾರು ಈ ಕಚೇರಿ ನಿರ್ಮಾಣವಾಗಬೇಕಿದೆ.
ಒಬ್ಬ ಗ್ರಾಮಲೆಕ್ಕಾಧಿಕಾರಿ ಸದಾ ಗ್ರಾಮೀಣ ಭಾಗದ ಗ್ರಾಮದ ಸಾರ್ವಜನಿಕರೊಂದಿಗೆ ನಿರಂತರ ಸಂಪರ್ಕ ಹೊಂದಿದವರಾಗಿದ್ದು, ಇವರಿಗೆ ಗ್ರಾಮದ ಬಗ್ಗೆ ಪರಿಪೂರ್ಣ ಮಾಹಿತಿ ಮತ್ತು ಗ್ರಾಮದ ಬಗ್ಗೆ ನಿರ್ಧಿಷ್ಟ ಯೋಜನೆ ಇರುತ್ತದೆ ಎಂಬುದು ನಮ್ಮ ನಂಬಿಕೆ ಎಂದು ಅವರು ಹೇಳಿದ್ದಾರೆ.
ಏಕೆಂದರೇ ಈಗಲೂ ಕೂಡ ಸರಕಾರದ ಯೋಜನೆಗಳು ಗ್ರಾಮಲೆಕ್ಕಾಧಿಕಾರಿಗಳ ಮುಖೇನ ಜಾರಿ ಆಗುತ್ತಿರುವುದು ನಮೆಗಲ್ಲರಿಗೂ ತಿಳಿದಿರುವ ಸಂಗತಿ. ಆ ಕಾರಣ ಗ್ರಾಮಲೆಕ್ಕಾಧಿಕಾರಿಗಳ ಪ್ರತಿ ವೃತ್ತಗಳಲ್ಲಿ ಒಂದು ಸುಸಜ್ಜಿತ ರೈತಸ್ನೇಹಿ ಗ್ರಾಮಲೆಕ್ಕಾಧಿಕಾರಿಗಳ ಕಚೇರಿ ನಿರ್ಮಾಣ ಮಾಡಿ ಗ್ರಾಮಮಟ್ಟದ ಸಾರ್ವಜನಿಕರಿಗೆ ದೊರೆಯಬಹುದಾದ ಇತರೆ ಎಲ್ಲ ಇಲಾಖೆಗಳ ಸೇವೆಗಳನ್ನು ಈ ಕಚೇರಿಗಳಲ್ಲಿ ಅರ್ಜಿ ಹಾಕುವಂತೆ ಮಾಡಿ ಗ್ರಾಮಮಟ್ಟದಲ್ಲಿ ಸ್ಥಾನಿಕ ವಿಚಾರಣೆ ಮಾಡಿ, ಸಂಬಂಧಿಸಿದ ಇಲಾಖೆಗೆ ರವಾನೆ ಮಾಡುವ ಮುಖೇನ, ವೃತ್ತದ ವ್ಯಾಪ್ತಿಯ ಸಾರ್ವಜನಿಕ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಬಹುದು ಎಂದು ಅವರು ಹೇಳಿದ್ದಾರೆ.
ಪ್ರಾಯೋಗಿಕವಾಗಿ ಬಳ್ಳಾರಿ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡು ಈ ಯೋಜನೆ ಜಾರಿಗೊಳಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ ವೈಯಕ್ತಿಕ ಶುದ್ಧ ಕುಡಿಯುವ ನೀರಿನ ಯಂತ್ರ ಯೋಜನೆ ಜಾರಿಗೊಳಿಸಿ: ಶುದ್ಧ ಕುಡಿಯುವ ನೀರಿನ ಘಟಕದ ಬದಲು ವೈಯಕ್ತಿಕ ಶುದ್ಧ ಕುಡಿಯುವ ನೀರಿನ ಯಂತ್ರ ಯೋಜನೆ ಜಾರಿಗೊಳಿಸಬೇಕು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಬರೆದ ಪತ್ರದಲ್ಲಿ ಜಿಪಂ ಅಧ್ಯಕ್ಷೆ ಸಿ.ಭಾರತಿ ತಿಮ್ಮಾರೆಡ್ಡಿ ಅವರು ವಿನಂತಿಸಿಕೊಂಡಿದ್ದಾರೆ.
ರಾಜ್ಯದಲ್ಲಿ ಸುಮಾರು 18098 ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ಇದರಲ್ಲಿ ಹಾಲಿ ಅರ್ಧದಷ್ಟು ಘಟಕಗಳು ನೀರಿನ ಸಮಸ್ಯೆ, ಏಜೆನ್ಸಿ ಸಮಸ್ಯೆ, ನಿರ್ವಹಣೆ ಮತ್ತು ವಿದ್ಯುತ್ ಸಮಸ್ಯೆಗಳಿಂದ ಅನೇಕ ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲ. ಇದನ್ನು ಸರಿದೂಗಿಸಲು ಹಲವಾರು ಕ್ರಮಗಳನ್ನು ಕೈಗೊಂಡರೂ ವ್ಯವಸ್ಥಿತವಾಗಿ ಘಟಕಗಳ ನಿರ್ವಹಣೆ ಸಾಧ್ಯವಾಗುತ್ತಿಲ್ಲ.ಇದರಿಂದ ಸಾರ್ವಜನಿಕರಿಗೆ ನಿರಂತರವಾಗಿ ತೊಂದರೆಯಾಗುತ್ತಿದೆ.
ಆದ ಕಾರಣ ಈ ಎಲ್ಲ ಸೂಕ್ಷ್ಮ ವಿಷಯಗಳನ್ನು ಗಮನಿಸಿ ಶುದ್ಧ ಕುಡಿಯುವ ನೀರಿನ ಘಟಕದ ಬದಲು ಪ್ರತಿ ಕುಟುಂಬಕ್ಕೆ ವೈಯಕ್ತಿಕ ಶುದ್ಧ ಕುಡಿಯುವ ನೀರಿನ ಯಂತ್ರ ಪೂರೈಕೆ ಮಾಡುವ ಯೋಜನೆ ಜಾರಿಗೊಳಿಸಬೇಕು. ಪ್ರಾಯೋಗಿಕವಾಗಿ ಬಳ್ಳಾರಿ ಜಿಲ್ಲೆಯನ್ನು ಆಯ್ಕೆಮಾಡಿಕೊಂಡು ಕಾರ್ಯಗತಗೊಳಿಸುವ ಕೆಲಸ ಮಾಡಬೇಕು ಎಂದು ಅವರು ಮನವಿ ಮಾಡಿದ್ದಾರೆ.
ವೈಯಕ್ತಿಕ ಶುದ್ಧ ಕುಡಿಯುವ ನೀರಿನ ಯಂತ್ರಗಳ ಯೋಜನೆ ಜಾರಿಯಿಂದ ಸರಕಾರಿ ಜಮೀನು ಉಳಿತಾ, ವಿದ್ಯುತ್,ನಿರ್ವಹಣಾ, ಪೈಪ್‍ಲೈನ್ ಉಳಿತಾಯ, ಪಂಪ್‍ಅಪರೇಟರ್ ಕೂಲಿ,ಕೊಳವೆಬಾವಿ ಕೊರೆಸುವಿಕೆ, ಶುದ್ಧೀಕರಿಸಿದ ನೀರು ಮರುಬಳಕೆ ಸೇರಿದಂತೆ ಅನೇಕ ಉಪಯೋಗಗಳು ಆಗಲಿವೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
