ದಾವಣಗೆರೆ:
ವಿಷೇಶ ವರದಿ:ವಿನಾಯಕ ಪೂಜಾರ್
ವಾಹನಗಳ ಸಂಖ್ಯೆ ಹೆಚ್ಚಾದ್ದಂತೆ, ಸಂಚಾರ ನಿಯಮ ಉಲ್ಲಂಘಿಸುವವರ ಸಂಖ್ಯೆಯೂ ದಿನೇ, ದಿನೇ ಹೆಚ್ಚಾಗುತ್ತಿದ್ದು, ಕಳೆದ ಆರೇ ತಿಂಗಳಲ್ಲಿ ಸಂಚಾರಿ ಪೊಲೀಸರು, ನಿಯಮ ಉಲ್ಲಂಘಿಸುವ ಚಾಲಕರ ವಿರುದ್ಧ 28,507 ಪ್ರಕರಣಗಳನ್ನು ದಾಖಲಿಸಿಕೊಂಡು, 37,33,000 ರೂ. ದಂಡ ವಿಧಿಸಿದ್ದಾರೆ.
ಹೌದು… ಜಿಲ್ಲೆಯಲ್ಲಿ ದ್ವಿ ಚಕ್ರ ವಾಹನ, ಆಟೋ ರಿಕ್ಷಾ, ನಾಲ್ಕು ಚಕ್ರ ವಾಹನ, ಕೆಎಸ್‍ಆರ್‍ಟಿಸಿ ಹಾಗೂ ಖಾಸಗಿ ಬಸ್‍ಗಳು ಸೇರಿ ಒಟ್ಟು 4,81,839 ವಾಹನಗಳಿದ್ದು, ದಿನದಿಂದ ದಿನಕ್ಕೆ ವಾಹನಗಳ ನೋಂದಣಿ ಸಂಖ್ಯೆಯು ಹೆಚ್ಚುತ್ತಿದೆ. ಹೀಗಾಗಿ ರಸ್ತೆಗಳಲ್ಲಿ ವಾಹನ ದಟ್ಟಣೆಯು ಹೆಚ್ಚಾಗುವುದರ ಜೊತೆಗೆ ಸಂಚಾರಿ ನಿಯಮ ಉಲ್ಲಂಘಿಸುವವರಿಗೇನೂ ಕೊರತೆ ಇಲ್ಲ.
ಪೊಲೀಸ್ ಇಲಾಖೆ ಹಾಗೂ ಸಾರಿಗೆ ಇಲಾಖೆ ಸಂಚಾರ ನಿಯಮ ಉಲ್ಲಂಘಿಸದಂತೆ ಸಾರ್ವಜನಿಕರಲ್ಲಿ ರಸ್ತೆ ಸುರಕ್ಷಾ ಸಪ್ತಾಹದ ಅಡಿಯಲ್ಲಿ ಜನ ಜಾಗೃತಿ ಜಾಥಾ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ ಅರಿವು ಮೂಡಿಸುತ್ತಿದ್ದರೂ, ಕೆಲವರು ಪೊಲೀಸರು ಹಾಗೂ ಸಾರಿಗೆ ಅಧಿಕಾರಿಗಳ ಮಾತನ್ನು ಬಲ ಕಿವಿಯಿಂದ ಕೇಳಿ, ಎಡ ಕಿವಿಯ ಮೂಲಕ ತಲೆಯಿಂದ ಹೊರ ಹಾಕುತ್ತಿದ್ದಾರೆ. ಹೀಗಾಗಿ ದಿನದಿಂದ ದಿನಕ್ಕೆ ಸಂಚಾರ ನಿಯಮ ಉಲ್ಲಂಘಿಸುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ.
ದಂಡ ವಿಧಿಸಿ ಸಂಚಾರ ನಿಯಮ ಉಲ್ಲಂಘಿಸುವವರಿಗೆ ಎಚ್ಚರಿಕೆಯ ಗಂಟೆ ಬಾರಿಸಬೇಕೆಂಬ ಉದ್ದೇಶದಿಂದ ಸಂಚಾರಿ ಠಾಣೆಗಳ ಪೊಲೀಸರು, ಹೆಚ್ಚು ವಾಹನಗಳು ಸಂಚರಿಸುವ ದಾವಣಗೆರೆಯ ಪಿಬಿ ರಸ್ತೆಯಲ್ಲಿನ ಎಸಿ ಕಚೇರಿ, ರಾಜನಹಳ್ಳಿ ಹನುಮಂತಪ್ಪ ಛತ್ರ, ಅರುಣಾ ವೃತ್ತ, ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ, ಹದಡಿ ರಸ್ತೆಯಲ್ಲಿನ ವಿಮಾನ ಮಟ್ಟಿ ಬಳಿ (ವಾಣಿ ರೈಸ್ ಮಿಲ್) ವಿದ್ಯಾರ್ಥಿ ಭವನ, ವಿದ್ಯಾನಗರ ರಸ್ತೆಯಲ್ಲಿನ ಜೆಜೆಎಂ ವೈದ್ಯಕೀಯ ಕಾಲೇಜು, ಗುಂಡಿ ವೃತ್ತ, ಶಾಮನೂರು ರಸ್ತೆ, ಬಸವ ನಗರ ಪೊಲೀಸ್ ಠಾಣೆ ಎದುರಿನ ರಸ್ತೆ, ಅಶೋಕ ಚಿತ್ರ ಮಂದಿರದ ಬಳಿ ಸೇರಿದಂತೆ ಹಲವು ಪ್ರಮುಖ ವೃತ್ತ,
ರಸ್ತೆಗಳಲ್ಲಿ ತಂಡೋಪ ತಂಡವಾಗಿ ನಿಂತು ಬೈಕ್ ಸೇರಿದಂತೆ ಇತರೆ ವಾಹನಗಳನ್ನು ತಡೆದು ದಾಖಲೆಗಳನ್ನು ಪರಿಶೀಲಿಸುವುದು, ಸರಿಯಾದ ದಾಖಲೆ( ಡಿಎಲ್, ಇನ್ಸೂರೆನ್ಸ್, ಆರ್‍ಸಿ ಬುಕ್‍ನ ಸ್ಮಾರ್ಟ್ ಕಾರ್ಡ್, ಎಫ್‍ಸಿ)ಗಳಿಲ್ಲದಿದ್ದರೆ ಹಾಗೂ ಹೆಲ್ಮೇಟ್ ಧರಿಸದೇ ಇದ್ದರೆ, ನಂಬರ್ ಪ್ಲೇಟ್‍ನಲ್ಲಿ ದೋಷ ಕಂಡು ಬಂದರೆ ದಂಡ ವಿಧಿಸುತ್ತಿದ್ದಾರೆ.
ಆದರೆ, ಕೆಲ ವಾಹನ ಸವಾರರು ದಂಡ ಕಟ್ಟಿ, ಸಂಚಾರಿ ನಿಯಮ ಪಾಲಿಸಲು ಮುಂದಾದರೆ, ಇನ್ನೂ ಕೆಲವರು ಪೊಲೀಸರು ಹಿಡಿದರೆ ನೋಡೋಣ ಎಂಬ ಬೇಜವಾಬ್ದಾರಿತನದಿಂದ ಸಂಚಾರಿ ನಿಯಮ ಉಲ್ಲಂಘಿಸುತ್ತಿದ್ದಾರೆ. ಇನ್ನೂ ಕೆಲವರಂತೂ ಸಂಚಾರಿ ಪೊಲೀಸರನ್ನು ಕಂಡರೇ, ಕಳ್ಳರಂತೆ ಗಾಡಿ ತಿರುಗಿಸಿಕೊಂಡು ಓಡಿ ಹೋಗುತ್ತಾರೆ. ಇಂತಹ ಕಾರಣಗಳಿಂದಲೇ ರಸ್ತೆ ಅಪಘಾತಗಳು ಸಹ ಆಗುತ್ತಿವೆ.
ಸಂಚಾರ ನಿಯಮ ಉಲ್ಲಂಘಿಸುವವರಿಗೆ ಏನೂ ಕೊರತೆ ಇಲ್ಲ ಎಂಬುದಕ್ಕೆ ಸಂಚಾರಿ ಪೊಲೀಸರು ಕಳೆದ ಆರೇ ತಿಂಗಳಲ್ಲಿ ಅಂದರೆ, 2019ರ ಜನವರಿ 1ರಿಂದ ಜೂನ್ 30ರ ವರೆಗೆ ಸಂಚಾರಿ ನಿಯಮ ಉಲ್ಲಂಘಿಸಿದ ವಾಹನ ಚಾಲಕರ ವಿರುದ್ಧ 28,507 ಪ್ರಕರಣ ದಾಖಲಿಸಿ, 37.33 ಲಕ್ಷ ರೂ. ದಂಡ ವಿಧಿಸಿದೆ. ಇದು ಹಳೇಯ ಪೆನಾಲ್ಟಿಯ ಪ್ರಕಾರ. ಇನ್ನೂ ಪರಿಷ್ಕೃತ ದಂಡದ ಮೊತ್ತಕ್ಕೆ ಹೋಲಿಸಿದರೆ, ಈ ಮೊತ್ತವೂ ಅಂದಾಜು 10 ಕೋಟಿಗೂ ಹೆಚ್ಚಾಗಲಿದೆ ಎನ್ನುತ್ತಾರೆ ಪೊಲೀಸ್ ಅಧಿಕಾರಿಯೊಬ್ಬರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
