ಚಿತ್ರದುರ್ಗ:
ರೈತರ ಸಂಪೂರ್ಣ ಸಾಲ ಮನ್ನ ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಹುಚ್ಚವ್ವನಹಳ್ಳಿ ಮಂಜುನಾಥ್ ಬಣದ ರೈತರು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು.
ಯೂನಿಯನ್ ಪಾರ್ಕಿನಿಂದ ಮೆರವಣಿಗೆ ಮೂಲಕ ಆಗಮಿಸಿದ ಪ್ರತಿಭಟನಾನಿರತ ರೈತರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ದ ಧಿಕ್ಕಾರಗಳನ್ನು ಕೂಗಿದರು.
ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಫೈನಾನ್ಸ್‍ಗಳಲ್ಲಿರುವ ರೈತರ ಯಾವುದೇ ಸಾಲಗಳಿಗೆ ನೋಟಿಸ್ ನೀಡಬಾರದು. ಕೃಷಿ ಸಾಲ, ಬಂಗಾರದ ಮೇಲಿನ ಸಾಲ, ಫೈನಾನ್ಸ್ ಸಾಲ, ಯಂತ್ರಗಳ ಮೇಲಿನ ಸಾಲವನ್ನು ಮನ್ನ ಮಾಡಿ ರೈತರ ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಬೇಕು.
ಹುಲ್ಲುಬನ್ನಿ ಖರಾಬು, ಗೋಮಾಳ, ಫಾರೆಸ್ಟ್ ಜಾಗಗಳಲ್ಲಿ ಉಳುಮೆ ಮಾಡುತ್ತಿರುವ ರೈತರಿಗೆ ಹಕ್ಕುಪತ್ರಗಳನ್ನು ವಿತರಿಸಿ ಸರಿಸಮಾನವಾಗಿ ಬೆಳೆವಿಮೆ ಪಾವತಿಸಬೇಕು.
ಜಿಲ್ಲೆಯಲ್ಲಿ ಸತತ ಬರಗಾಲವಿದ್ದರೂ ಬೆಳೆವಿಮೆ ನೀಡಿರುವುದಿಲ್ಲ. ತ್ವರಿತವಾಗಿ ಎಲ್ಲಾ ರೈತರ ಖಾತೆಗಳಿಗೆ ಬೆಳೆವಿಮೆ ಹಣ ಜಮಾ ಆಗಬೇಕು.
ಸಕಾಲಕ್ಕೆ ಮಳೆ-ಬೆಳೆಯಿಲ್ಲದೆ ಜಿಲ್ಲೆಯ ರೈತರು ಮತ್ತು ಮಕ್ಕಳು ಕೂಲಿ ಹುಡುಕಿಕೊಂಡು ಬೇರೆ ಊರುಗಳಿಗೆ ವಲಸೆ ಹೋಗುತ್ತಿರುವುದನ್ನು ತಡೆದು ಆಯಾ ಗ್ರಾಮ ಪಂಚಾಯಿತಿಗಳಲ್ಲಿ ಉದ್ಯೋಗಖಾತ್ರಿ ಯೋಜನೆಯಡಿಯಲ್ಲಿ ಕೂಲಿ ಕೆಲಸ ನೀಡಬೇಕು.
1942-43 ರಲ್ಲಿ ರೈತರಿಗೆ ಸಾಗುವಳಿ ಚೀಟಿ ಕೊಡುವ ಅಧಿಕಾರ ಸರ್ಕಾರಕ್ಕಿತ್ತು. ಆದರೆ ಇದುವರೆವಿಗೂ ಸರಿಯಾಗಿ ಯಾವುದೇ ರೈತರಿಗೆ ತಲುಪಿಲ್ಲ. ಕೂಡಲೇ ಸಾಗುವಳಿ ಪತ್ರ ಮತ್ತು ಬೆಳೆವಿಮೆಯನ್ನು ನೀಡಬೇಕು.
ಜಿಲ್ಲೆಯ ಎಲ್ಲಾ ಹೋಬಳಿ ಮಟ್ಟದಲ್ಲಿ ಖರೀಧಿ ಕೇಂದ್ರಗಳನ್ನು ತೆರೆದು ರೈತರ ಜೀವನವನ್ನು ಸುಧಾರಿಸಬೇಕು. ಬಿಬಿ.ಹೆಚ್.ವೇದಾಂತ, ಜಾನ್ ಮೈನ್ಸ್‍ಗಳಲ್ಲಿ ರೈತರ ಮಕ್ಕಳಿಗೆ ಕೆಲಸ ಕೊಡುವ ಕುರಿತು ತಕ್ಷಣ ಕ್ರಮ ತೆಗೆದುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಮೇನ್‍ಗೇಟ್ ಬಳಿ ಎಲ್ಲಾ ರೀತಿಯ ವಾಹನಗಳನ್ನು ತಡೆದು ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದ ಪ್ರತಿಭಟನಾನಿರತ ರೈತರು ಸರ್ಕಾರಿ ಇಲಾಖೆಗಳಲ್ಲಿ ರೈತರಿಗೆ ಸತಾಯಿಸದೆ ಕೆಲಸಗಳನ್ನು ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ರೈತ ಮುಖಂಡರುಗಳಾದ ಈ.ಸಿ.ಬೋರಯ್ಯ, ಹೆಚ್.ಬಸವಲಿಂಗಪ್ಪ, ಹೆಚ್.ಶಿವಮೂರ್ತಿ, ಲೋಲಾಕ್ಷಮ್ಮ, ಟಿ.ಸೂರಪ್ಪ, ವೈ.ಕೃಷ್ಣಮೂರ್ತಿ, ರಾಜಪ್ಪ, ನಾಗರಾಜ್, ಮೋನೇಶ್, ಬಾಲರಾಜ್ ಪಾಳ್ಯ, ಸಿರಿಗೆರೆ ಶಿವಣ್ಣ, ನೆಲ್ಲಿಕಟ್ಟೆ ಅಂಜಿನಪ್ಪ, ಬೋಸಯ್ಯ, ಬಿ.ಎಲ್.ವೆಂಕಟೇಶ್ ಇನ್ನು ಮುಂತಾದವರು ಪ್ರತಿಭಟನೆಯಲ್ಲಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
