ದಾವಣಗೆರೆ:
ಇಲ್ಲಿನ ಪಿಬಿ ರಸ್ತೆಯಲ್ಲಿರುವ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರವು ನಿರ್ಮಿಸಲುದ್ದೇಶಿಸಿರುವ ಮಾಜಿ ಮುಖ್ಯಮಂತ್ರಿ ದೇವರಾಜ ಅರಸುರವರ ಕಂಚಿನ ಪುತ್ಥಳಿಯನ್ನು ಬೇರೆಡೆಗೆ ಸ್ಥಳಾಂತರಿಸಬೇಕೆಂದು ಆಗ್ರಹಿಸಿ, ಜಿಲ್ಲಾ ಕುರುಬರ ಯುವ ಘಟಕದಿಂದ ಮಂಗಳವಾರ ಡೂಡಾ ಆಯುಕ್ತ ಆದಪ್ಪನವರಿಗೆ ಮನವಿ ಸಲ್ಲಿಸಲಾಯಿತು.
ದಾವಣಗೆರೆ ಸಿಟಿ, ಪಿ.ಬಿ. ರಸ್ತೆಯಲ್ಲಿರುವ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಈಗಾಗಲೇ ಸಂಗೊಳ್ಳಿ ರಾಯಣ್ಣನವರ ಪುತ್ಥಳಿಯನ್ನು ಸ್ಥಾಪಿಸಿದ್ದು, ಈ ಬಗ್ಗೆ ದಾವಣಗೆರೆ ಮಹಾನಗರ ಪಾಲಿಕೆಯಲ್ಲಿಯೂ ಸಹ ತೀರ್ಮಾನ ತೆಗೆದುಕೊಂಡಿರುತ್ತಾರೆ. ಈಗಾಗಲೇ ಜನರಿಗೂ ಸಹ ಸಂಗೊಳ್ಳಿ ರಾಯಣ್ಣ ವೃತ್ತವೆಂದೇ ಪರಿಚಿತವಾಗಿರುತ್ತದೆ.
ಆದರೆ, ಈಗ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅದೇ ವೃತ್ತದಲ್ಲಿ ಮಾನ್ಯ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸುರವರ ಪ್ರತಿಮೆಯನ್ನು ಅನಾವರಣಗೊಳಿಸಲು ಸಿದ್ಧತೆ ನಡೆದಿದೆ. ಆದರೆ, ಒಂದೇ ವೃತ್ತದಲ್ಲಿ ಎರಡು ಪ್ರತಿಮೆಗಳನ್ನು ಸ್ಥಾಪಿಸುವುದರಿಂದ ಜನರಿಗೆ ಅನಾವಶ್ಯಕ ಗೊಂದಲ ಉಂಟಾಗಲಿದೆ ಎಂದು ಮನವಿಪತ್ರದಲ್ಲಿ ತಿಳಿಸಲಾಗಿದೆ.
ಇಲ್ಲಿ ಅರಸು ಅವರ ಪುತ್ಥಳಿ ಸ್ಥಾಪನೆ ಮಾಡುವುದರಿಂದ ಈಗಾಗಲೇ ಪರಿಚಿತವಾಗಿರುವ ಮತ್ತು ಮಹಾನಗರ ಪಾಲಿಕೆಯಲ್ಲಿ ತೀರ್ಮಾನಿಸಲಾಗಿರುವ ಸಂಗೊಳ್ಳಿ ರಾಯಣ್ಣನವರ ವೃತ್ತವೆಂಬ ಹೆಸರಿಗೆ ಮತ್ತು ಈ ಮಹಾನ್ ಸ್ವಾತಂತ್ರ್ಯ ಹೋರಾಟಗಾರನಿಗೆ ಅವಮಾನ ಮಾಡಿದಂತಾಗುತ್ತದೆ. ಆದ್ದರಿಂದ ವೃಥಾ ಗಲಾಟೆ ಗದ್ದಲಗಳಿಗೆ ಅವಕಾಶ ಮಾಡಿಕೊಡದೇ, ದೇವರಾಜ ಅರಸು ಅವರ ಪುತ್ಥಳಿಯನ್ನು ಬೇರೊಂದು ಸೂಕ್ತ ಸ್ಥಳಕ್ಕೆ ಸ್ಥಳಾಂತರ ಮಾಡಬೇಕೆಂದು ಮನವಿ ಪತ್ರದಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಯುವ ಘಟಕದ ಗೌರವಾಧ್ಯಕ್ಷ ಜೆ.ಎನ್. ಶ್ರೀನಿವಾಸ್, ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಕಾರ್ಯಾಧ್ಯಕ್ಷ ಹಾಲೇಕಲ್ ಎಸ್.ಟಿ. ಅರವಿಂದ್, ಪ್ರಧಾನ ಕಾರ್ಯದರ್ಶಿ .ಕೆ. ಪರಶುರಾಮ್, ಜಿಲ್ಲಾ ಕುರುಬರ ವಿದ್ಯಾವರ್ಧಕ ಸಂಘದ ಜಿಲ್ಲಾಧ್ಯಕ್ಷ ಬಿ. ದಿಳ್ಳೆಪ್ಪ, ಬಿ. ರೇವಣಸಿದ್ದಪ್ಪ, ಎಲ್.ಬಿ. ಭೈರೇಶ್, ತ್ಯಾವಣಗಿ ರುದ್ರಪ್ಪ, ಲೋಕಿಕೆರೆ ಪ್ರದೀಪ್, ಲಕ್ಕಪ್ಪ, ಬೀರೇಶ್, ಎಸ್.ಎಸ್. ಗಿರೀಶ್, ನವೀನ್‍ಕುಮಾರ್, ಬಿ. ಲಿಂಗರಾಜು, ಬಾಡದ ರವಿ ಸೇರಿದಂತೆ ಜಿಲ್ಲಾ ಕುರುಬರ ಯುವ ಘಟಕದ ಪದಾಧಿಕಾರಿಗಳು ಸಮಾಜದ ಮುಖಂಡರುಗಳು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ