ಚಳ್ಳಕೆರೆ
ತಾಲ್ಲೂಕಿನ ಹಿರೇಹಳ್ಳಿಯ ಬಾಣಂತಿ ಶಾರದಮ್ಮ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪತ್ರಿಕೆ ವರದಿಗೆ ಇಲ್ಲಿನ ತಾಲ್ಲೂಕು ಆಡಳಿತ ಸಕರಾತ್ಮಕವಾಗಿ ಸ್ಪಂದಿಸಿದ್ದು, ಪೊಲೀಸ್, ಕಂದಾಯ ಹಾಗೂ ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ನಾಪತ್ತೆ ಯಾಗಿರುವ ಮಲ್ಲಿಕಾರ್ಜುನನ ಬಗ್ಗೆ ಮಾಹಿತಿ ಸಂಗ್ರಹಿಸಿದರು.
ಹಿರೇಹಳ್ಳಿ ಗ್ರಾಮದ ಶಾರದಮ್ಮ ಎರಡನೇ ಬಾರಿ ಗಂಡು ಮಗುವಿಗೆ ಜನ್ಮ ನೀಡಿ ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಕಳೆದ ಆರು ತಿಂಗಳಿನಿಂದ ಗಂಡ ಮಲ್ಲಿಕಾರ್ಜುನ ನಾಪತ್ತೆ ಯಾಗಿದ್ದು, ಮಲ್ಲಿಕಾರ್ಜುನ ತಂದೆ ತಾಯಿ ಶಾರದಮ್ಮ ಮತ್ತು ಮಗುವನ್ನು ಮನೆಗೆ ಸೇರಿಸದೆ ಮನೆಯಿಂದ ಹೊರಗಹಾಕಿದ್ದು, ಆಕೆ ಆಸ್ಪತ್ರೆ ಆವರಣದಲ್ಲೇ ಆಶ್ರಯ ಪಡೆದ ಹಿನ್ನೆಲೆಯಲ್ಲಿ ಪತ್ರಿಕೆ ವಿವರವಾದ ವರದಿಯನ್ನು ಸೋಮವಾರದ ಸಂಚಿಕೆಯಲ್ಲಿ ಪ್ರಕಟಿಸಿತ್ತು.
ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ್ ಮಾತನಾಡಿ, ಕಂದಾಯ ಅಧಿಕಾರಿ ಮತ್ತು ಅಲ್ಲಿನ ಗ್ರಾಮ ಲೆಕ್ಕಾಧಿಕಾರಿಗಳಿಗೆ ಸೂಚನೆ ನೀಡಿದ್ದು, ಮಲ್ಲಿಕಾರ್ಜುನನ ಪೋಷಕರೊಂದಿಗೆ ಚರ್ಚೆ ನಡೆಸಿದ್ದಾರೆ. ಮಲ್ಲಿಕಾರ್ಜುನನ್ನು ಕೂಡಲೇ ಪತ್ತೆ ಹಚ್ಚುವಂತೆ ಈಗಾಗಲೇ ಪೊಲೀಸ್ ಅಧಿಕಾರಿಗಳಿಗೂ ಸಹ ಮಾಹಿತಿ ನೀಡಲಾಗಿದೆ ಎಂದರು.
ಡಿವೈಎಸ್ಪಿ ಎಸ್.ರೋಷನ್ ಜಮೀರ್ ಮಾಹಿತಿ ನೀಡಿ, ಮಲ್ಲಿಕಾರ್ಜುನನ ತಂದೆ ದುರ್ಗಪ್ಪನನ್ನು ವಿಚಾರಿಸಿದ್ದು, ಇನ್ನೂ ಎರಡ್ಮೂರು ದಿನಗಳೊಳಗೆ ಮಲ್ಲಿಕಾರ್ಜುನನ್ನು ಎಲ್ಲಿದ್ದರೂ ಇಲ್ಲಿಗೆ ಕರೆಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು. ತಳಕು ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ತ್ವರಿತಗತಿಯಲ್ಲಿ ಮಲ್ಲಿಕಾರ್ಜುನನ ಪತ್ತೆಗೆ ಕಾರ್ಯನಿರ್ವಹಿಸುತ್ತಿದ್ಧಾರೆಂದರು.
ಸಿಡಿಪಿಒ ಸಿ.ಕೆ.ಗಿರಿಜಾಂಬ, ಸಾಂತ್ವನ ಕೇಂದ್ರದ ಕೌಟುಂಬಿಕ ಸಲಹೆಗಾರ ಸೋಮಶೇಖರ್, ಆಶಾ ಸಹ ಹಿರೇಹಳ್ಳಿ ಎ . ಕೆ . ಕಾಲೋನಿ ಯಲ್ಲಿರುವ ಮಲ್ಲಿಕಾರ್ಜುನನ ಪೋಷಕರ ಮನೆಗೆ ಭೇಟಿ ನೀಡಿ ಬಾಣಂತಿ ಶಾರದಮ್ಮಳಾ ಯೋಗ ಕ್ಷೇಮದ ಬಗ್ಗೆ ಜಾಗೃತೆ ವಹಿಸುವಂತೆ ಸೂಚನೆ ನೀಡಿದ್ದಾರೆ.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಎನ್.ಪ್ರೇಮಸುಧಾ ಸಹ ಅಲ್ಲಿನ ಆಶಾ ಕಾರ್ಯಕರ್ತೆಯರಿಗೆ ಸೂಚನೆ ನೀಡಿ, ಬಾಣಂತಿ ಶಾರದಮ್ಮ ಪ್ರಸ್ತುತ ಸಾರ್ವಜನಿಕ ಆಸ್ಪತ್ರೆಯಲ್ಲಿದ್ದು, ಹಿರೇಹಳ್ಳಿಗೆ ಕರೆತಂದಕೂಡಲೇ ಆಕೆ ಮತ್ತು ಮಗುವಿನ ಆರೋಗ್ಯದ ಬಗ್ಗೆ ಹೆಚ್ಚು ಜಾಗೃತೆ ವಹಿಸುವಂತೆ ತಿಳಿಸಿದ್ಧಾರೆ ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
